Advertisement

1st Test;ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು ಅನುಭವಿಸಿದ ಭಾರತ

12:12 AM Dec 29, 2023 | Team Udayavani |

ಸೆಂಚುರಿಯನ್‌: ದ್ವಿತೀಯ ಸರದಿಯಲ್ಲಿ ಬ್ಯಾಟಿಂಗ್‌ ಮರೆತ ಭಾರತ ಸೆಂಚುರಿಯನ್‌ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಶರಣಾಗಿದೆ. ಇನ್ನಿಂಗ್ಸ್‌ ಹಾಗೂ 32 ರನ್ನುಗಳ ಹೀನಾಯ ಸೋಲಿಗೆ ತುತ್ತಾಗಿದೆ. ಇದರೊಂದಿಗೆ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯ ಮೂರೇ ದಿನದಲ್ಲಿ ಮುಗಿದು ಹೋಯಿತು.
163 ರನ್‌ ಇನ್ನಿಂಗ್ಸ್‌ ಹಿನ್ನಡೆಗೆ ಸಿಲುಕಿದ ಭಾರತ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಸ್ವಲ್ಪವೂ ಬ್ಯಾಟಿಂಗ್‌ ಹೋರಾಟ ತೋರಲಿಲ್ಲ. 34.1 ಓವರ್‌ಗಳಲ್ಲಿ 131ಕ್ಕೆ ಸರ್ವಪತನ ಕಂಡಿತು. ಇದು ರೋಹಿತ್‌ ಶರ್ಮ ನಾಯಕತ್ವದಲ್ಲಿ ಭಾರತಕ್ಕೆ ಎದುರಾದ ಮೊದಲ ಇನ್ನಿಂಗ್ಸ್‌ ಸೋಲು.

Advertisement

ಸ್ವತಃ ರೋಹಿತ್‌ ಶರ್ಮ ಸೊನ್ನೆ ಸುತ್ತುವ ಮೂಲಕ ಭಾರತದ ಕುಸಿತಕ್ಕೆ ಮುಹೂರ್ತವಿರಿಸಿದರು. ವಿರಾಟ್‌ ಕೊಹ್ಲಿ ಏಕಾಂಗಿಯಾಗಿ ಹೋರಾಡಿ 76 ರನ್‌ ಬಾರಿಸಿದರು. ಎರಡಂಕೆಯ ಗಡಿ ತಲುಪಿದ ಮತ್ತೋರ್ವ ಆಟಗಾರ ಶುಭಮನ್‌ ಗಿಲ್‌ (26). ಇವರಿಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರದೂ ಸಿಂಗಲ್‌ ಡಿಜಿಟ್‌ ಸ್ಕೋರ್‌. ಅಶ್ವಿ‌ನ್‌, ಬುಮ್ರಾ ಕೂಡ ಖಾತೆ ತೆರೆಯಲಿಲ್ಲ.

ಚೊಚ್ಚಲ ಟೆಸ್ಟ್‌ ಆಡಿದ ನಾಂಡ್ರೆ ಬರ್ಗರ್‌ 4, ಆಲ್‌ರೌಂಡ್‌ ಪ್ರದರ್ಶನ ವಿತ್ತ ಮಾರ್ಕೊ ಜಾನ್ಸೆನ್‌ 3 ಮತ್ತು ಕಾಗಿಸೊ ರಬಾಡ 2 ವಿಕೆಟ್‌ ಕಿತ್ತು ಪ್ರವಾಸಿಗರನ್ನು ಸೋಲಿನ ಸುಳಿಗೆ ತಳ್ಳಿದರು. ಭಾರತಕ್ಕೆ ಆತಿಥೇಯ ತಂಡದ ಎಡಗೈ ವೇಗಿಗಳ ದಾಳಿಯನ್ನು ನಿಭಾಯಿಸಿ ನಿಲ್ಲಲಾಗಲಿಲ್ಲ. ಈ ಪಂದ್ಯದಲ್ಲಿ ತವರಿನ ಎಡಗೈ ವೇಗಿಗಳು ಅತ್ಯಧಿಕ 11 ವಿಕೆಟ್‌ ಕೆಡವಿದರು. ಇದರೊಂದಿಗೆ ಸರಿಯಾಗಿ 100 ವರ್ಷಗಳ ಹಿಂದಿನ ದಾಖಲೆಯನ್ನು ದಕ್ಷಿಣ ಆಫ್ರಿಕಾ ಸರಿದೂಗಿಸಿತು. ಇಂಗ್ಲೆಂಡ್‌ ವಿರುದ್ಧ ಕೇಪ್‌ಟೌನ್‌ನಲ್ಲಿ ನಡೆದ 1923ರ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾದ ಎಡಗೈ ವೇಗಿಗಳು 11 ವಿಕೆಟ್‌ ಉರುಳಿಸಿದ್ದರು.

