Advertisement

ಕುಸಿತದ ದಾಖಲೆ; ಭಾರತಕ್ಕೆ ಲಂಕಾ ಬಲೆ

06:00 AM Dec 11, 2017 | Team Udayavani |

ಧರ್ಮಶಾಲಾ: ಕಲ್ಪಿಸಲೂ ಆಗದ ಬ್ಯಾಟಿಂಗ್‌ ಕುಸಿತವೊಂದಕ್ಕೆ ಸಾಕ್ಷಿಯಾದ ಭಾರತ, ಧರ್ಮಶಾಲಾದ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾಕ್ಕೆ 7 ವಿಕೆಟ್‌ಗಳಿಂದ ಶರಣಾಗಿದೆ. ಇದರಿಂದ ಲಂಕೆಯ ಸತತ ಸೋಲಿನ ದೊಡ್ಡ ಸರಪಳಿಯೊಂದು 12 ಪಂದ್ಯಗಳ ಬಳಿಕ ಮುರಿಯಲ್ಪಟ್ಟಿತು. ಜತೆಗೆ ಭಾರತದೆದುರು ಈ ವರ್ಷ ಮೊದಲ ಜಯ ಸಾಧಿಸಿದ ಹಿರಿಮೆಗೂ ಪಾತ್ರವಾಯಿತು.

Advertisement

“ಸೀಮರ್‌ ಫ್ರೆಂಡ್ಲಿ’ ಟ್ರ್ಯಾಕ್‌ ಮೇಲೆ ಟಾಸ್‌ ಗೆದ್ದದ್ದು ಶ್ರೀಲಂಕಾಗೆ ಬಂಪರ್‌ ಲಾಭ ತಂದಿತ್ತಿತು. ನಾಯಕ ತಿಸರ ಪೆರೆರ ಸ್ವಲ್ಪವೂ ವಿಳಂಬಿಸದೆ ಬೌಲಿಂಗ್‌ ಆರಿಸಿಕೊಂಡರು. ಸುರಂಗ ಲಕ್ಮಲ್‌ ಆ್ಯಂಡ್‌ ಕಂಪೆನಿ ಟೀಮ್‌ ಇಂಡಿಯಾದ ಮೇಲೆ ಮುಗಿಬಿತ್ತು. ಪಟಪಟನೆ ವಿಕೆಟ್‌ ಉರುಳಿಸಿಕೊಳ್ಳುತ್ತಲೇ ಹೋದ ಭಾರತ 38.2 ಓವರ್‌ಗಳಲ್ಲಿ 112 ರನ್ನಿಗೆ ತನ್ನ ಇನ್ನಿಂಗ್ಸ್‌ ಮುಗಿಸಿತು. ಲಂಕೆಯ 2 ವಿಕೆಟ್‌ ಬೇಗನೇ ಬಿತ್ತಾದರೂ ಈ ಸಣ್ಣ ಮೊತ್ತವನ್ನು ಯಾವುದೇ ಆತಂಕವಿಲ್ಲದೆ ಹಿಂದಿಕ್ಕಿತು. 20.4 ಓವರ್‌ಗಳಲ್ಲಿ 3 ವಿಕೆಟಿಗೆ 114 ರನ್‌ ಮಾಡಿ ಗೆಲುವಿನ ಸಂಭ್ರಮ ಆಚರಿಸಿತು. ಭಾರತದ ಮೊತ್ತದಲ್ಲಿ ಧೋನಿ ಪಾಲೇ 65 ರನ್‌ ಎಂಬುದು ಎದ್ದು ಕಂಡ ಅಂಶ.

