Advertisement

ಉತ್ತರ ಕರ್ನಾಟಕ: ಸುಡುಬಿಸಿಲಿಗೆ ಇಬ್ಬರ ಬಲಿ?

03:45 AM Apr 16, 2017 | Team Udayavani |

ಬೆಂಗಳೂರು: ರಾಜ್ಯಾದ್ಯಂತ ದಿನದಿಂದ ದಿನಕ್ಕೆ ತಾಪಮಾನ ಏರತೊಡಗಿದ್ದು, ವಿವಿಧೆಡೆ ಶನಿವಾರ ಸಾಮಾನ್ಯಕ್ಕಿಂತ
2ರಿಂದ 3 ಡಿಗ್ರಿ ಸೆಲ್ಸಿಯಸ್‌ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಇನ್ನೂ ಮೂರ್‍ನಾಲ್ಕು ದಿನ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಈ ನಡುವೆಯೇ ಬಿರುಬಿಸಿಲಿಗೆ ಉತ್ತರ ಕರ್ನಾಟಕದ ಕೊಪ್ಪಳದಲ್ಲಿ ಒಬ್ಬ ಬಾಲಕ ಹಾಗೂ ರೋಣದಲ್ಲಿ ಖಾತ್ರಿ ಕೂಲಿ ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

Advertisement

ನೆರೆಯ ತೆಲಂಗಾಣದಲ್ಲಿ ಬಿಸಿಗಾಳಿ ಬೀಸುತ್ತಿದ್ದು, ಇದು ರಾಜ್ಯದ ಕೆಲವು ಪ್ರದೇಶಗಳಲ್ಲೂ ಬೀಸಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿತ್ತು. ಆದರೆ, ಸದ್ಯಕ್ಕೆ ಅಂತಹ ಯಾವುದೇ ವಾತಾವರಣ ಇಲ್ಲ. ಈ ಮಧ್ಯೆ ರಾಜ್ಯದ ಬಹುತೇಕ ಎಲ್ಲ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಗರಿಷ್ಠ 3ರಿಂದ ಕನಿಷ್ಠ 1 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಏರಿಕೆ ಕಂಡುಬಂದಿದೆ.

ಬೆಂಗಳೂರು, ಕಲಬುರಗಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ 3 ಡಿಗ್ರಿ ಸೆಲ್ಸಿಯಸ್‌ ಹೆಚ್ಚು ತಾಪಮಾನ ಇದ್ದರೆ,
ವಿಜಯಪುರ, ಗದಗ, ಮಂಡ್ಯ ಸುತ್ತಮುತ್ತ ಸಾಮಾನ್ಯಕ್ಕಿಂತ 2 ಡಿಗ್ರಿ ಹಾಗೂ ರಾಯಚೂರು, ಕಾರವಾರ, ಮಡಿಕೇರಿ ಮತ್ತಿತರ ಕಡೆಗಳಲ್ಲಿ 1 ಡಿಗ್ರಿ ಸೆಲ್ಸಿಯಸ್‌ ಅಧಿಕ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು
ಪ್ರಾದೇಶಿಕ ಕಚೇರಿ ತಿಳಿಸಿದೆ.

ಬಾಲಕ ಸಾವು: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಸಾಸ್ವಿಹಳ್ಳಿಯಲ್ಲಿ ಬಾಲಕ ದೊಡ್ಡಬಸಪ್ಪ ಗೋವಿಂದಪ್ಪ ಗಡ್ಡದ(13) ಬಿಸಿಲಿನಿಂದಾಗಿ ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಶಾಲೆಯಲ್ಲಿ ಬಿಸಿಯೂಟ ಸೇವನೆ ಮಾಡಿ, ತಗಡಿನ ಮನೆಯಲ್ಲಿ ಮಲಗಿದ್ದ. ಆ ಸಮಯದಲ್ಲೇ ಆತನಿಗೆ ಉಸಿರಾಟದ ಸಮಸ್ಯೆಯಾಗಿದೆ. ರಾತ್ರಿ ಮತ್ತಷ್ಟು ಸಮಸ್ಯೆಯಾಗಿದ್ದು, ಮೈಯೆಲ್ಲಾ ಬಿಸಿಯಾಗಿದೆ. ಹೀಗಾಗಿ ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಚಿಕಿತ್ಸೆ ಫ‌ಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ. ಆದರೆ ವೈದ್ಯರು, ಬಿಸಿಲಿನಿಂದಾಗಿ ಸತ್ತಿದ್ದಾನೆ ಎಂದು ಹೇಳುವುದು ಕಷ್ಟ. ಆತ ಶ್ವಾಸಕೋಶದ ಉಸಿರಾಟದ ತೊಂದರೆಯಿಂದಾಗಿ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ.

ಖಾತ್ರಿ ಕೂಲಿ ಕಾರ್ಮಿಕ ಸಾವು: ಉದ್ಯೋಗ ಖಾತ್ರಿ ಯೋಜನೆಯಡಿ ಜಮೀನುಗಳ ಬದು ನಿರ್ಮಾಣದಲ್ಲಿ ತೊಡಗಿದ್ದ ವೇಳೆ ವಿಪರೀತ ಬಿಸಿಲಿಗೆ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಅಬ್ಬಿಗೇರಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಅಬ್ಬಿಗೇರಿ ಗ್ರಾಮದ ಶಿವಪ್ಪ ಈಶಪ್ಪ ಪೂಜಾರ(48) ಮೃತಪಟ್ಟಿರುವ ಕೂಲಿ ಕಾರ್ಮಿಕ. ಅತಿಯಾದ ಬಿಸಿಲಿಗೆ ಬಸವಳಿದು ಮೂಛೆì ತಪ್ಪಿದ್ದ. ಗದುಗಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ, ಚಿಕಿತ್ಸೆ ಫ‌ಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಆದರೆ ವೈದ್ಯರು ಇದು ಬಿಸಿಲಿನಿಂದಾಗಿ ಆಗಿರುವ ಸಾವು ಎಂಬ ಬಗ್ಗೆ ದೃಢೀಕರಿಸಿಲ್ಲ. 

Advertisement
Advertisement

Udayavani is now on Telegram. Click here to join our channel and stay updated with the latest news.

Next