ಎಲ್ಗರ್‌ಗೆ 200 ತಪ್ಪಿತು
ಗುರುವಾರದ ಮೊದಲ ಅವಧಿಯ ಆಟದಲ್ಲಿ ದಕ್ಷಿಣ ಆಫ್ರಿಕಾ 7ಕ್ಕೆ 392ರ ತನಕ ಬೆಳೆಯಿತು. ಬಳಿಕ 408 ರನ್ನಿಗೆ ಸರ್ವಪತನ ಕಂಡು 163 ರನ್‌ ಮುನ್ನಡೆ ಸಾಧಿಸಿತು.

ದಕ್ಷಿಣ ಆಫ್ರಿಕಾ 5ಕ್ಕೆ 256 ರನ್‌ ಗಳಿಸಿದಲ್ಲಿಂದ ದಿನದಾಟ ಮುಂದು ವರಿಸಿತ್ತು. 140 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಡೀನ್‌ ಎಲ್ಗರ್‌ 185ರ ತನಕ ಬೆಳೆದರು. ಮತ್ತೆ ಚೊಚ್ಚಲ ದ್ವಿಶತಕದಿಂದ ವಂಚಿತರಾದರು. 2017ರ ಬಾಂಗ್ಲಾದೇಶ ವಿರುದ್ಧದ ಪೊಚೆಫ್ಸೂóಮ್‌ ಪಂದ್ಯದಲ್ಲಿ ಅವರು 199ಕ್ಕೆ ಔಟ್‌ ಆಗಿದ್ದರು. ಸ್ಕೋರ್‌ 360ಕ್ಕೆ ತಲುಪಿದಾಗ ಶಾದೂìಲ್‌ ಠಾಕೂರ್‌ ಎಸೆತವೊಂದನ್ನು ನಿಭಾಯಿಸಲು ಎಡವಿದ ಎಲ್ಗರ್‌ ಬೌಲ್ಡ್‌ ಆದರು.

Advertisement

ಇದು ಭಾರತದೆದುರು ಎಲ್ಗರ್‌ ದಾಖಲಿಸಿದ ಸರ್ವಾಧಿಕ ವೈಯಕ್ತಿಕ ಗಳಿಕೆ. 2019ರ ವಿಶಾಖಪಟ್ಟಣ ಪಂದ್ಯದಲ್ಲಿ 160 ರನ್‌ ಬಾರಿಸಿದ್ದು ಈವರೆಗಿನ ದಾಖಲೆ ಆಗಿತ್ತು.

ಆರಂಭಿಕನಾಗಿ ಇಳಿದ ಡೀನ್‌ ಎಲ್ಗರ್‌ 6ನೇ ವಿಕೆಟ್‌ ರೂಪದಲ್ಲಿ ಪೆವಿಲಿಯನ್‌ ಸೇರಿಕೊಂಡರು. ಉಸ್ತುವಾರಿ ನಾಯಕನೂ ಆಗಿರುವ ಅವರು ಅತ್ಯಂತ ಜವಾಬ್ದಾರಿಯುತ ಆಟದ ಮೂಲಕ ಇನ್ನಿಂಗ್ಸ್‌ ಬೆಳೆಸಿದರು. ಎದುರಿಸಿದ್ದು 287 ಎಸೆತ, ಹೊಡೆದದ್ದು 28 ಬೌಂಡರಿ.

