Advertisement

ಮುಂಬಯಿ ಸರಣಿ ಸ್ಫೋಟ ಪ್ರಕರಣ : ಅಬು ಸಲೇಂ ದೋಷಿ

10:30 AM Jun 17, 2017 | Team Udayavani |

ಮುಂಬಯಿ: ಬರೋಬ್ಬರಿ 24 ವರ್ಷಗಳ ಬಳಿಕ 257 ಮಂದಿ ಅಮಾಯಕರನ್ನು ಬಲಿ ತೆಗೆದುಕೊಂಡ 1993ರ ಮುಂಬಯಿ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ತೀರ್ಪು ಪ್ರಕಟಗೊಂಡಿದೆ. ಶುಕ್ರವಾರ ತೀರ್ಪು ಪ್ರಕಟಿಸಿದ ಮುಂಬಯಿಯ ಟಾಡಾ ನ್ಯಾಯಾಲಯ, ಉಗ್ರ ಹಾಗೂ ಗ್ಯಾಂಗ್‌ಸ್ಟರ್‌ ಅಬು ಸಲೇಂ, ಸ್ಫೋಟದ ಮಾಸ್ಟರ್‌ಮೈಂಡ್‌ ಮುಸ್ತಫಾ ದೊಸ್ಸಾ ಸಹಿತ 6 ಆರೋಪಿಗಳನ್ನು ದೋಷಿ ಎಂದು ಘೋಷಿಸಿದೆ. 7 ಆರೋಪಿಗಳ ಪೈಕಿ ಓರ್ವ (ಅಬ್ದುಲ್‌ ಖಯ್ಯೂಮ್‌)ನನ್ನು ಮಾತ್ರ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಲಾಗಿದೆ. ಎಲ್ಲ 7 ಆರೋಪಿಗಳ ವಿರುದ್ಧವೂ ಕ್ರಿಮಿನಲ್‌ ಸಂಚು, ಕೊಲೆ ಹಾಗೂ ದೇಶದ ವಿರುದ್ಧ ಯುದ್ಧ ಸಾರಿದ ಆರೋಪಗಳನ್ನು ಹೊರಿಸಲಾಗಿತ್ತು. ಆದರೆ, ಇವರ ವಿರುದ್ಧದ ‘ದೇಶದ ವಿರುದ್ಧ ಯುದ್ಧ ಸಾರಿದ’ ಆರೋಪವನ್ನು ಕೋರ್ಟ್‌ ಕೈಬಿಟ್ಟಿದೆ.

Advertisement

ವಿಚಾರಣೆಯ ಆರಂಭಿಕ ಹಂತವು 2007ರಲ್ಲಿ ಮುಗಿದಿದ್ದು, ಆಗ ಟಾಡಾ ಕೋರ್ಟ್‌ 100 ಮಂದಿ ಆರೋಪಿಗಳನ್ನು ದೋಷಿಯೆಂದು ಘೋಷಿಸಿ, 23 ಮಂದಿಯನ್ನು ಖುಲಾಸೆಗೊಳಿಸಿತ್ತು. ಮೊದಲ ಹಂತದ ವಿಚಾರಣೆ ಪೂರ್ಣಗೊಳ್ಳುವ ಸಮಯದಲ್ಲಿ ಅಬು ಸಲೇಂ, ಮುಸ್ತಫಾ ದೊಸ್ಸಾ, ಕರೀಮುಲ್ಲಾ ಖಾನ್‌, ಫಿರೋಜ್‌ ಅಬ್ದುಲ್‌ ರಶೀದ್‌ ಖಾನ್‌, ರಿಯಾಝ್ ಸಿದ್ದೀಕಿ, ತಾಹಿರ್‌ ಮರ್ಚೆಂಟ್‌ ಮತ್ತು ಅಬ್ದುಲ್‌ ಖಯ್ಯೂಮ್‌ ಬಂಧಿತರಾಗಿದ್ದರು. ಹೀಗಾಗಿ, ಪ್ರಧಾನ ಕೇಸಿನಿಂದ ಪ್ರತ್ಯೇಕಗೊಳಿಸಿ ಈ 7 ಆರೋಪಿಗಳ ವಿಚಾರಣೆಯನ್ನು ಆರಂಭಿಸಲಾಗಿತ್ತು.

ಸೋಮವಾರದಿಂದ ಅಪರಾಧಿಗಳ ಶಿಕ್ಷೆ ನಿಗದಿಗೆ ಸಂಬಂಧಿಸಿದ ವಾದ- ಪ್ರತಿವಾದ ಆರಂಭವಾಗುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಈ ಪ್ರಕರಣದಲ್ಲಿ ನ್ಯಾಯಾಲಯವು 750 ಪ್ರಾಸಿಕ್ಯೂಷನ್‌ ಸಾಕ್ಷ್ಯಗಳು ಹಾಗೂ 50 ಇತರ ಸಾಕ್ಷ್ಯಗಳ ಹೇಳಿಕೆಯನ್ನು ದಾಖಲಿಸಿದೆ. ಅಬು ಸಲೇಂ ಸಹಿತ ಮೂವರು ಆರೋಪಿಗಳು ತನಿಖೆ ವೇಳೆಯೇ ಸಿಬಿಐ ಮುಂದೆ ತಪ್ಪೊಪ್ಪಿಕೊಂಡಿದ್ದರು.