ವಿರಾಟ್‌ ಕೊಹ್ಲಿ ಗೈರಲ್ಲಿ ಮೊದಲ ಸಲ ಭಾರತ ತಂಡವನ್ನು ಮುನ್ನಡೆಸಿದ ರೋಹಿತ್‌ ಶರ್ಮ ಪಾಲಿಗೆ ಈ ಫ‌ಲಿತಾಂಶ ಕೆಟ್ಟ ಕನಸಾಗಿ ಉಳಿಯುವುದರಲ್ಲಿ ಅನುಮಾನವಿಲ್ಲ. ಹಾಗೆಯೇ ಮೊದಲ ಬಾರಿಗೆ ಶ್ರೀಲಂಕಾದ ನೇತೃತ್ವ ವಹಿಸಿದ ತಿಸರ ಪೆರೆರ ಪಾಲಿಗೆ ಇದೊಂದು ನೂತನ ಮೈಲುಗಲ್ಲಾಗಿ ಉಳಿಯಲಿದೆ.

ಭಾರತಕ್ಕೆ ಲಕ್ಮಲ್‌ “ಸುರಂಗ’!
ಶ್ರೀಲಂಕಾದ ತ್ರಿವಳಿ ಸೀಮರ್‌ಗಳಾದ ಸುರಂಗ ಲಕ್ಮಲ್‌ (13ಕ್ಕೆ 4), ನುವಾನ್‌ ಪ್ರದೀಪ್‌ (37ಕ್ಕೆ 2) ಮತ್ತು ಏಂಜೆಲೊ ಮ್ಯಾಥ್ಯೂಸ್‌ (8ಕ್ಕೆ 1) ಸೇರಿಕೊಂಡು ಸ್ವಲ್ಪವೂ ಬಿಡುವು ಕೊಡದೆ ಭಾರತದ ವಿಕೆಟ್‌ಗಳನ್ನು ಉರುಳಿಸುತ್ತ ಹೋದರು. ಉಳಿದ ಮೂವರು ಬೌಲರ್‌ಗಳಾದ ತಿಸರ ಪೆರೆರ, ಅಖೀಲ ಧನಂಜಯ ಮತ್ತು ಸಚಿತ ಪತಿರಣ ಕೂಡ ಒಂದೊಂದು ವಿಕೆಟ್‌ ಕಿತ್ತರು. ಅಲ್ಲಿಗೆ ಶ್ರೀಲಂಕಾದ 6 ಮಂದಿ ಬೌಲರ್‌ಗಳ “ವಿಕೆಟ್‌ ಬೇಟೆಯ ಪ್ಯಾಕೇಜ್‌’ ಪರಿಪೂರ್ಣಗೊಂಡಿತು. 10 ಓವರ್‌ಗಳನ್ನು ಒಂದೇ ಸ್ಪೆಲ್‌ನಲ್ಲಿ ಪೂರ್ತಿಗೊಳಿಸಿ, 13 ರನ್ನಿಗೆ 4 ವಿಕೆಟ್‌ ಹಾರಿಸಿದ ಲಕ್ಮಲ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ದ್ವಿತೀಯ ಓವರ್‌ ಎಸೆಯಲು ಬಂದ ಮ್ಯಾಥ್ಯೂಸ್‌ ಕೊನೆಯ ಎಸೆತದಲ್ಲಿ ಧವನ್‌ ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿ ಭಾರತದ ಕುಸಿತಕ್ಕೆ ಚಾಲನೆ ಕೊಟ್ಟರು. ಬಳಿಕ ಸುರಂಗ ಲಕ್ಮಲ್‌ ಘಾತಕವಾಗಿ ಎರಗತೊಡಗಿದರು. ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಒಂದೊಂದು ಎಸೆತವೂ ಕಬಿ½ಣದ ಕಡಲೆಯಾಗಿ ಗೋಚರಿಸಿತು. 16 ರನ್‌ ಆಗುವಷ್ಟರಲ್ಲಿ ಧವನ್‌ ಜತೆಗೆ ರೋಹಿತ್‌, ಕಾರ್ತಿಕ್‌, ಪಾಂಡೆ ಮತ್ತು ಮೊದಲ ಪಂದ್ಯವಾಡಿದ ಅಯ್ಯರ್‌ ಪೆವಿಲಿಯನ್‌ ಸೇರಿಯಾಗಿತ್ತು. ಇವರ್ಯಾರೂ ಎರಡಂಕೆಯ ಗಡಿ ದಾಟಲಿಲ್ಲ. ಧವನ್‌, ಕಾರ್ತಿಕ್‌ ಅವರದು ಶೂನ್ಯ ಸಂಪಾದನೆ.

