Advertisement

ಸ್ಮಶಾನಕ್ಕೆ 2 ಎಕರೆ ಭೂಮಿ ಮಂಜೂರು

09:55 AM Jun 19, 2022 | Team Udayavani |

ಶಹಾಬಾದ: ಸ್ಮಶಾನಕ್ಕೆ ಭೂಮಿ ಒದಗಿಸಬೇಕು ಎಂಬ ಭಂಕೂರ ಗ್ರಾಮಸ್ಥರ ಬಹು ದಿನದ ಬೇಡಿಕೆಯನ್ನು ಜಿಲ್ಲಾಧಿಕಾರಿ ಯಶ್ವಂತ ವಿ.ಗುರುಕರ್‌ ಅವರು ಸ್ಮಶಾನಕ್ಕೆ ಎರಡು ಎಕರೆ ಭೂಮಿ ಕೇವಲ ಎರಡು ದಿನದಲ್ಲಿ ಮಂಜೂರು ಮಾಡಿಕೊಡುತ್ತೇನೆ ಎಂದು ಭರವಸೆ ನೀಡುವ ಮೂಲಕ ಗ್ರಾಮದ ಬಹುದೊಡ್ಡ ಸಮಸ್ಯೆಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿದ್ದಾರೆ.

Advertisement

ತಾಲೂಕಿನ ಭಂಕೂರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಘೋಷಣೆ ಮಾಡಿದರು.

ಸಾರ್ವಜನಿಕರಿಗೆ ಹತ್ತು ಹಲವು ವಿವಿಧ ಇಲಾಖೆಯಿಂದ ಸವಲತ್ತುಗಳು ಇವೆ ಎಂಬುದು ಜನರಿಗೆ ಗೊತ್ತಿಲ್ಲ. ಆಯುಷ್ಮಾನ ಭಾರತ ಕಾರ್ಡ್‌ ಕೇವಲ 10 ರೂ.ಯಲ್ಲಿ ಸಿಗುತ್ತದೆ. ಈ ಯೋಜನೆಯ ಫಲಾನುಭವಿಗಳು ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷದವರೆಗೆ ಉಚಿತ ಚಿಕಿತ್ಸಾ ಸೌಲಭ್ಯ ಪಡೆಯಬಹುದು. ಇದರಿಂದ ಬಡ ಕುಟುಂಬ ವರ್ಗಕ್ಕೆ ಹೆಚ್ಚಿನ ಲಾಭವಾಗಲಿದೆ. ಈ ಯೋಜನೆ ಜಗತ್ತಿನ ಯಾವ ದೇಶದಲ್ಲೂ ಇಲ್ಲ. ಜಿಲ್ಲೆಯಲ್ಲಿ ಸುಮಾರು 10 ಸಾವಿರ ಪೋಡಿ ಸಮಸ್ಯೆಗಳು ಬಂದಿದ್ದು, ಅದರಲ್ಲಿ ಸುಮಾರು 3 ಸಾವಿರ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು.

ಗ್ರಾಪಂ ಸದಸ್ಯ ಲಕ್ಷ್ಮೀಕಾಂತ ಕಂದಗೂಳ ಮಾತನಾಡಿ, ಗ್ರಾಮದಲ್ಲಿ ಸ್ಮಶಾನದ ಸಮಸ್ಯೆ ಸುಮಾರು 20 ವರ್ಷಗಳಿಂದ ತಲೆದೋರಿದೆ. ಆದ್ದರಿಂದ ಸ್ಮಶಾನಕ್ಕೆ ಭೂಮಿ ಮಂಜೂರು ಮಾಡಬೇಕು. ಗ್ರಾಮದ ಗ್ರಂಥಾಲಯ ಡಿಜಿಟಲೀಕರಣಗೊಳಿಸಬೇಕು. ರೇಷನ್‌ ಅಂಗಡಿಗಳು ಕೇವಲ ಮೂರು ದಿನ ಮಾತ್ರ ತೆರೆದಿರುತ್ತವೆ. ಅಲ್ಲದೇ ರಾತ್ರಿ 1 ಗಂಟೆ ಸಮಯದಲ್ಲಿ ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಗ್ರಾಮದ ವೃತ್ತದಲ್ಲಿ ಸ್ಪೀಡ್‌ ಬ್ರೇಕರ್‌ ಅಳವಡಿಸಬೇಕು. ಗ್ರಾಮಕ್ಕೆ ಬರುವ 1.5 ಕಿಮೀ ದ್ವಿಪಥ ರಸ್ತೆಯನ್ನು ನಿರ್ಮಾಣ ಮಾಡಿಕೊಡಬೇಕು ಸೇರಿದಂತೆ ಅನೇಕ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದೆ ಹೇಳಿದರು.