ವಿಚಾರಣೆಯಲ್ಲಿ ವಿಳಂಬ: ಪ್ರಕರಣದ 7 ಮಂದಿ ಆರೋಪಿಗಳನ್ನು ಬಂಧಿಸಿದ್ದೇ 2003ರಿಂದ 2010ರ ಅವಧಿಯಲ್ಲಿ. ಇದಕ್ಕೂ ಮೊದಲೇ 123 ಮಂದಿ ಆರೋಪಿಗಳ ವಿಚಾರಣೆ 1995ರಲ್ಲಿ ಆರಂಭವಾಗಿ 2002ರಲ್ಲಿ ಪೂರ್ಣಗೊಂಡಿತ್ತು. 2006ರಲ್ಲಿ ಇದರ ತೀರ್ಪು ಕೂಡ ಹೊರಬಂದು, ದೋಷಿಗಳಿಗೆ ಗಲ್ಲು ಶಿಕ್ಷೆ ಘೋಷಿಸಲಾಗಿತ್ತು. ಅನಂತರ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ 2013ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ನ್ಯಾಯಾಲಯವು ಉಗ್ರ ಯಾಕೂಬ್‌ ಮೆಮನ್‌ನ ಗಲ್ಲು ಶಿಕ್ಷೆಯನ್ನು ಕಾಯಂಗೊಳಿಸಿ, ಉಳಿದ 10 ಮಂದಿಯ ಶಿಕ್ಷೆಯನ್ನು ಜೀವಾವಧಿಗಿಳಿಸಿತು ಹಾಗೂ ನಟ ಸಂಜಯ್‌ ದತ್‌ ಕೂಡ ಶಿಕ್ಷೆ ಅನುಭವಿಸಬೇಕು ಎಂದು ಹೇಳಿತು. ಅದರಂತೆ, 2015ರ ಜು. 30ರಂದು ಯಾಕೂಬ್‌ನನ್ನು ಹಲವು ಹೈಡ್ರಾಮಾಗಳ ಬಳಿಕ ಗಲ್ಲಿಗೇರಿಸಲಾಯಿತು.

ಏನಿದು ಪ್ರಕರಣ?
1993ರ ಮಾ. 12ರಂದು ವಾಣಿಜ್ಯ ನಗರಿಯ ವಿವಿಧ ಪ್ರದೇಶಗಳಲ್ಲಿ ಕೇವಲ 2 ಗಂಟೆಯ ಅಂತರದಲ್ಲಿ ಸರಣಿ ಸ್ಫೋಟಗಳು ನಡೆದವು. ಒಂದರ ಅನಂತರ ಒಂದರಂತೆ ಬರೋಬ್ಬರಿ 12 ಬಾಂಬುಗಳು ಸ್ಫೋಟಗೊಂಡ ಪರಿಣಾಮ 257 ಮಂದಿ ಪ್ರಾಣ ತೆರಬೇಕಾಯಿತು. ಸ್ಫೋಟದಿಂದ 713 ಮಂದಿ ಗಂಭೀರವಾಗಿ ಗಾಯಗೊಂಡರು. ಸ್ಫೋಟದ ತೀವ್ರತೆಗೆ 27 ಕೋಟಿ ರೂ.ಗಳಷ್ಟು ವೆಚ್ಚದ ಆಸ್ತಿಪಾಸ್ತಿಗಳಿಗೆ ಹಾನಿಯಾಗಿತ್ತು. ಇದು ಭಾರೀ ಪ್ರಮಾಣದಲ್ಲಿ ಆರ್‌ಡಿಎಕ್ಸ್‌ ಸ್ಫೋಟಕವನ್ನು ಬಳಸಿ ಮಾಡಿದ ಜಗತ್ತಿನ ಮೊದಲ ಭಯೋತ್ಪಾದಕ ದಾಳಿಯಾಗಿತ್ತು. ಅಯೋಧ್ಯೆ ವಿವಾದಿತ ಕಟ್ಟಡ ಧ್ವಂಸ ಪ್ರಕರಣಕ್ಕೆ ಪ್ರತೀಕಾರವಾಗಿ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಹಾಗೂ ಈ ಏಳು ಮಂದಿ ಉಗ್ರರು ಸೇರಿಕೊಂಡು ದಾಳಿಯ ಸಂಚು ರೂಪಿಸಿದ್ದರು.

Advertisement

ಪ್ರಕರಣದಲ್ಲಿ ನಮ್ಮ ತಂಡ ನಡೆಸಿದ ತನಿಖೆಯನ್ನು ನ್ಯಾಯಾಲಯವು ಪುರಸ್ಕರಿಸಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದು ಮುಂಬಯಿ ಪೊಲೀಸರ ತಂಡವು ಹಗಲು ರಾತ್ರಿ ಶ್ರಮಿಸಿತ್ತು. ಟಾಡಾ ಕೋರ್ಟ್‌ನ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ನನಗೆ ಇವತ್ತು ತೃಪ್ತಿಯಾಯಿತು.
– ರಾಕೇಶ್‌ ಮರಿಯಾ, ನಿವೃತ್ತ ಐಪಿಎಸ್‌ ಅಧಿಕಾರಿ

ಇನ್ನೂ  ಪ್ರಕರಣ ಸಮಾಪ್ತಿಯಾಗಿಲ್ಲ. ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಮತ್ತು ಇತರ ಸಂಚುಕೋರರಿಗೆ ಶಿಕ್ಷೆಯಾಗುವಂತೆ ಮಾಡುವಲ್ಲಿ ಸರಕಾರದ ವೈಫ‌ಲ್ಯವು ಸ್ಫೋಟದ ಸಂತ್ರಸ್ತರಿಗೆ ಪೂರ್ಣಪ್ರಮಾಣದಲ್ಲಿ ನ್ಯಾಯ ಸಿಗದಂತೆ ಮಾಡಿದೆ.
– ಎಂ.ಎನ್‌.ಸಿಂಗ್‌, ಮುಂಬಯಿ ನಿವೃತ್ತ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next