Advertisement

ಕನಿಷ್ಠ ಮೊತ್ತದಿಂದ ಪಾರು!
ಸ್ಕೋರ್‌ 29 ರನ್‌ ಆಗುವಾಗ 7 ವಿಕೆಟ್‌ ಹಾರಿಹೋಗಿತ್ತು. ಭಾರತ ತನ್ನ ಏಕದಿನ ಇತಿಹಾಸದ ಕನಿಷ್ಠ ಮೊತ್ತ ದಾಖಲಿಸಬಹುದೆಂಬ ಆತಂಕ ಮೂಡಿತು. ಆದರೆ ಧೋನಿ ಸಾಹಸದಿಂದಾಗಿ ಟೀಮ್‌ ಇಂಡಿಯಾ ನೂರರ ಗಡಿ ದಾಟುವಲ್ಲಿ ಯಶಸ್ವಿಯಾಯಿತು; ಅಷ್ಟರ ಮಟ್ಟಿಗೆ ಮರ್ಯಾದೆ ಉಳಿಸಿಕೊಂಡಿತು. 2000ದ ಶಾರ್ಜಾ ಮುಖಾಮುಖೀಯಲ್ಲಿ ಶ್ರೀಲಂಕಾ ಎದುರೇ 54 ರನ್ನಿಗೆ ಆಲೌಟಾದದ್ದು ಭಾರತದ ಕನಿಷ್ಠ ಮೊತ್ತವಾಗಿದೆ. ಧೋನಿ 87 ಎಸೆತಗಳಿಂದ 65 ರನ್‌ ಬಾರಿಸಿ ಕೊನೆಯವರಾಗಿ ಔಟಾದರು. ಇದರಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್‌ ಸೇರಿತ್ತು.

ಧೋನಿ-ಕುಲದೀಪ್‌ 8ನೇ ವಿಕೆಟಿಗೆ 47 ಎಸೆತಗಳಿಂದ 41 ರನ್‌ ಒಟ್ಟುಗೂಡಿಸಿದರು. ಧೋನಿ ಹೊರತುಪಡಿಸಿದರೆ 19 ರನ್‌ ಮಾಡಿದ ಕುಲದೀಪ್‌ ಯಾದವ್‌ ಅವರದೇ ಹೆಚ್ಚಿನ ಗಳಿಕೆ. ಎರಡಂಕೆಯ ರನ್‌ ದಾಖಲಿಸಿದ ಮತ್ತೂಬ್ಬ ಆಟಗಾರ ಹಾರ್ದಿಕ್‌ ಪಾಂಡ್ಯ (10). ದಕ್ಷಿಣ ಆಫ್ರಿಕಾ ಪ್ರವಾಸ ಹಾಗೂ ವಿಶ್ವಕಪ್‌ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಸೀಮ್‌ ಮತ್ತು ಸ್ವಿಂಗ್‌ ಎಸೆತಗಳು ದುಃಸ್ವಪ್ನವಾಗಿ ಪರಿಣಮಿಸುತ್ತಿರುವುದು ಗಂಭೀರವಾಗಿ ಯೋಚಿಸಬೇಕಾದ ಸಂಗತಿಯಾಗಿದೆ.

