ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ಶಾಂತವಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೀರಿನ ಹರಿವು ತಗ್ಗಿದೆ. ಮುಂದಿನ 5 ದಿನಗಳವರೆಗೆ ಜಿಲ್ಲೆಯಾದ್ಯಂತ ಸಾಮಾನ್ಯ ಮಳೆಯಾಗಲಿದೆ ಮತ್ತು ಒಳನಾಡು ಪ್ರದೇಶಗಳ ಅಲ್ಲಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಜಿಲ್ಲೆಯ ಹಲವು ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಮತ್ತು ಕೆಲವು ಶಾಲೆಗಳಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳನ್ನು ತೆರೆದಿರುವುದರಿಂದ ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಆ.13 ಮತ್ತು 14ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ.
ಮಹಿಳೆಯ ಶವ ಪತ್ತೆ: ರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಆ.9 ರಂದು ಮಣಿಪಾರೆ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಪ್ರಾಣ ಕಳೆದುಕೊಂಡ ಎಂಟು ಮಂದಿಯಲ್ಲಿ ಓರ್ವ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಪ್ರಭು ಎಂಬುವರ ಪತ್ನಿ ಅನುಸೂಯ (45) ಅವರ ಮೃತದೇಹವನ್ನು ಮಣ್ಣಿನಡಿಯಿಂದ ಹೊರ ತೆಗೆಯಲಾಗಿದೆ. ರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಈ ಮಧ್ಯೆ, ಪ್ರಭು ಅವರ ತಾಯಿ ದೇವಕ್ಕಿ (65), ಮಕ್ಕಳಾದ ಅಮೃತಾ(13) ಮತ್ತು ಆದಿತ್ಯ(10) ಹಾಗೂ ಹರೀಶ್ ಎಂಬುವರ ಕುಟುಂಬ ಸದಸ್ಯರಾದ ಶಂಕರ, ಅಪ್ಪು (55) ಮತ್ತು ಲೀಲಾ (45) ಹಾಗೂ ಗೃಹಿಣಿ ಎಂಬುವರ ಪತ್ತೆ ಕಾರ್ಯ ನಡೆಯುತ್ತಿದೆ.
ಮನೆಯೊಳಗೆ ಪತ್ತೆಯಾಯ್ತು ಶವ: ಮಡಿಕೇರಿ ಸಮೀಪ ಮಾಡು ಗ್ರಾಮದ ಪರಂಬು ಪೈಸಾರಿಯಲ್ಲಿ ಮನೆಯೊಂದರಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಪ್ರವಾಹದ ಸಂದರ್ಭ ಈ ಮನೆ ಮುಳುಗಡೆಯಾಗಿದ್ದು, ಇದೀಗ ನೀರಿನ ಹರಿವು ಕಡಿಮೆಯಾಗಿರುವುದರಿಂದ ಮನೆಯೊಳಗೆ ಮೃತದೇಹ ಇರುವುದು ಕಂಡು ಬಂದಿದೆ. ಮೃತರನ್ನು ಕುಜ್ಞಣ್ಣ ಎಂದು ಗುರುತಿಸಲಾಗಿದೆ.