Advertisement

ಅಮೃತ ಸಂಭ್ರಮಕ್ಕೆ 183 ಸ್ವಾತಂತ್ರ್ಯ ಯೋಧರ ಸಾಕ್ಷಿ

11:42 PM Aug 14, 2022 | Team Udayavani |

ಬೆಂಗಳೂರು: ತಾವು ಕಂಡ ಕನಸು ಸಾಕಾರಗೊಂಡು ಅದರ ಜತೆಜತೆಗೆ 75 ವರುಷ ಬಾಳಿದ ಅಪರೂಪದ ಕ್ಷಣವಿದು… ಎಳವೆಯಲ್ಲಿ ಘಟಾನುಘಟಿ ಹೋರಾಟಗಾರರ ಜತೆ ಕೈ ಜೋಡಿಸಿ ಬಿತ್ತಿದ ಸ್ವಾತಂತ್ರ್ಯಕ್ಕೆ ಇಂದು ಅಮೃತ ಮಹೋತ್ಸವದ ಸಂಭ್ರಮ. ಆ ಸಂಭ್ರಮಕ್ಕೆ ಇವರು ಸಾಕ್ಷಿಯಾಗಿರುವುದು ಬಹುದೊಡ್ಡ ಭಾಗ್ಯ.

Advertisement

ಅಂಥ ಭಾಗ್ಯವಂತರು ರಾಜ್ಯದ 183 ಮಂದಿ ಸ್ವಾತಂತ್ರ್ಯ ಹೋರಾಟಗಾರರು!

ನಮಗೆ ಸ್ವಾತಂತ್ರ್ಯದ ಫ‌ಲವನ್ನು ಉಣಿಸಿದ ಲಕ್ಷಾಂತರ ಮಂದಿ ಹೋರಾಟಗಾರರು ಇಂದು ನಮ್ಮೊಂದಿಗೆ ಇಲ್ಲ. ಆದರೆ ಅವರೆಲ್ಲರ ಪ್ರತಿನಿಧಿ ಗಳಾಗಿ 183 ಮಂದಿ ನಮ್ಮೊಡನೆ ಇರುವುದು ನಮ್ಮ ಹೆಮ್ಮೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇರುವ ಹೋರಾಟಗಾರರ ಮಾಹಿತಿಯನ್ನು ಉದಯ ವಾಣಿ ಸಂಗ್ರಹಿಸಿದ್ದು, ಈ ಮೂಲಕ ಕರುನಾಡಿನ ಹೋರಾಟಗಾರರಿಗೆ ಗೌರವ ಸಲ್ಲಿಸುತ್ತಿದೆ.

ಲಭ್ಯ ಮಾಹಿತಿಯ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತ್ಯಧಿಕ 51 ಮಂದಿ ಸ್ವಾತಂತ್ರ್ಯ ಹೋರಾಟಗಾರರು ಬದುಕುಳಿದಿ ದ್ದಾರೆ. ಅನಂತರದ ಸ್ಥಾನ ತುಮಕೂರು ಜಿಲ್ಲೆಯದು. ಅಲ್ಲಿ 30 ಮಂದಿ ನಮ್ಮ ನಡುವೆ ಇದ್ದರೆ, ಕಲಬುರ್ಗಿ ಜಿಲ್ಲೆಯಲ್ಲಿ 22 ಮಂದಿ ಯೋಧರಿದ್ದಾರೆ.

ಚಿತ್ರದುರ್ಗ, ಚಿಕ್ಕಮಗಳೂರು, ವಿಜಯ ಪುರ, ಯಾದಗಿರಿ ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ಯೋಧರು ಬದುಕುಳಿದಿಲ್ಲ. ದಕ್ಷಿಣ ಕನ್ನಡ, ಉಡುಪಿ, ಕೋಲಾರ, ಬೀದರ್‌ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಮಾತ್ರ ಈ ಅಮೃತಮಹೋತ್ಸವಕ್ಕೆ ಸಾಕ್ಷಿಯಾಗಿದ್ದಾರೆ.

Advertisement

ಇವರಲ್ಲಿ ಕೆಲವರು ಮಾತ್ರ ಸಕ್ರಿಯರಾಗಿದ್ದರೆ ಹಲವರು ವಯೋಸಹಜ ಆರೋಗ್ಯ ಸಮಸ್ಯೆ ಗಳಿಂದ ಬಳಲುತ್ತಿದ್ದಾರೆ. ಲಭ್ಯ ಮಾಹಿತಿಯ ಪ್ರಕಾರ ಈ ಹೋರಾಟಗಾರರ ಸರಾಸರಿ ವಯೋಮಾನ 95ರಿಂದ 96 ವರ್ಷ.

