ಬೆಂಗಳೂರು: ರಾಜ್ಯದ ಹಲವು ಯೋಜನೆಗಳಿಗಾಗಿ ನಬಾರ್ಡ್ ಈವರೆಗೂ ಸುಮಾರು 19,013 ಕೋಟಿ ರೂ. ಮಂಜೂರು ಮಾಡಿದ್ದು ಅದರಲ್ಲಿ ಈಗಾಗಲೇ ಸುಮಾರು 15,080 ಕೋಟಿ ರೂ. ವಿತರಣೆ ಮಾಡಿದೆ ಎಂದು ನಬಾರ್ಡ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಹಾಗೂ ರಾಜ್ಯ ಮುಖ್ಯಸ್ಥ ಟಿ. ರಮೇಶ್ ಹೇಳಿದರು.
ನಬಾರ್ಡ್‌ನ 42ನೇ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ಕೆ.ಜಿ.ರಸ್ತೆಯ ನಬಾರ್ಡ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಿರಿಧಾನ್ಯ ವಲಯದಲ್ಲಿ ಉತ್ತಮ ಸೇವೆ ಸಲ್ಲಿಸಿದ ಮೂವರು ರೈತ ಉತ್ಪಾದಕ ಸಂಸ್ಥೆಗಳು ಮತ್ತು ಮೂವರು ರೈತ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಬೆನ್ನೆಲುಬಾಗಿರುವ ನಬಾರ್ಡ್ ಗ್ರಾಮೀಣ ಮೂಲಸೌಲಭ್ಯ ಅಭಿವೃದ್ದಿ ನಿಧಿ (ಆರ್‌ಐಡಿಎಫ್) ಮೂಲಕ ಗ್ರಾಮೀಣ ಪ್ರದೇಶಗಳ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಿದೆ. ಈಗಾಗಲೇ ಸುಮಾರು 4,10,888 ಹೇಕ್ಟೆರ್ ಪ್ರದೇಶವನ್ನು ನೀರಾವರಿಗೆ ಒಳಪಡಿಸಿದ್ದು 55,502 ಮೀಟರ್ ಗ್ರಾಮೀಣ ಸೇತುವೆಗಳನ್ನು ನಿರ್ಮಿಸಿದೆ. ಜತೆಗೆ 839 ಗ್ರಾಮೀಣ ಕೃಷಿ ಮಾರುಕಟ್ಟೆ, 13,480 ಗ್ರಾಮೀಣ ಶಿಕ್ಷಣ ಸಂಸ್ಥೆಗಳಿಗೆ, 338 ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಮತ್ತು 258 ರೈತ ಸಂಪರ್ಕ ಕೇಂದ್ರಗಳಿಗೆ ಆರ್ಥಿಕ ನೆರವು ನೀಡಿದೆ ಎಂದರು.
“ಸಹಕಾರಿ ಸಂಸ್ಥೆಗಳ ಮೂಲಕ ಸಮೃದ್ಧಿ’ ಪರಿಕಲ್ಪನೆ ಮೂಲಕ ಆಹಾರ ಭದ್ರತೆ ದೃಢಪಡಿಸುವ ನಿಟ್ಟಿನಲ್ಲಿ ಹೆಜ್ಜೆಯಿರಿಸಿದೆ. ಕೇಂದ್ರ ಸಹಕಾರಿ ಸಚಿವಾಲಯ ವಿಶ್ವದಲ್ಲೇ ಅತಿದೊಡ್ಡ ಧಾನ್ಯ ಸಂಗ್ರಹಣೆ ಸ್ಥಾಪಿಸಿಸುವ ಯೋಜನೆ ರೂಪಿಸಿದೆ. ಕೃಷಿ ಉಪಕರಣಗಳ ಬಾಡಿಗೆ ಕೇಂದ್ರಗಳು ಮತ್ತು ಸಂಸ್ಕರಣಾ ಘಟಕಗಳನ್ನು ಒಳಗೊಡಂತೆ ಕೃಷಿ ಮೂಲ ಸೌಕರ್ಯ ಒದಗಿಸಲು ಗಮನ ನೀಡಲಾಗಿದೆ ಎಂದು ಹೇಳಿದರು.
ಬೆಂಗಳೂರು ಕೃಷಿ ವಿವಿಯ ಉಪ ಕುಲಪತಿ ಡಾ.ಸುರೇಶ ಮಾತನಾಡಿ, ನಬಾರ್ಡ್ ಗ್ರಾಮೀಣ ಪ್ರದೇಶದ ಏಳ್ಗೆಗೆ ಬೆನ್ನಲುಬಾಗಿ ನಿಂತಿದೆ. ಈ ಸಂಸ್ಥೆ ನೀರಾವರಿ, ರಸ್ತೆ ಮತ್ತು ಮೂಲ ಸೌಕರ್ಯ ಅಭಿವೃದ್ದಿ ಕ್ಷೇತ್ರಕ್ಕೂ ಅಮೂಲ್ಯ ಕೊಡುಗೆ ನೀಡಿದೆ. ಬೆಂಗಳೂರು ಕೃಷಿ ವಿವಿ ಹಮ್ಮಿಕೊಳ್ಳುವ ಕೃಷಿ ಮೇಳ, ಸಿರಿಧಾನ್ಯ ಮೇಳಕ್ಕೂ ಬೆಂಬಲ ನೀಡುತ್ತಾ ರೈತರ ವರ್ಗವನ್ನು ಪ್ರೋತ್ಸಾಹಿಸುತ್ತಿದೆ ಎಂದರು.
ಭಾರತೀಯ ರಿಸರ್ವ್ ಬ್ಯಾಂಕಿನ ಮುಖ್ಯ ಮಹಾ ವ್ಯವಸ್ಥಾಪಕ ಮರುಳಿಕೃಷ್ಣ, ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಯ ಸಮನ್ವಯಕಾರ ಎ.ಮುರಳಿಕೃಷ್ಣ ಸೇರಿದಂತೆ ನಬಾರ್ಡ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರೈತರ ಸಾಲದ ಮಿತಿ ಹೆಚ್ಚಳ
ರೈತರಿಗಾಗಿ ರಾಜ್ಯ ಸರ್ಕಾರ ಹಲವು ಯೋಜನೆ ರೂಪಿಸಿದೆ. ಬಜೆಟ್‌ನಲ್ಲಿ ರಾಜ್ಯದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ನೀಡಲಾಗುತ್ತಿದ್ದ ಅಲ್ಪಾವಧಿ ಸಾಲದ ಮಿತಿಯನ್ನು ಮೂರು ಲಕ್ಷ ರೂ.ಗಳಿಂದ ಐದು ಲಕ್ಷ ರೂ.ಗಳಿಗೆ ಹೆಚ್ಚಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರೈತಪರವಾಗಿ ಕೆಲಸ ಮಾಡುತ್ತಿದೆ ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ದಿ ಆಯುಕ್ತ ಡಾ.ಇ.ವಿ.ರಮಣ ರೆಡ್ಡಿ ಹೇಳಿದರು. ಗ್ರಾಮೀಣ ಪ್ರದೇಶದ ಅಭಿವೃದ್ದಿಯಲ್ಲಿ ನಬಾರ್ಡ್ ಮಹತ್ವದ ಕೊಡುಗೆ ನೀಡಿದೆ. ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗದೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದೆ ಎಂದು ಶ್ಲಾಘಿಸಿದರು.