Advertisement

ಚಾಳಿ ಮುಂದುವರಿಸಿದ ಪಾಕ್‌

07:18 AM Jun 04, 2018 | Team Udayavani |

ಜಮ್ಮು: ಇನ್ನು ಮುಂದೆ ಕದನ ವಿರಾಮ ಒಪ್ಪಂದವನ್ನು ಅತ್ಯಂತ ಬದ್ಧತೆಯಿಂದ ಪಾಲಿಸೋಣ ಎಂದು ಒಪ್ಪಂದ ಮಾಡಿಕೊಂಡು ಹೋದ ಬೆನ್ನಲ್ಲೇ ಪಾಕಿಸ್ಥಾನವು ತನ್ನ ಹಳೇ ಚಾಳಿಯನ್ನು ಮುಂದುವರಿಸಿದೆ. ರವಿವಾರ ಭಾರತದ ಸೇನಾನೆಲೆಗಳು ಹಾಗೂ ಗಡಿಗ್ರಾಮಗಳನ್ನು ಗುರಿಯಾಗಿಸಿಕೊಂಡು ಪಾಕ್‌ ಸೇನೆ ಮತ್ತೆ ಗುಂಡಿನ ದಾಳಿ ನಡೆಸಿದ ಪರಿಣಾಮ, ಬಿಎಸ್‌ಎಫ್ನ ಇಬ್ಬರು ಯೋಧರು ಹುತಾತ್ಮರಾಗಿ, 14 ಮಂದಿ ಗಾಯಗೊಂಡಿದ್ದಾರೆ.

Advertisement

ಕಳೆದ ವಾರವಷ್ಟೇ ಭಾರತ ಹಾಗೂ ಪಾಕಿಸ್ಥಾನದ ಸೇನಾ ಕಾರ್ಯಾಚರಣೆಯ ಪ್ರಧಾನ ನಿರ್ದೇಶಕ (ಡಿಜಿಎಂಒ)ರ ಮಟ್ಟದ ಸಭೆ ನಡೆದಿದ್ದು, 2003ರ ಕದನ ವಿರಾಮ ಒಪ್ಪಂದವನ್ನು ಪಾಲಿಸಿಕೊಂಡು ಹೋಗುವ ಬಗ್ಗೆ ಹಾಗೂ ಅಪ್ರಚೋದಿತ ಗುಂಡಿನ ದಾಳಿ ನಡೆಸದೇ ಇರುಬ ಬಗ್ಗೆ ನಿರ್ಧರಿಸಲಾಗಿತ್ತು. ಇದಾದ ಬೆನ್ನಲ್ಲೇ ಪಾಕಿಸ್ಥಾನವು ಮಾತಿಗೆ ತಪ್ಪಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ರವಿವಾರದ ಶೆಲ್‌ ದಾಳಿಯಲ್ಲಿ ಬಿಎಸ್‌ಎಫ್ನ ಸಹಾಯಕ ಸಬ್‌ಇನ್ಸ್‌ಪೆಕ್ಟರ್‌ ಎಸ್‌.ಎನ್‌. ಯಾದವ್‌ ಮತ್ತು ಕಾನ್‌ಸ್ಟೆಬಲ್‌ ವಿ.ಕೆ. ಪಾಂಡೆ ಹುತಾತ್ಮರಾಗಿದ್ದಾರೆ. ಇಬ್ಬರು ಯೋಧರು, ಒಬ್ಬ ಪೊಲೀಸ್‌ ಸಿಬಂದಿ ಮತ್ತು ಇಬ್ಬರು ಮಹಿಳೆಯರು ಸೇರಿ 14 ಮಂದಿ ಗಾಯಗೊಂಡಿದ್ದಾರೆ. ದಾಳಿಯು ಎಷ್ಟು ತೀವ್ರವಾಗಿತ್ತೆಂದರೆ, ಶೆಲ್‌ ಸ್ಫೋಟಗೊಂಡ ಸದ್ದು ಹತ್ತಿರದ ಶ್ರೀನಗರಕ್ಕೂ ಕೇಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಹೇಳುವುದೊಂದು, ಮಾಡುವುದೊಂದು
ಕದನ ವಿರಾಮ ಉಲ್ಲಂಘಿಸಿ ಯೋಧರನ್ನು ಬಲಿತೆಗೆದುಕೊಂಡ ಪಾಕಿಸ್ಥಾನದ ವಿರುದ್ಧ ಬಿಎಸ್‌ಎಫ್ ಐಜಿ ರಾಮ್‌ ಅವತಾರ್‌ ಆಕ್ರೋಶ ವ್ಯಕ್ತಪಡಿಸಿದ್ದು, “ಪಾಕಿಸ್ಥಾನವು ಹೇಳುವುದೊಂದು, ಮಾಡುವುದೊಂದು ಎಂಬುದು ಮತ್ತೂಮ್ಮೆ ಸಾಬೀತಾಯಿತು’ ಎಂದು ಹೇಳಿದ್ದಾರೆ. ಇಂದು ನಡೆದಿದ್ದು ಸ್ನೆ„ಪರ್‌ ದಾಳಿ ಅಲ್ಲ, ಅದು ಪಾಕಿಸ್ಥಾನ ನಡೆಸಿದ ಅಪ್ರಚೋದಿತ ದಾಳಿ. ನಾವೂ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದೇವೆ. ಅದರಿಂದ, ಪಾಕಿಸ್ಥಾನದಲ್ಲಿ ಆದ ಸಾವು-ನೋವು, ಹಾನಿ ಬಗ್ಗೆ ಒಂದೆರಡು ದಿನಗಳಲ್ಲೇ ಮಾಹಿತಿ ಸಿಗಲಿದೆ ಎಂದಿದ್ದಾರೆ.