ದಡ ಸೇರಿದ ಲಂಕಾ
ಚೇಸಿಂಗ್‌ ವೇಳೆ ಲಂಕಾ ಗುಣತಿಲಕ (1) ಮತ್ತು ತಿರಿಮನ್ನೆ (0) ಅವರನ್ನು 19 ರನ್ನಿಗೆ ಕಳೆದುಕೊಂಡಿತು. ಭಾರತದ ಸೀಮರ್‌ಗಳು ತಿರುಗಿ ಬೀಳುವ ಸಾಧ್ಯತೆ ಕಂಡುಬಂತು. ಆದರೆ ತರಂಗ (49), ಮ್ಯಾಥ್ಯೂಸ್‌ (ಔಟಾಗದೆ 25), ಡಿಕ್ವೆಲ್ಲ (ಔಟಾಗದೆ 26) ಸೇರಿಕೊಂಡು ತಂಡವನ್ನು ಸುರಕ್ಷಿತವಾಗಿ ದಡ ಮುಟ್ಟಿಸಿದರು.

ಸ್ಪಿನ್ನರ್‌ಗಳಾದ ಯಾದವ್‌ ಮತ್ತು ಚಾಹಲ್‌ ಅವರನ್ನು ರೋಹಿತ್‌ ಶರ್ಮ ದಾಳಿಗಿಳಿಸದಿದ್ದುದು ಅಚ್ಚರಿಯಾಗಿ ಕಂಡಿತು.

ಸ್ಕೋರ್‌ಪಟ್ಟಿ
ಭಾರತ
ರೋಹಿತ್‌ ಶರ್ಮ    ಸಿ ಡಿಕ್ವೆಲ್ಲ ಬಿ ಲಕ್ಮಲ್‌    2
ಶಿಖರ್‌ ಧವನ್‌    ಎಲ್‌ಬಿಡಬ್ಲ್ಯು ಮ್ಯಾಥ್ಯೂಸ್‌    0
ಶ್ರೇಯಸ್‌ ಅಯ್ಯರ್‌    ಬಿ ಪ್ರದೀಪ್‌    9
ದಿನೇಶ್‌ ಕಾರ್ತಿಕ್‌    ಎಲ್‌ಬಿಡಬ್ಲ್ಯು ಲಕ್ಮಲ್‌    0
ಮನೀಷ್‌ ಪಾಂಡೆ    ಸಿ ಮ್ಯಾಥ್ಯೂಸ್‌ ಬಿ ಲಕ್ಮಲ್‌    2
ಎಂ.ಎಸ್‌. ಧೋನಿ    ಸಿ ಗುಣತಿಲಕ ಬಿ ಪೆರೆರ    65
ಹಾರ್ದಿಕ್‌ ಪಾಂಡ್ಯ    ಸಿ ಮ್ಯಾಥ್ಯೂಸ್‌ ಬಿ ಪ್ರದೀಪ್‌    10
ಭುವನೇಶ್ವರ್‌ ಕುಮಾರ್‌    ಸಿ ಡಿಕ್ವೆಲ್ಲ ಬಿ ಲಕ್ಮಲ್‌    0
ಕುಲದೀಪ್‌ ಯಾದವ್‌    ಸ್ಟಂಪ್ಡ್ ಡಿಕ್ವೆಲ್ಲ ಬಿ ಧನಂಜಯ    19
ಜಸ್‌ಪ್ರೀತ್‌ ಬುಮ್ರಾ    ಬಿ ಪತಿರಣ    0
ಯಜುವೇಂದ್ರ ಚಾಹಲ್‌    ಔಟಾಗದೆ    0
ಇತರ        5
ಒಟ್ಟು  (38.2 ಓವರ್‌ಗಳಲ್ಲಿ ಆಲೌಟ್‌)        112
ವಿಕೆಟ್‌ ಪತನ: 1-0, 2-2, 3-8, 4-16, 5-16, 6-28, 7-29, 8-70, 9-87.
ಬೌಲಿಂಗ್‌:
ಸುರಂಗ ಲಕ್ಮಲ್‌        10-4-13-4
ಏಂಜೆಲೊ ಮ್ಯಾಥ್ಯೂಸ್‌        5-2-8-1
ನುವಾನ್‌ ಪ್ರದೀಪ್‌        10-4-37-2
ತಿಸರ ಪೆರೆರ        4.2-0-29-1
ಅಖೀಲ ಧನಂಜಯ        5-2-7-1
ಸಚಿತ ಪತಿರಣ        4-1-16-1
ಶ್ರೀಲಂಕಾ
ದನುಷ್ಕ ಗುಣತಿಲಕ    ಸಿ ಧೋನಿ ಬಿ ಬುಮ್ರಾ    1
ಉಪುಲ್‌ ತರಂಗ    ಸಿ ಧವನ್‌ ಬಿ ಪಾಂಡ್ಯ    49
ಲಹಿರು ತಿರಿಮನ್ನೆ    ಬಿ ಭುವನೇಶ್ವರ್‌    0
ಏಂಜೆಲೊ ಮ್ಯಾಥ್ಯೂಸ್‌    ಔಟಾಗದೆ    25
ನಿರೋಷನ್‌ ಡಿಕ್ವೆಲ್ಲ    ಔಟಾಗದೆ    26
ಇತರ        13
ಒಟ್ಟು  (20.4 ಓವರ್‌ಗಳಲ್ಲಿ 3 ವಿಕೆಟಿಗೆ)        114
ವಿಕೆಟ್‌ ಪತನ: 1-7, 2-19, 3-65.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        8.4-1-42-1
ಜಸ್‌ಪ್ರೀತ್‌ ಬುಮ್ರಾ        7-1-32-1
ಹಾರ್ದಿಕ್‌ ಪಾಂಡ್ಯ        5-0-39-1

