Advertisement

18ನೇ ಕೊಡವ ಕೌಟುಂಬಿಕ ಕ್ರಿಕೆಟ್‌ ನಮ್ಮೆಗೆ ಚಾಲನೆ

12:45 PM Apr 26, 2017 | Team Udayavani |

ಮಡಿಕೇರಿ: ಅಳಮೇಂಗಡ ಕುಟುಂಬ ಆತಿಥ್ಯ ವಹಿಸಿರುವ 18ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್‌ ನಮ್ಮೆಗೆ ಬಾಳೆಲೆ ವಿಜಯಲಕ್ಷ್ಮೀ ಪದವಿಪೂರ್ವ ಕಾಲೇಜು ಮೈದಾನದಲ್ಲಿ ವಿಧ್ಯುಕ್ತ ಚಾಲನೆ ದೊರಕಿತು.

Advertisement

ವಿಧಾನ ಪರಿಷತ್‌ ಸದಸ್ಯರಾದ ಮಂಡೇಪಂಡ ಸುನಿಲ್‌ ಸುಬ್ರಮಣಿ ಕ್ರೀಡಾ ಧ್ವಜಾರೋಹಣ ನೆರೇರಿಸುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು. ಅನಂತರ ಮಾತನಾಡಿದ ಅವರು, ಆಧುನಿಕ ಯುಗದಲ್ಲಿ ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುತ್ತ ಕ್ರೀಡೆಗಳನ್ನು ಮರೆಯುತ್ತಿದ್ದಾರೆ ಎಂದು ವಿಷಾದಿಸಿದರು. 

ಗ್ರಾಮೀಣ ಭಾಗದಲ್ಲಿ ಈ ರೀತಿ ಕ್ರೀಡಾಕೂಟ ನಡೆಸುವ ಮೂಲಕ ಯುವ ಜನತೆಯನ್ನು ಒಗ್ಗೂಡಿಸಿ ನಮ್ಮ ಸಂಸ್ಕೃತಿಯ ಬಗ್ಗೆ ತಿಳಿಸುವ ಪ್ರಯತ್ನ ಮಾಡಬೇಕು. ಕ್ರೀಡೆಯಿಂದ ದೈಹಿಕವಾಗಿ ಸದೃಢರಾಗುವ ಮೂಲಕ ಆರೋಗ್ಯವಂತ ಬದುಕು ಸಾಗಿಸಬಹುದು. ಕ್ರೀಡಾಪಟುಗಳು ಕ್ರೀಡಾಸ್ಫೂರ್ತಿ ಮೆರೆಯುವ ಮೂಲಕ ಮಾದರಿಯಾಗಬೇಕೆಂದರು.

ಶಾಸಕ ಕೆ.ಜಿ. ಬೋಪಯ್ಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲೆಲ್ಲೂ ಕ್ರೀಡಾ ಕಲರವ ಪ್ರಾರಂಭಗೊಂಡಿದೆ, ಇಂತಹ ಕ್ರೀಡಾಕೂಟಗಳು ಗ್ರಾಮೀಣ ಕ್ರೀಡಾಪಟುಗಳಿಗೆ ವೇದಿಕೆಯಾಗುತ್ತಿದ್ದು, ಯುವಜನತೆ ಇದನ್ನು ಸದುಪಯೋಗಪಡಿಸಿಕೊಂಡು ತಮ್ಮ ಪ್ರತಿಭೆ ಅನಾವರಣಗೊಳಿಸಬೇಕು ಎಂದರು.

ಸರಕಾರ ಕೂಡ ಜಿಲ್ಲೆಯ ಕ್ರೀಡಾಕೂಟಗಳಿಗೆ ಆರ್ಥಿಕ ಸಹಾಯ ಮಾಡಬೇಕು. ಈಗಾಗಲೇ ಜಿಲ್ಲೆಯಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಕ್ರೀಡಾಕೂಟಗಳಿಗೆ ಇಲ್ಲಿನ ಜನಪ್ರತಿನಿಧಿಗಳು ಪûಾತೀತಾವಾಗಿ ಸರಕಾರದ ಗಮನ ಸೆಳೆದು ಶಾಶ್ವತ ಅನುದಾನ ನೀಡುವಂತೆ ಬೇಡಿಕೆ ಇಡಲಾಗುವುದು ಎಂದು ಹೇಳಿದರು.

Advertisement

ವಿಧಾನ ಪರಿಷತ್‌ ಸದಸ್ಯರಾದ ವೀಣಾ ಅಚ್ಚಯ್ಯ ಮಾತನಾಡಿ, ಜಿಲ್ಲೆಯ ಕ್ರೀಡಾಕೂಟಗಳಿಗೆ ಸರಕಾರ ಶಾಶ್ವತ ಅನುದಾನ ನೀಡಿ ಇಲ್ಲಿನ ಕ್ರೀಡಾ ಭಿಮಾನಿಗಳನ್ನು ಉತ್ತೇಜಿಸಬೇಕು ಎಂದರು. 