ಮುಂದುವರಿದ ಉಗ್ರರ ನೇಮಕ
ಕಣಿವೆ ರಾಜ್ಯದಲ್ಲಿನ ಕದನ ವಿರಾಮ ಘೋಷಣೆಯಿಂದ ಉಗ್ರ ನಿಗ್ರಹ ಕಾರ್ಯಾ ಚರಣೆ ಸದ್ಯಕ್ಕೆ ಸ್ಥಗಿತಗೊಂಡಿದ್ದರೂ ಸ್ಥಳೀಯ ಯುವಕರನ್ನು ಉಗ್ರ ಸಂಘಟ ನೆಗಳು ನೇಮಕ ಮಾಡಿಕೊಳ್ಳುತ್ತಿರುವ ಪ್ರಕ್ರಿಯೆ ಮುಂದುವರಿದಿದ್ದು ಇದು ಕಳವಳಕಾರಿ ಎಂದು ಭದ್ರತಾ ಸಂಸ್ಥೆಗಳು ಹೇಳಿವೆ. 

ಉಗ್ರನಾದ ಸೋದರ
ಕಣಿವೆ ರಾಜ್ಯದ ಐಪಿಎಸ್‌ ಅಧಿಕಾರಿಯ ಸಹೋದರ ನೊಬ್ಬ ಉಗ್ರ ಸಂಘಟನೆಗೆ ಸೇರ್ಪಡೆಯಾಗಿರುವ ಶಂಕೆಯಿದೆ ಎಂದು ಮೂಲಗಳು ತಿಳಿಸಿವೆ. ಯುನಾನಿ ವೈದ್ಯಕೀಯ ಕೋರ್ಸ್‌ ಮಾಡುತ್ತಿದ್ದ ಈತ ಮೇ 26ರಿಂದ ಕಾಣೆಯಾಗಿದ್ದಾನೆ ಎಂದು ಹೇಳಲಾಗಿದೆ.

Advertisement

ಪಾಕಿಸ್ಥಾನವು ಗುಂಡಿನ ದಾಳಿ, ಭಯೋತ್ಪಾದನೆ ಮುಂದುವರಿಸಿದ್ದೇ ಆದಲ್ಲಿ, ರಂಜಾನ್‌ ಹಿನ್ನೆಲೆಯಲ್ಲಿ ಘೋಷಿ ಸಿರುವ ಕದನ ವಿರಾಮವನ್ನು ವಾಪಸ್‌ ಪಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ.
ಹನ್ಸರಾಜ್‌ ಅಹಿರ್‌, ಕೇಂದ್ರ ಸಚಿವ

ಆತಂಕ ಪಡಬೇಕಾದ ಅಗತ್ಯವಿಲ್ಲ. ಯಾವುದೇ ಪರಿಸ್ಥಿತಿ ಎದುರಿಸಲೂ ನಾವು ಸನ್ನದ್ಧರಾಗಿದ್ದೇವೆ. ಗಡಿಗ್ರಾಮಗಳ ಜನರ ನೈತಿಕ ಸ್ಥೆರ್ಯವನ್ನೂ ನಾವು ಮೆಚ್ಚಬೇಕು.
ಎಸ್‌.ಡಿ.ಸಿಂಗ್‌, ಐಜಿಪಿ, ಜಮ್ಮು

ಇದೊಂದು ದುರದೃಷ್ಟಕರ ಘಟನೆ. ಇಂಥ ಘಟನೆಯಿಂದ ಎರಡೂ ದೇಶಗಳ ಮಂದಿ ಪ್ರಾಣ ಕಳೆದುಕೊಳ್ಳಬೇಕಾಗಿದೆ. ದಯವಿಟ್ಟು, ಮಾತುಕತೆ ನಡೆಸಿ, ಈ ರಕ್ತಪಾತವನ್ನು ಕೊನೆಗೊಳಿಸಿ,
ಮೆಹಬೂಬಾ ಮುಫ್ತಿ, ಜಮ್ಮು-ಕಾಶ್ಮೀರ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next