Advertisement

ಇಂಗ್ಲೆಂಡ್‌-ನ್ಯೂಜಿಲ್ಯಾಂಡ್‌: ಸಮಬಲರ ಸೆಣಸಾಟ

10:45 PM Nov 09, 2021 | Team Udayavani |

ಅಬುಧಾಬಿ: ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ ತಂಡಗಳು ಮತ್ತೂಂದು ಐಸಿಸಿ ಟೂರ್ನಿಯ ನಾಕೌಟ್‌ನಲ್ಲಿ ಸೆಣಸಲಿವೆ. ಬುಧವಾರ ಅಬುಧಾಬಿಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಕೂಟದ ಮೊದಲ ಸೆಮಿಫೈನಲ್‌ನಲ್ಲಿ ಈ ತಂಡ ಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಸಮಬಲದಂತೆ ಗೋಚರಿಸುತ್ತಿರುವುದರಿಂದ ಪೈಪೋಟಿ ತೀವ್ರಗೊಳ್ಳುವುದರಲ್ಲಿ ಅನುಮಾನವಿಲ್ಲ.

Advertisement

ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ ಸೂಪರ್‌-12 ಹಂತದ 5 ಪಂದ್ಯಗಳಲ್ಲಿ ತಲಾ ನಾಲ್ಕನ್ನು ಗೆದ್ದು ಒಂದರಲ್ಲಿ ಸೋಲನುಭವಿಸಿವೆ. ಮಾರ್ಗನ್‌ ಪಡೆ ಗ್ರೂಪ್‌ ಒಂದರ ಅಗ್ರಸ್ಥಾನಿಯಾದರೆ, ವಿಲಿಯಮ್ಸನ್‌ ಟೀಮ್‌ ಗ್ರೂಪ್‌ ಎರಡರ ದ್ವಿತೀಯ ಸ್ಥಾನಿಯಾಗಿ ನಾಕೌಟ್‌ ಪ್ರವೇಶಿಸಿವೆ.

ಬೇರ್‌ಸ್ಟೊ ಓಪನಿಂಗ್‌
ಸತತವಾಗಿ ಗೆಲ್ಲುತ್ತ ಬಂದ ಇಂಗ್ಲೆಂಡ್‌, ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಶರಣಾಗಿ ತನ್ನ ಘನತೆಗೆ ಒಂದಿಷ್ಟು ಪೆಟ್ಟು ಮಾಡಿ ಕೊಂಡಿದೆ. ಹಾಗೆಯೇ ಡ್ಯಾಶಿಂಗ್‌ ಓಪನರ್‌ ಜಾಸನ್‌ ರಾಯ್‌, ವೇಗಿ ಟೈಮಲ್‌ ಮಿಲ್ಸ್‌ ಗಾಯಾಳಾಗಿ ಕೂಟದಿಂದ ಹೊರಬಿದ್ದಿರುವುದೂ ಇಂಗ್ಲೆಂಡಿಗೆ ಬಿದ್ದ ದೊಡ್ಡ ಹೊಡೆತವಾಗಿದೆ.

ಜಾಸನ್‌ ರಾಯ್‌ ಗೈರಿನಿಂದಾಗಿ ಜಾನಿ ಬೇರ್‌ಸ್ಟೊ ಅವರಿಗೆ ಇನ್ನಿಂಗ್ಸ್‌ ಆರಂಭಿಸುವ ಅವಕಾಶ ಲಭಿಸಲಿದೆ. ಬೇರ್‌ಸ್ಟೊ ಮಧ್ಯಮ ಕ್ರಮಾಂಕಕ್ಕಿಂತ ಓಪನರ್‌ ಆಗಿ ಹೆಚ್ಚು ಅಪಾಯಕಾರಿ ಎಂಬುದರಲ್ಲಿ ಅನುಮಾನವಿಲ್ಲ. ಸ್ಯಾಮ್‌ ಬಿಲ್ಲಿಂಗ್ಸ್‌ ಅವರನ್ನು ಸೇರಿಸಿಕೊಂಡು ಇಂಗ್ಲೆಂಡ್‌ ತನ್ನ ಆಡುವ ಬಳಗವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.