ಭಾರತವನ್ನು ಸತಾಯಿಸಿದ ಮತ್ತೋರ್ವ ಆಟಗಾರ ಮಾರ್ಕೊ ಜಾನ್ಸೆನ್‌. ಇವರಿಗೆ ಜತೆಗಾರನಿಲ್ಲದ ಕಾರಣ ಸೆಂಚುರಿ ಮಿಸ್‌ ಆಯಿತು. ಜಾನ್ಸೆನ್‌ ಗಳಿಕೆ ಅಜೇಯ 87 ರನ್‌. 147 ಎಸೆತ ಎದುರಿಸಿದ ಅವರು 11 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಿಡಿಸಿದರು. ಎಲ್ಗರ್‌-ಜಾನ್ಸೆನ್‌ ಜೋಡಿಯಿಂದ 6ನೇ ವಿಕೆಟಿಗೆ 111 ರನ್‌ ಒಟ್ಟುಗೂಡಿತು. ದಕ್ಷಿಣ ಆಫ್ರಿಕಾದ ಕೊನೆಯ 4 ವಿಕೆಟ್‌ 48 ರನ್‌ ಅಂತರದಲ್ಲಿ ಉರುಳಿ ಹೋಯಿತು. ಗಾಯಾಳು ಟೆಂಬ ಬವುಮ ಆಡಲಿಳಿಯಲಿಲ್ಲ.

ಭಾರತದ ಐದೂ ಮಂದಿ ಬೌಲರ್ ವಿಕೆಟ್‌ ಕೀಳುವಲ್ಲಿ ಯಶಸ್ವಿಯಾದರೂ ಶಾದೂìಲ್‌ ಠಾಕೂರ್‌ ಮತ್ತು ಚೊಚ್ಚಲ ಟೆಸ್ಟ್‌ ಆಡಿದ ಪ್ರಸಿದ್ಧ್ ಕೃಷ್ಣ ಅತ್ಯಂತ ದುಬಾರಿಯಾದರು. ಶಾರ್ದೂಲ್‌ 19 ಓವರ್‌ಗಳಿಂದ 101 ರನ್‌, ಪ್ರಸಿದ್ಧ್ 20 ಓವರ್‌ಗಳಿಂದ 93 ರನ್‌ ನೀಡಿದರು. 69ಕ್ಕೆ 4 ವಿಕೆಟ್‌ ಉರುಳಿಸಿದ ಬುಮ್ರಾ ಭಾರತದ ಯಶಸ್ವಿ ಬೌಲರ್‌.

ಸಂಕ್ಷಿಪ್ತ ಸ್ಕೋರ್‌: ಭಾರತ-245 ಮತ್ತು 131 (ಕೊಹ್ಲಿ 76, ಗಿಲ್‌ 26, ಬರ್ಗರ್‌ 33ಕ್ಕೆ 4, ಜಾನ್ಸೆನ್‌ 36ಕ್ಕೆ 3, ರಬಾಡ 32ಕ್ಕೆ 2). ದಕ್ಷಿಣ ಆಫ್ರಿಕಾ-408 (ಎಲ್ಗರ್‌ 185, ಜಾನ್ಸೆನ್‌ ಔಟಾಗದೆ 84, ಬೇಡಿಂಗ್‌ಹ್ಯಾಮ್‌ 56, ಝೋರ್ಜಿ 28. ಬುಮ್ರಾ 69ಕ್ಕೆ 4, ಸಿರಾಜ್‌ 91ಕ್ಕೆ 2, ಅಶ್ವಿ‌ನ್‌ 41ಕ್ಕೆ 1, ಪ್ರಸಿದ್ಧ್ 93ಕ್ಕೆ 1, ಠಾಕೂರ್‌ 101ಕ್ಕೆ 1).
ಪಂದ್ಯಶ್ರೇಷ್ಠ: ಡೀನ್‌ ಎಲ್ಗರ್‌.

Advertisement

Udayavani is now on Telegram. Click here to join our channel and stay updated with the latest news.

Next