Advertisement

ಸಣ್ಣ, ಅತಿಸಣ್ಣ ಕೈಗಾರಿಕೆಗಳ ಪ್ರಗತಿಗೆ 2 ದಿನ ಹೂಡಿಕೆದಾರರ ಸಮಾವೇಶ

11:00 AM Sep 08, 2017 | Team Udayavani |

ಬೆಂಗಳೂರು: ಅಧಿಕ ಉದ್ಯೋಗಾವಕಾಶ ಸೃಷ್ಟಿಸುವ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ನ.23 ಮತ್ತು 24ರಂದು ಮಾರಾಟ ಅಭಿವೃದ್ಧಿ ಮತ್ತು ಹೂಡಿಕೆದಾರರ ಸಮಾವೇಶ-2017 ನಡೆಸಲು ಸರ್ಕಾರ ತೀರ್ಮಾನಿಸಿದೆ.

Advertisement

ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಈ ಸಮಾವೇಶ ನಡೆಯಲಿದ್ದು, ಬೃಹತ್‌ ಕೈಗಾರಿಕೆಗಳನ್ನೂ ಈ ಸಮಾವೇಶಕ್ಕೆ ಆಹ್ವಾನಿಸುತ್ತಿದ್ದು, ಅವುಗಳಿಗೆ ಅಗತ್ಯವಿರುವ ಕಚ್ಚಾ ಸಾಮಗ್ರಿಗಳನ್ನು ಸ್ಥಳೀಯ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಂದ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಸಮಾವೇಶದ ವೆಬ್‌ಸೈಟ್‌ ಮತ್ತು ಲಾಂಛನ ಬಿಡುಗಡೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನ್ಫಿಡರೇಷನ್‌ ಆಫ್ ಇಂಡಿಯನ್‌ ಇಂಡಸ್ಟ್ರೀಸ್‌ (ಸಿಐಐ) ಮತ್ತು ಅರ್ನ್ಸ್ ಆಂಡ್‌ ಯಂಗ್‌ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಮಾವೇಶ ಆಯೋಜಿಸಲಾಗಿದೆ. ಬೃಹತ್‌ ಕೈಗಾರಿಕೆಗಳು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ತನಗೆ ಬೇಕಾದ ಕಚ್ಚಾ ಸಾಮಗ್ರಿ, ಬಿಡಿ ಭಾಗಗಳನ್ನು ಪೂರೈಸುವ ಘಟಕಗಳಾಗಿ ಮಾಡಿಕೊಳ್ಳಲು ಇದು ನೆರವಾಗಲಿದೆ ಎಂದರು.

ಸಭೆ, ಗೋಷ್ಠಿ: ಸಣ್ಣ ಕೈಗಾರಿಕೆಗಳು ಬೆಳೆಯಲು ಪೂರಕ ವಾತಾವರಣ ಸೃಷ್ಟಿಯಾಗಬೇಕು. ಈ ಕೈಗಾರಿಕೆಗಳಲ್ಲಿ ಉತ್ಪಾದನೆಯಾಗುವ ವಸ್ತುಗಳಿಗೆ ಮಾರುಕಟ್ಟೆ ಕಲ್ಪಿಸಬೇಕು. ಆ ನಿಟ್ಟಿನಲ್ಲಿ ಬೃಹತ್‌ ಕೈಗಾರಿಕೆಗಳನ್ನು ಸಮಾವೇಶಕ್ಕೆ ಆಹ್ವಾನಿಸಿ ಸಣ್ಣ ಕೈಗಾರಿಕೆಗಳನ್ನು ಅವುಗಳ ಪೂರಕ ಕೈಗಾರಿಕಾ ಘಟಕಗಳಾಗಿ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಅವಕಾಶ ನೀಡಲಾಗುವುದು. ಅದಕ್ಕಾಗಿ 2 ಲಕ್ಷ ಚದರ ಅಡಿ ಜಾಗದಲ್ಲಿ ವಸ್ತುಪ್ರದರ್ಶನ ಮಳಿಗೆ, ಖರೀದಿದಾರರು ಮತ್ತು ಮಾರಾಟಗಾರರ ಸಭೆ, ವಿವಿಧ ಗೋಷ್ಠಿಗಳನ್ನು ನಡೆಸಲಾಗುವುದು ಎಂದರು.

ಕ್ಷೇತ್ರಗಳು: ರಾಜ್ಯದಲ್ಲಿ ವೈಮಾನಿಕ ಮತ್ತು ರಕ್ಷಣಾ ಸಾಮಗ್ರಿ, ಅಟೋಮೊಬೈಲ್‌, ಅಟೋ ಕಾಂಪೋನೆಂಟ್‌, ವಿದ್ಯುತ್‌ ವಾಹನಗಳು, ಔಷಧ ಮತ್ತು ವೈದ್ಯಕೀಯ ಸಲಕರಣೆಗಳು, ಕೃಷಿ ಮತ್ತು ಸಂಸ್ಕರಣಾ ಯಂತ್ರೋಪಕರಣ, ಜವಳಿ, ಸ್ಟಾರ್ಟ್‌ಅಪ್‌ ಕ್ಷೇತ್ರಗಳನ್ನು ಆದ್ಯತಾ ವಲಯಗಳಾಗಿ ಪರಿಗಣಿಸಲಾಗಿದ್ದು, ಇದಕ್ಕೆ ಪೂರಕವಾದ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಲಾಗುವುದು. ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲಾಗುವುದು. ಅದಕ್ಕಾಗಿ ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್‌, ಪುಣೆ ಇತರೆಡೆ ರೋಡ್‌ಶೋಗಳನ್ನು ಏರ್ಪಡಿಸಲಾಗುವುದು ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next