Advertisement

ಕಾಡ್ಗಿಚ್ಚು ಹತೋಟಿಗೆ 2 ಹೆಲಿಕಾಪ್ಟರ್‌ ಬಳಕೆ

06:56 AM Feb 27, 2019 | |

ಗುಂಡ್ಲುಪೇಟೆ: ಮೂಲೆಹೊಳೆ ಮತ್ತು ಚಮ್ಮನಹಳ್ಳದ ಎತ್ತರದ ಪ್ರದೇಶಗಳಲ್ಲಿ ಎರಡು ಹೆಲಿಕಾಪ್ಟರ್‌ ಬಳಸಿ ಕಾರ್ಯಾಚರಣೆ ಮಾಡುವುದರೊಂದಿಗೆ ಮಂಗಳವಾರ ಕಾಡ್ಗಿಚ್ಚನ್ನು ಹತೋಟಿಗೆ ತರಲಾಗಿದೆ ಎಂದು ಬಂಡೀಪುರ ಹುಲಿ ಯೋಜನೆ ಪ್ರಭಾರ ನಿರ್ದೇಶಕ ಅಂಬಾಡಿ ಮಾಧವ್‌ ತಿಳಿಸಿದ್ದಾರೆ.

Advertisement

ಕರ್ನಾಟಕ-ತಮಿಳುನಾಡು-ಕೇರಳ ಗಡಿಭಾಗದಲ್ಲಿ ಅಲ್ಪ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿರುವುದರಿಂದ ಅದನ್ನು ನಂದಿಸಲಾಗಿದ್ದು, ಮುಂದಿನ ಎರಡು ದಿನಗಳ ಕಾಲ ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಹೆಲಿಕಾಪ್ಟರ್‌ಗಳನ್ನು ಬಂಡೀಪುರದಲ್ಲಿ ಇರಿಸಿಕೊಳ್ಳಲಾಗುವುದು ಮತ್ತು ಬುಧವಾರ ಪರಿಸ್ಥಿತಿಯನ್ನು ನೋಡಿಕೊಂಡು ಸಫಾರಿ ಆರಂಭಿಸಲಾಗುವುದು ಎಂದರು.

ಈಗಾಗಲೇ ನೂರಾರು ಸ್ವಯಂ ಸೇವಕರು ಮತ್ತು ಎರಡು ದಿನಗಳ ಹೆಲಿಕಾಪ್ಟರ್‌ ಕಾರ್ಯಾಚರಣೆ ಮತ್ತು ಅರಣ್ಯ ಮತ್ತು ಅಗ್ನಿಶಾಮಕ  ಸಿಬ½ಂದಿ ಸತತ ಶ್ರಮದಿಂದ ಬೆಂಕಿಯು ತಹಬದಿಗೆ ಬಂದಿದ್ದು, ಅವರು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿ ಮತ್ತೆರಡು ದಿನಗಳು ಬೆಂಕಿಯ ಕೆಂಡಗಳು ಸಂಪೂರ್ಣವಾಗಿ ನಂದಿಹೋಗುವ ವರೆಗೂ ನಿಗಾ ಇಡಲಾಗುವುದು ಎಂದರು.

ಒಟ್ಟಾರೆಯಾಗಿ ಮೂರು ಸಾವಿರ ಎಕರೆಗಳಷ್ಟು ವನ್ಯ ಸಂಪತ್ತು ನಾಶವಾಗಿದ್ದು, ವನ್ಯಜೀವಿಗಳಿಗೆ ಅಪಾಯವಾಗಿಲ್ಲ. ಕಳೆದ ಡಿಸೆಂಬರ್‌ ನಿಂದಲೇ ಹುಲಿ, ಚಿರತೆ, ಆನೆ, ಜಿಂಕೆ ಮತ್ತಿತರೆ ದೊಡ್ಡಪ್ರಾಣಿಗಳು ಪಕ್ಕದ ಮಧುಮಲೆ, ವೈನಾಡು, ಕಬಿನಿ ಹಿನ್ನೀರಿನ ಕಡೆ ವಲಸೆ ಹೋಗಿರುವುದರಿಂದ ವನ್ಯಪ್ರಾಣಿಗಳಿಗೆ ಜೀವಕ್ಕೆ ಹಾನಿಯಾಗಿಲ್ಲ. ಸಣ್ಣಪುಟ್ಟ ಹಾವು, ಪಕ್ಷಿ, ಕಾಡುಕೋಳಿ ಇತರೆ ಸಣ್ಣ ಪ್ರಮಾಣದ ಪ್ರಾಣಿ ಪಕ್ಷಿಗಳು ಬೆಂಕಿಗೆ ಆಹುತಿಯಾಗಿರುವ ಸಾಧ್ಯತೆ ಇದೆ ಎಂದರು.

ಒಣಗಿ ನಿಂತ ಬಂಡೀಪುರ: ಹಸಿರ ಸಿರಿಯನ್ನು ಹೊದ್ದು ಕಂಗೊಳಿಸುತ್ತಿರದ್ದ ಬಂಡೀಪುರದಲ್ಲಿ ಈಗ ಕೇವಲ ಬೂದಿ, ಒಣಗಿದ ಮರಗಳು ಮತ್ತು ಸುಟ್ಟು ಕರಕಲಾಗಿ ನಿಂತಿರುವ ಮರಗಳು ಮತ್ತು ಹಸಿರಾಗಿದ್ದರೂ ಬೆಂಕಿಯ ಬಲೆಗೆ ಮುದುಡಿಹೋಗಿರುವ ಎಲೆಗಳನ್ನು ಹೊತ್ತ ಮರಗಳು ಕಾಣಸಿಗುತ್ತಿದೆ. ಅಲ್ಲಲ್ಲಿ ಜಿಂಕೆ, ಕೋತಿ ಮತ್ತು ಪಕ್ಷಿಗಳು ಆಹಾರಕ್ಕಾಗಿ ಹುಡುಕಾಟ ನಡೆಸುತ್ತಿವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next