ಪಂದ್ಯಶ್ರೇಷ್ಠ: ಸುರಂಗ ಲಕ್ಮಲ್‌

ಎಕ್ಸ್‌ಟ್ರಾ ಇನ್ನಿಂಗ್ಸ್‌
* ಭಾರತ ತವರಿನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ವೇಳೆ 3ನೇ ಅತಿ ಕಡಿಮೆ ರನ್ನಿಗೆ ಆಲೌಟ್‌ ಆಯಿತು (112). 1986ರ ಕಾನ್ಪುರ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧವೇ 78 ರನ್ನಿಗೆ ಕುಸಿದದ್ದು ಭಾರತದ ಅತ್ಯಂತ ಕಡಿಮೆ ಸ್ಕೋರ್‌ ಆಗಿದೆ.
* ಭಾರತದೆದುರು ಅತ್ಯಂತ ಹೆಚ್ಚು ಮೇಡನ್‌ ಓವರ್‌ ಎಸೆದ ದಾಖಲೆ ಶ್ರೀಲಂಕಾದ್ದಾಯಿತು (13 ಓವರ್‌). ಇದು ಕಳೆದೊಂದು ದಶಕದಲ್ಲಿ ಕಂಡುಬಂದ ಅತ್ಯಧಿಕ ಮೇಡನ್‌ ಓವರ್‌ ಎನಿಸಿದೆ. ಭಾರತದೆದುರು ಅತಿ ಹೆಚ್ಚಿನ ಮೇಡನ್‌ ಓವರ್‌ ಎಸೆದ ದಾಖಲೆ ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ ಹೆಸರಲ್ಲಿತ್ತು (ತಲಾ 12 ಓವರ್‌). ಕ್ರಮವಾಗಿ, 1975ರ ವಿಶ್ವಕಪ್‌ನ ಲಾರ್ಡ್ಸ್‌ ಪಂದ್ಯದಲ್ಲಿ ಹಾಗೂ 1981ರ ಆಕ್ಲೆಂಡ್‌ ಪಂದ್ಯದಲ್ಲಿ ಇದು ದಾಖಲಾಗಿತ್ತು.
* ಭಾರತದ 112 ರನ್ನಿನಲ್ಲಿ ಧೋನಿ ಒಬ್ಬರೇ ಶೇ. 58.03ರಷ್ಟು ರನ್‌ ಹೊಡೆದರು (65). ಇದು ಪೂರ್ತಿಗೊಂಡ ಇನ್ನಿಂಗ್ಸ್‌ ವೇಳೆ ಭಾರತೀಯ ಆಟಗಾರನೊಬ್ಬನ 4ನೇ ಅತಿ ಹೆಚ್ಚಿನ ವೈಯಕ್ತಿಕ ಗಳಿಕೆ.