ನಂತರ ಗ್ರಾಪಂ ಸದಸ್ಯ ಈರಣ್ಣ ಹಳ್ಳಿ ಕಾರ್ಗಿಲ್‌ ಮಾತನಾಡಿ, ಸ್ಮಶಾನದ ಸಮಸ್ಯೆ, ಗ್ರಾಮದಲ್ಲಿ ಹಾವು ಕಡಿದು ಸುಮಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ದೂರದ ಪೇಠಸಿರೂರಿಗೆ ಹೋಗಲು ತೊಂದರೆಯಾಗುತ್ತಿದೆ. ಆದ್ದರಿಂದ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕೆಂದು ಆಗ್ರಹಿಸಿದರು.

Advertisement

ಸಮಸ್ಯೆಯನ್ನು ಆಲಿಸಿದ ಜಿಲ್ಲಾಧಿಕಾರಿಗಳು ಸ್ಮಶಾನಕ್ಕೆ ಎರಡು ಎಕರೆ ಭೂಮಿಯನ್ನು ಎರಡೇ ದಿನದಲ್ಲಿ ಮಂಜೂರು ಮಾಡುತ್ತೇನೆ. ಅಲ್ಲದೇ ಭಂಕೂರ ವೃತ್ತದಲ್ಲಿ ಹಾಟ್‌ ಸ್ಪಾಟ್‌ ಎಂದು ಗುರುತಿಸಿ ಅಪಘಾತಗಳಾಗದೇ ಹಾಗೇ ಕ್ರಮಕೈಗೊಳ್ಳುತ್ತೇನೆ. ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲು ಸರಕಾರದ ಹಂತದಲ್ಲಿ ಮಾತನಾಡುತ್ತೇನೆ. ಅಲ್ಲದೇ ಹಾವು ಕಡಿತಕ್ಕೆ ಔಷಧ ಒದಗಿಸಿ ಕೊಡಲಾಗುತ್ತದೆ ಎಂದರು.

ಜಿಪಂ ಕಾರ್ಯನಿರ್ವಾಹಣ ಅಧಿಕಾರಿ ಡಾ| ಗಿರೀಶ ದಿಲೀಪ ಬಡೋಲೆ, ಸೇಡಂ ಎಸಿ ಕಾರ್ತಿಕ ಎಮ್‌, ಜಿಲ್ಲಾ ಆರೋಗ್ಯ ಅಧಿಕಾರಿ ರಾಜಶೇಖರ ಮಾಲಿ, ತಾಪಂ ಇಒ ಬಸಲಿಂಗಪ್ಪ ಡಿಗ್ಗಿ, ಗ್ರೇಡ್‌-2 ತಹಶೀಲ್ದಾರ್‌ ಗುರುರಾಜ ಸಂಗಾವಿ, ತಾಲೂಕು ಆರೋಗ್ಯ ಅಧಿಕಾರಿ ಅಮರದೀಪ ಪವಾರ, ಗ್ರಾಪಂ ಉಪಾಧ್ಯಕ್ಷ ಯಶ್ವಂತ ಚವ್ಹಾಣ, ನಗರಸಭೆ ಸದಸ್ಯ ರಜನಿಕಾಂತ ಕಂಬಾನೂರ, ಗಣ್ಯರಾದ ಶಶಿಕಾಂತ ಪಾಟೀಲ, ಗ್ರಾಪಂ ಸದಸ್ಯ ಶರಣಬಸಪ್ಪ ಧನ್ನಾ, ಅಧಿಕಾರಿಗಳಾದ ಡಾ|ಶಂಕರ,ರಮೇಶ ತುಂಗಳ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈರಣ್ಣ ಕೆಂಭಾವಿ, ಪ್ರಾಥಮಿಕ ಶಾಲಾ ಶಿಕ್ಷಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ್‌ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ವೇದಿಕೆಯ ಮೇಲಿದ್ದರು. ಶಿಕ್ಷಕ ಬನ್ನಪ್ಪ ಸೈದಾಪೂರ ನಿರೂಪಿಸಿದರು.