ವೇಗಿ ಟೈಮಲ್‌ ಮಿಲ್ಸ್‌ ತೊಡೆಯ ನೋವಿನಿಂದಾಗಿ ಬೇರ್ಪಟ್ಟಿದ್ದಾರೆ. ಡೆತ್‌ ಓವರ್‌ಗಳಲ್ಲಿ ಮಿಲ್ಸ್‌ ಹೆಚ್ಚು ಪರಿಣಾಮ ಕಾರಿಯಾಗಿದ್ದರು. ಇವರ ಸ್ಥಾನಕ್ಕೆ ಬಂದಿರುವ ಮಾರ್ಕ್‌ ವುಡ್‌ ಎಸೆತಗಳಲ್ಲಿ “ಪೇಸ್‌’ ಇದ್ದರೂ “ವೇರಿಯೇಶನ್‌’ ಕಡಿಮೆ. ಅಲ್ಲದೇ ದಕ್ಷಿಣ ಆಫ್ರಿಕಾ ವಿರುದ್ಧ ಬಹಳ ದುಬಾರಿಯಾಗಿದ್ದರು. ಆದರೆ ಅವಳಿ ಸ್ಪಿನ್ನರ್‌ಗಳಾದ ಮೊಯಿನ್‌ ಅಲಿ-ಆದಿಲ್‌ ರಶೀದ್‌ ನ್ಯೂಜಿಲ್ಯಾಂಡಿಗೆ ಬೆದರಿಕೆಯೊಡ್ಡುವ ಎಲ್ಲ ಸಾಧ್ಯತೆ ಇದೆ.

Advertisement

ಇದನ್ನೂ ಓದಿ:ಉ.ಪ್ರ. ಚುನಾವಣೆ: ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ: ಮಾಯಾವತಿ

ಕಿವೀಸ್‌ ಐಸಿಸಿ ಕೂಟಗಳ ಯಶಸ್ಸು
ಇತ್ತೀಚಿನ ಐಸಿಸಿ ಟೂರ್ನಿಗಳಲ್ಲಿ ಚೇತೋಹಾರಿ ಪ್ರದರ್ಶನ ನೀಡುತ್ತ ಬಂದಿರುವ ನ್ಯೂಜಿಲ್ಯಾಂಡ್‌ ಪಾಲಿಗೆ ಇದು ಸೇಡಿನ ಪಂದ್ಯ. 2019ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಅಮೋಘ ಆಟವಾಡಿಯೂ ಬೌಂಡರಿ ಲೆಕ್ಕಾಚಾರದಲ್ಲಿ ಚಾಂಪಿಯನ್‌ ಆಗುವ ಸುವರ್ಣಾವಕಾಶದಿಂದ ವಂಚಿತವಾಗಿತ್ತು. ಅನಂತರ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಮಣಿಸಿ “ಗದೆ’ ಎತ್ತಿದರೂ ಮಾರ್ಗನ್‌ ಬಳಗದೆದುರಿನ ಆ ಆಘಾತ ಮರೆಯಲಾಗದ್ದು. ಇದಕ್ಕೆ ತಕ್ಕ ಶಾಸ್ತಿ ಮಾಡಲು ಇದು ಸೂಕ್ತ ಸಮಯ!