ಕೊಡಗು ಕ್ರಿಕೆಟ್‌ ಅಕಾಡೆಮಿ ಅಧ್ಯಕ್ಷರಾದ ಕೀತಿಯಂಡ ಕಾರ್ಷನ್‌, ಕುಟುಂಬದ ಅಧ್ಯಕ್ಷರಾದ ವಿವೇಕ್‌ ಅಯ್ಯಪ್ಪ, ಸರಕಾರ ನೀಡಿರುವ ಅನುದಾನ ವನ್ನು ಪಂದ್ಯಾವಳಿಗೆ ಬಳಸದೆ ಅಭಿವೃದ್ಧಿ ಕಾರ್ಯಕ್ಕೆ ಮೀಸಲಿಡುವ ಮೂಲಕ ಸಮಾಜ ಮುಖೀ ಕೆಲಸಕ್ಕೆ ಮುಂದಾಗಿದ್ದೇವೆ ಎಂದರು.

ಈ ಸಂದರ್ಭ ಅಳಮೇಂಗಡ ಹಾಕಿ ಕಪ್‌ ಯಶಸ್ವಿಗೆ ದುಡಿದ ಅಳಮೇಂಗಡ ಪೊನ್ನಪ್ಪ ಅವರನ್ನು ಗಣ್ಯರು ಸಮ್ಮಾನಿಸಿ ಗೌರವಿಸಿದರು.

ಕೊಡವ ಕೌಟುಂಬಿಕ ಕ್ರಿಕೆಟ್‌ ನಮ್ಮೆಯಲ್ಲಿ ಕೊಡವ ಜನಪದ ಸಾಂಸ್ಕೃತಿಕ ನೃತ್ಯಗಳಾದ ಕತ್ತಿ ಯಾಟ್‌, ಬೊಳ್‌ಕಾಟ್‌, ಉಮ್ಮತಾಟ್‌ ಹಾಗೂ ಉರ್‌ಟ್ಟಿ ಕೊಟ್ಟ್ ಆಟ್‌ ನೋಡುಗರನ್ನು ಸೆಳೆಯಿತು. ಹುಡಿಕೇರಿಯ ಶ್ರೀ ಮಹಾದೇವ ಯುವಕ ಸಂಘದ ವತಿಯಿಂದ ಉಮ್ಮತಾಟ್‌, ಕೋಲಾಟ್‌ ಹಾಗೂ ಬೊಳಕಾಟ್‌ ನೃತ್ಯಗಳು ನೆರವೇರಿತು. 

ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವ ಮೂಲ ನಿವಾಸಿಗಳಾದ ಮಲೆಕುಡಿಯ ಜನಾಂಗದ ಉರುಟಿಕೊಟ್ಟ್ ನೃತ್ಯ ನೋಡುಗರ ಗಮನ ಸೆಳೆಯಿತು. ಸ್ಥಳೀಯರು ಕಲಾವಿದರನ್ನು ಬಹುಮಾನ ನೀಡಿ ಪ್ರೋತ್ಸಾಹಿಸಿದರು. ಉರುಟ್ಟಿ ಕೊಟ್ಟ್ ಆಟ್‌ನಲ್ಲಿ 10 ವರ್ಷದ ಬಾಲೆ ಹೆಜ್ಜೆ ಹಾಕಿ ಅಕರ್ಷಿಸಿದರು.

ಜಿಲ್ಲಾ ಪಂಚಾಯತ್‌ ಸದಸ್ಯ ಬಾನಂಡ ಪೃಥುÂ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್‌ ತಮ್ಮಯ್ಯ, ಮಾಜಿ ಗ್ರಾ.ಪಂ. ಅಧ್ಯಕ್ಷ ಆದೇಂಗಡ ವಿನು ಉತ್ತಪ್ಪ, ವಿಜಯಲಕ್ಷ್ಮೀ ಪದವಿಪೂರ್ವ ಕಾಲೇಜ್‌ ಕಾರ್ಯದರ್ಶಿ ಚಿಮ್ಮಣಮಾಡ ಕೃಷ್ಣ ಗಣಪತಿ, ಪ್ರಾಂಶುಪಾಲೆ ಪೊನ್ನಮ್ಮ, ಕ್ರಿಕೆಟ್‌ ಸಮಿತಿ ಉಪಾಧ್ಯಕ್ಷ ಅಳಮೇಂಗಡ ಗಣಪತಿ, ಸುಬ್ಬಯ್ಯ, ನದೀರ ಸೋಮಯ್ಯ ಕಾರ್ಯದರ್ಶಿ ಮೋಹನ್‌ ಚಂಗಪ್ಪ, ಖಜಾಂಜಿ ರವಿ, ಮಾಧ್ಯಮ ಕಾರ್ಯದರ್ಶಿ ರಮೇಶ್‌ ಹಾಜರಿದ್ದರು.

ಮೊದಲ ಪ್ರದರ್ಶನ ಪಂದ್ಯಾಟವಾಗಿ ಅಳಮೇಂ ಗಡ ಇಲೆವನ್‌ ಹಾಗೂ ಬಾಳೆಲೆ ಇಲೆವನ್‌ ನಡುವೆ ನಡೆದ ಪಂದ್ಯಾಟದಲ್ಲಿ ಬಾಳೆಲೆ ಇಲೆವೆನ್‌ 6 ರನ್‌ಗಳ ಅಂತರದಿಂದ ವಿಜೇತವಾಯಿತು. ಕಾಕಾಮಾಡ ತಂಡ ಗೈರಾದ ಹಿನ್ನಲೆ ಕಾಂಡೇರ ತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next