ಸಿಆರ್‌ಸಿ ಮರೆಪ್ಪ ಭಜಂತ್ರಿ ಪ್ರಾರ್ಥಿಸಿದರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸಿದ್ದು ಅಣಬಿ ಸ್ವಾಗತಿಸಿದರು. ಶಾಂತಮಲ್ಲ ಶಿವಬೋಧಿ ಭಂಕೂರ ಗ್ರಾಮದ ಇತಿಹಾಸ ಪರಿಚಯಿಸಿದರು. ಈರಣ್ಣ ಕಾರ್ಗಿಲ್‌ ವಂದಿಸಿದರು.

ಸಾರ್ವಜನಿಕರಿಂದ ಒಟ್ಟು 406 ಅರ್ಜಿಗಳು ಸ್ವೀಕೃತಗೊಂಡಿದ್ದು, 355 ಅರ್ಜಿಗಳು ಸ್ಥಳದಲ್ಲೇ ಪರಿಹಾರ ನೀಡಿ ಪ್ರಮಾಣ ಪತ್ರ ವಿತರಿಸಲಾಯಿತು. ಉಳಿದ 51 ಅರ್ಜಿಗಳು ನಿಯಾಮಾನುಸಾರ ಪರಿಶೀಲಿಸಿ ಕ್ರಮವಹಿಸಲಾಗುವುದು. ಸಾಮಾಜಿಕ ಭದ್ರತೆ ಅರ್ಜಿಗಳು 56, ರೇಷನ್‌ ಕಾರ್ಡ್‌ 9, ಆರೋಗ್ಯ ಕಾರ್ಡ್‌ 72, ಆರೋಗ್ಯ ಇಲಾಖೆಯ ಡಿಜಿಟಲ್‌ ಕಾರ್ಡ್‌ 200, ಕಟ್ಟಡ ಕಾರ್ಮಿಕ ಕಾರ್ಡ್‌ 25 ಪಹಣಿ ತಿದ್ದುಪಡಿ 5, ಸ್ಮಶಾನ ಭೂಮಿ 3, ಇತರೆ ಅರ್ಜಿ 36 ಅರ್ಜಿಗಳು ಸ್ವೀಕೃತಗೊಂಡಿದ್ದು, ಜಿಲ್ಲಾಧಿಕಾರಿಗಳು ಎಲ್ಲ ಅರ್ಜಿಗಳನ್ನು ಕುಲಂಕುಶವಾಗಿ ಪರಿಶೀಲಿಸಿ ಸ್ಥಳದಲ್ಲೇ 355 ಅರ್ಜಿಗಳನ್ನು ಇತ್ಯರ್ಥಪಡಿಸಿದ್ದಾರೆ. ಬಾಕಿ ಇರುವ 51 ಅರ್ಜಿಗಳು ಪರಿಶೀಲಿಸಿ ತುರ್ತಾಗಿ ಕ್ರಮವಹಿಸಲು ಸಂಬಂಧಪಟ್ಟ ಇಲಾಖೆಗೆ ರವಾನಿಸಲು ತಿಳಿಸಿದ್ದಾರೆ. ಸುರೇಶ ವರ್ಮಾ ತಹಶೀಲ್ದಾರ್‌.

Advertisement

Udayavani is now on Telegram. Click here to join our channel and stay updated with the latest news.

Next