* ಭಾರತದ ಮೊದಲ 5 ವಿಕೆಟ್‌ ಬರೀ 16 ರನ್ನಿಗೆ ಉರುಳಿತು. ಇದು ಏಕದಿನ ಚರಿತ್ರೆಯಲ್ಲೇ ಭಾರತದ ಮೊದಲ 5 ವಿಕೆಟಿಗೆ ಒಟ್ಟುಗೂಡಿದ ಅತ್ಯಂತ ಕನಿಷ್ಠ ಗಳಿಕೆ. 1983ರ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ 17ಕ್ಕೆ 5 ವಿಕೆಟ್‌ ಉರುಳಿದ್ದು ಹಿಂದಿನ ದಾಖಲೆ. ಅಂದು ಕಪಿಲ್‌ದೇವ್‌ ಅಜೇಯ 175 ರನ್‌ ಬಾರಿಸಿ ಏಕದಿನ ಕ್ರಿಕೆಟಿನ ಅದ್ಭುತ ಬ್ಯಾಟಿಂಗಿಗೆ ಸಾಕ್ಷಿಯಾಗಿದ್ದರು.
* ಶ್ರೀಲಂಕಾ ಎದುರಾಳಿಯ ಮೊದಲ 5 ವಿಕೆಟ್‌ಗಳನ್ನು 2ನೇ ಅತಿ ಕಡಿಮೆ ಮೊತ್ತಕ್ಕೆ ಉರುಳಿಸಿತು. 2003ರಲ್ಲಿ ಕೆನಡಾ ವಿರುದ್ಧ 12 ರನ್ನಿಗೆ 5 ವಿಕೆಟ್‌ ಕಿತ್ತದ್ದು ಲಂಕೆಯ ದಾಖಲೆಯಾಗಿದೆ.
* ಭಾರತದ ಮೊದಲ 5 ಮಂದಿ ಆಟಗಾರರು 5ನೇ ಸಲ ಎರಡಂಕೆಯ ಮೊತ್ತ ದಾಖಲಿಸಲು ವಿಫ‌ಲರಾದರು.
* ಭಾರತದ ಮೊದಲ 5 ಮಂದಿ ಆಟಗಾರರು ಒಟ್ಟುಸೇರಿ ಕೇವಲ 13 ರನ್‌ ಮಾಡಿದರು. ಇದು ಭಾರತೀಯ ಏಕದಿನದ ಮೊದಲ ಐವರ ಕನಿಷ್ಠ ಮೊತ್ತದ “ದಾಖಲೆ’ಯಾಗಿದೆ.
* ಭಾರತ 2001ರ ಬಳಿಕ ಮೊದಲ 5 ಓವರ್‌ ಹಾಗೂ ಮೊದಲ 10 ಓವರ್‌ಗಳಲ್ಲಿ ಅತ್ಯಂತ ಕಡಿಮೆ ರನ್‌ ಮಾಡಿತು (2ಕ್ಕೆ 2 ರನ್‌ ಹಾಗೂ 3ಕ್ಕೆ 11 ರನ್‌).
* ದಿನೇಶ್‌ ಕಾರ್ತಿಕ್‌ ಅತ್ಯಧಿಕ 18 ಎಸೆತ ಎದುರಿಸಿ ಖಾತೆ ತೆರೆಯದೆ ಔಟಾಗಿ ಭಾರತೀಯ ದಾಖಲೆ ಸ್ಥಾಪಿಸಿದರು.
* ಶಿಖರ್‌ ಧವನ್‌ ಏಕದಿನದಲ್ಲಿ 3ನೇ ಸಲ ಸೊನ್ನೆಗೆ ಔಟಾದರು.

Advertisement

Udayavani is now on Telegram. Click here to join our channel and stay updated with the latest news.

Next