ಕೇನ್‌ ವಿಲಿಯಮ್ಸನ್‌ ಪಡೆ ಒಂಥರ ಸೈಲೆಂಟ್‌ ಕಿಲ್ಲರ್‌. ಅವರ ಬೌಲಿಂಗ್‌ ವಿಭಾಗ ಹೆಚ್ಚು ಘಾತಕ. ಜತೆಗೆ ಉತ್ತಮ ಆಲ್‌ರೌಂಡರ್ ಇದ್ದಾರೆ. ಸ್ಪಿನ್ನರ್‌ಗಳಾದ ಸೋಧಿ, ಸ್ಯಾಂಟ್ನರ್‌ ಯುಎಇ ಟ್ರ್ಯಾಕ್ ಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿದ್ದಾರೆ. ಅಬುಧಾಬಿ ಟ್ರ್ಯಾಕ್ ಬ್ಯಾಟಿಂಗಿಗೆ ಹೆಚ್ಚಿನ ನೆರವು ನೀಡುತ್ತ ಬಂದಿದೆ. ಗಪ್ಟಿಲ್‌, ಮಿಚೆಲ್‌, ವಿಲಿಯಮ್ಸನ್‌ ಗಟ್ಟಿಯಾಗಿ ನಿಂತರೆ ನ್ಯೂಜಿಲ್ಯಾಂಡ್‌ ತನ್ನ ಯೋಜನೆಯಲ್ಲಿ ಯಶಸ್ಸು ಕಂಡೀತು.

ಎಲಿಮಿನೇಟ್‌ ತಂಡಗಳ ಪ್ಲೇಯಿಂಗ್‌ ಇಲೆವೆನ್‌
ದುಬಾೖ: ಐಸಿಸಿ ಟಿ20 ವಿಶ್ವಕಪ್‌ ಕಣದಲ್ಲಿ ಉಳಿದಿರುವ ತಂಡಗಳ ಸಂಖ್ಯೆಯೀಗ ನಾಲ್ಕಕ್ಕೆ ಇಳಿದಿದೆ. ಸೂಪರ್‌-12 ಹಂತದಲ್ಲಿ ಆಡಿದ 8 ತಂಡಗಳು ನಾಕೌಟ್‌ ತಲುಪಲಾಗದೆ ಕೂಟದಿಂದ ಹೊರಬಿದ್ದಿವೆ.

ಆದರೆ ಈ ತಂಡದಲ್ಲೂ ಅಮೋಘ ನಿರ್ವಹಣೆ ತೋರಿದ ಆಟಗಾರರಿದ್ದಾರೆ. ಇವರನ್ನೊಳಗೊಂಡ ಆಡುವ ಬಳಗವೊಂದನ್ನು ರಚಿಸಿದರೆ ಹೇಗಿದ್ದೀತು? ಇದರಲ್ಲಿ ಯಾರೆಲ್ಲ ಇರಬಹುದು? ಕುತೂಹಲ ಸಹಜ. ಇಂಥದೊಂದು ತಂಡ ಇಲ್ಲಿದೆ.

ಓಪನರ್: ಕೆ.ಎಲ್‌. ರಾಹುಲ್‌ (ವಿ.ಕೀ.), ಚರಿತ ಅಸಲಂಕ.
ಮಿಡ್ಲ್ ಆರ್ಡರ್‌: ರಸ್ಸಿ ವಾನ್‌ ಡರ್‌ ಡುಸೆನ್‌, ಐಡನ್‌ ಮಾರ್ಕ್‌ರಮ್‌, ನಜಿಬುಲ್ಲ ಜದ್ರಾನ್‌. ಆಲ್‌ರೌಂಡರ್/ಸ್ಪಿನ್ನರ್: ಡೇವಿಡ್‌ ವೀಸ್‌, ರವೀಂದ್ರ ಜಡೇಜ, ವನಿಂದು ಹಸರಂಗ.
ಬೌಲರ್: ಡ್ವೇನ್‌ ಪ್ರಿಟೋರಿಯಸ್‌, ರಬಾಡ, ಅನ್ರಿಚ್‌ ನೋರ್ಜೆ.

Advertisement

Udayavani is now on Telegram. Click here to join our channel and stay updated with the latest news.

Next