ಅತೀ ಹಿರಿಯರು ಹಾವೇರಿ ಜಿಲ್ಲೆಯ ಮಲ್ಲಪ್ಪ ಕೊಪ್ಪದ. 105 ವಯಸ್ಸಿನ ಇವರು ಈಗಲೂ ಚಟುವಟಿಕೆಯಿಂದ ಇದ್ದು, ತಮ್ಮ ಸ್ವಾತಂತ್ರ್ಯ ಹೋರಾಟದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಬ್ಯಾಡಗಿ ತಾಲೂಕಿನ ಮಲ್ಲಪ್ಪ ಇಡೀ ಜಿಲ್ಲೆಯಲ್ಲಿ ಬದುಕುಳಿದ ಏಕೈಕ ಸ್ವಾತಂತ್ರ್ಯ ಹೋರಾಟಗಾರ.

ಬೆಳಗಾವಿ ಜಿಲ್ಲೆಯ ಹುದಲಿಯ ಗಂಗಪ್ಪ ಮಾಳಗಿ ಅವರು ಈ ವರ್ಷ ತಮ್ಮ ಶತಮಾ ನೋತ್ಸವ ಆಚರಿಸುತ್ತಿದ್ದಾರೆ. ಬಾಲಕನಾಗಿದ್ದಾಗಲೇ ಹೋರಾಟಕ್ಕೆ ಧುಮುಕಿ ರೈಲ್ವೇ ಹಳಿ ಕಿತ್ತುಹಾಕಿ, ರೈಲು ನಿಲ್ದಾಣಕ್ಕೆ ಬೆಂಕಿ ಹಚ್ಚಿ ಕ್ರಾಂತಿ ಮೆರೆದಿದ್ದ ಮಾಳಗಿ ಇಂದು ಹಾಸಿಗೆ ಹಿಡಿದಿ ದ್ದಾರೆ. ಹಾಸನದ ಅರಸೀಕೆರೆಯ ಕೆ.ಆರ್‌. ಗೋಪಾಲ್‌ ಅತೀ ಕಿರಿಯ (87 ವರ್ಷ) ಸ್ವಾತಂತ್ರ್ಯ ಹೋರಾಟಗಾರರು.

ಇವರು ಚಿಕ್ಕ ವಯಸ್ಸಿನಲ್ಲೇ ರೈಲು ತಡೆ ಚಳವಳಿಯಲ್ಲಿ ಭಾಗಬಹಿಸಿ, ಪೊಲೀಸರಿಂದ ಕಣ್ತಪ್ಪಿಸಿ ಓಡುವಾಗ ರೈಲು ಕಂಬಿಗಳಿಗೆ ಸಿಕ್ಕಿ ಕಾಲು ಮುರಿದುಕೊಂಡಿದ್ದರು. ಅನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡರಾದರೂ ಬಾಲಕನೆಂಬ ಕಾರಣಕ್ಕಾಗಿ ಅವರನ್ನು ಬಿಟಿxದ್ದರು.

ಇನ್ನೊಂದು ವಿಶೇಷ ಸಂಗತಿ ಎಂದರೆ ಈಗ ಉಳಿದಿರುವ ಬಹುತೇಕ ಹೋರಾಟಗಾರರಲ್ಲಿ ಬಹುತೇಕ ಮಂದಿ ತಮ್ಮ 15ರ ವಯಸ್ಸಿನಲ್ಲಿ ಚಳವಳಿಗೆ ಇಳಿದವರು. ಇವರಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಂದಿ ಮಹಾತ್ಮಾ ಗಾಂಧೀಜಿ ಅವರ ಒಡನಾಟ ಹೊಂದಿದ್ದರು. ಅದರಲ್ಲೂ ತುಮಕೂರು ಜಿಲ್ಲೆಯ ಬಹುತೇಕ ಹೋರಾಟಗಾರರಿಗೆ ಸ್ವತಃ ಗಾಂಧೀಜಿಯವರೇ ಸ್ಫೂರ್ತಿಯಾಗಿದ್ದಾರಂತೆ.

1947ರ ಆಗಸ್ಟ್‌ 14ರಂದು ಮಧ್ಯರಾತ್ರಿ ಸ್ವಾತಂತ್ರ್ಯ ಘೋಷಣೆಯಾದ ಕೂಡಲೇ ರಾತೋ ರಾತ್ರಿ ನಾವೆಲ್ಲ ಹುಗ್ಗಿ ಮಾಡಿ ಇಡೀ ಊರಿನ ಜನರಿಗೆ ಉಣಿಸಿ, ಧ್ವಜವಂದನೆ ಮಾಡಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ವಿ.
– ಮಲ್ಲಪ್ಪ ಕೊಪ್ಪದ, ಹಾವೇರಿ

Advertisement

Udayavani is now on Telegram. Click here to join our channel and stay updated with the latest news.

Next