ಹೊಸದಿಲ್ಲಿ: ಜನ್ಮಜಾತ ಹೃದ್ರೋಗದಿಂದ ಬಳಲುತ್ತಿದ್ದ ಮಗುವಿಗೆ ರಾಂಚಿ-ದೆಹಲಿ ವಿಮಾನ ಪ್ರಯಾಣದ ವೇಳೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು,ಸಹ ಪ್ರಯಾಣಿಕರಾಗಿದ್ದ ಇಬ್ಬರೂ ವೈದ್ಯರು ಸಕಾಲಿಕ ಚಿಕಿತ್ಸೆ ನೀಡಿ ಮಗುವನ್ನು ರಕ್ಷಿಸಿದ್ದಾರೆ.
ಶನಿವಾರ ಇಂಡಿಗೋ ವಿಮಾನದಲ್ಲಿ ಇಪ್ಪತ್ತು ನಿಮಿಷಗಳ ನಂತರ, ವಿಮಾನ ಸಿಬಂದಿಗಳು ತೊಂದರೆಯಲ್ಲಿರುವ ಮಗುವಿಗೆ ವಿಮಾನದಲ್ಲಿ ಯಾವುದೇ ವೈದ್ಯರಿದ್ದರೆ ,ತುರ್ತು ವೈದ್ಯಕೀಯ ನೆರವು ಪಡೆಯಲು ಪ್ರಕಟಣೆಯನ್ನು ಮಾಡಿದರು. ಪ್ರಸ್ತುತ ಜಾರ್ಖಂಡ್ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಯಾಗಿರುವ ಐಎಎಸ್ ಅಧಿಕಾರಿ, ವೈದ್ಯರಾಗಿರುವ ಡಾ. ನಿತಿನ್ ಕುಲಕರ್ಣಿ ಮತ್ತು ರಾಂಚಿಯ ಸದರ್ ಆಸ್ಪತ್ರೆಯ ಡಾ ಮೊಝಮ್ಮಿಲ್ ಫೆರೋಜ್ ಮಗುವನ್ನು ರಕ್ಷಿಸಲು ಮುಂದೆ ಬಂದರು.
ಇಬ್ಬರು ವೈದ್ಯರು ತುರ್ತು ವೈದ್ಯಕೀಯ ಸಹಾಯವಾಗಿ ವಯಸ್ಕರಿಗೆ ಮೀಸಲಾಗಿಟ್ಟಿದ್ದ ಆಕ್ಸಿಜನ್ ಮಾಸ್ಕ್ ಮತ್ತು ಇತರ ಔಷಧಿಗಳನ್ನು ಬಳಸಿದರು.ಒಂದು ಗಂಟೆಯ ನಂತರ ವಿಮಾನ ಲ್ಯಾಂಡ್ ಆದ ನಂತರ, ವೈದ್ಯಕೀಯ ತಂಡವು ಮಗುವನ್ನು ತಮ್ಮ ಆರೈಕೆಯಲ್ಲಿ ತೆಗೆದುಕೊಂಡಿತು ಮತ್ತು ಆಮ್ಲಜನಕದ ಬೆಂಬಲವನ್ನು ನೀಡಿತು.
ಮಗುವಿನ ಹೃದಯ ಕಾಯಿಲೆಯ ಚಿಕಿತ್ಸೆಗಾಗಿ ಪೋಷಕರು ಮಗುವನ್ನು ದೆಹಲಿಯ ಏಮ್ಸ್‌ಗೆ ಕರೆದೊಯ್ಯುತ್ತಿದ್ದರು.
“ಮೊದಲ 15-20 ನಿಮಿಷಗಳು ಬಹಳ ನಿರ್ಣಾಯಕ ಮತ್ತು ಒತ್ತಡದಿಂದ ಕೂಡಿದ್ದವು, ಕಷ್ಟಕರ ಸಂದರ್ಭವಾಗಿತ್ತು. ಕೊನೆಗೆ ಮಗುವಿನ ಕಣ್ಣುಗಳು ಸಹಜವಾದವು. ಕ್ಯಾಬಿನ್ ಸಿಬಂದಿ ತುಂಬಾ ಸಹಾಯಕವಾಗಿದ್ದರು ಮತ್ತು ತ್ವರಿತ ಬೆಂಬಲವನ್ನು ನೀಡಿದರು. ಸಂಪೂರ್ಣ ವೈದ್ಯಕೀಯ ಬೆಂಬಲಕ್ಕಾಗಿ ನಾವು ವಿನಂತಿಸಿದ್ದೇವು” ಎಂದು ಕುಲಕರ್ಣಿ ಹೇಳಿದ್ದಾರೆ.