ಅಜಾಜ್ ( ಸಿರಿಯಾ): ಭೀಕರ ಭೂಕಂಪಕ್ಕೆ ಟರ್ಕಿ, ಸಿರಿಯಾ ದೇಶಗಳು ಅಕ್ಷರಶಃ ಸ್ಮಶಾನದಂತಾಗಿದೆ. 4 ಸಾವಿರಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ. ಮನೆಯಲ್ಲಿ ಮಲಗಿದ್ದ, ಆಗಷ್ಟೇ ಎದ್ದು ಅಡುಗೆ ಮನೆಗೆ ಕೆಲಸಕ್ಕೆ ಹೊರಟ್ಟಿದ್ದ ಗೃಹಿಣಿಯರು, ಮೈಕೊರೆಯುವ ಚಳಿಗೆ ಬೆಚ್ಚಗೆಯ ಹೊದಿಕೆಯನ್ನು ಹೊತ್ತು ಮಲಗಿದ್ದ ಪುಟ್ಟ ಪುಟಾಣಿಗಳು ಒಮ್ಮೆಗೆ ಕಂಪಿಸಿದ ಭೂಮಿಗೆ ಶವವಾಗಿ ಹೋಗಿದ್ದಾರೆ. ನಿದ್ದೆಯಲ್ಲೇ ಇದ್ದ ಅದೆಷ್ಟೋ ಮಂದಿ ಸಾವಿನ ನಿದ್ದೆಗೆ ಜಾರಿದ್ದಾರೆ. ಯಾರೋ ಅದೆಲ್ಲೋ ಬಿದ್ದ ಕಟ್ಟಡದ ಅಡಿಯಿಂದ, ಕತ್ತಲ ಕೂಪದಿಂದ ಸಹಾಯ ಮಾಡಿ, ಉಸಿರು ಗಟ್ಟುತ್ತಿದೆ ಎಂದು ಕಿರುಚುತ್ತಿದ್ದಾರೆ. ಆದರೆ ಆ ಧ್ವನಿ ಹೊರಗೆ ಯಾರಿಗೂ ಕೇಳುತ್ತಿಲ್ಲ. ಮೈಮೇಲೆ ಇಡೀ ಕಟ್ಟಡವೇ ಬಿದ್ದು ನೋವಿನಲ್ಲಿ ಚೀರಾಟ ಮಾಡುತ್ತಿರುವ ವ್ಯಕ್ತಿಗಳು, ಮನೆಯೇ ಬಿದ್ದು, ಅಲ್ಲೇ ಸಮಾಧಿಯಾದ ಜನರು…
ಇದು ಟರ್ಕಿ, ಸಿರಿಯಾ ದೇಶದ ಭೂಕಂಪದ ಭಯಾನಕ, ಕರುಣಾಜನಕ ದೃಶ್ಯಗಳು. ಈ ಭೀಕರತೆಯಿಂದ ಬದುಕಿ ಬಂದವರು ಹಲವರಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಸಿಬ್ಬಂದಿಗಳು ಸಾವಿರಾರು ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ರಕ್ಷಣೆಯಾದವರಲ್ಲಿ ಒಬ್ಬರು ಒಂದೂವರೆ ವರ್ಷದ ಪುಟ್ಟ ಹೆಣ್ಣು ಮಗು ರಘದ್ ಇಸ್ಮಾಯಿಲ್. ಚಳಿಗೆ ಹಾಕಿಕೊಂಡಿದ್ದ ಸ್ವೆಟರ್ ನಲ್ಲಿ ಧೂಳು ಮೆತ್ತಿಕೊಂಡಿದೆ. ಪುಟ್ಟ ಬಾಲೆಗೆ ಭೂಕಂಪ ಅಂದರೆ ಏನು ಅನ್ನೋದೇ ತಿಳಿದಿಲ್ಲ. ಆ ಭೀಕರತೆಯಿಂದ ರಕ್ಷಣೆಯಾಗಿ ಈಗ ಮಗು ಅವರ ಸಂಬಂಧಿಕರ ಕೈ ಸೇರಿದೆ.
ಸಿರಿಯಾದ ಪುಟ್ಟ ಬಾಲೆ ಈಗ ಅಂಕಲ್ ಮನೆಯಲ್ಲಿದೆ. ರಘದ್ ಇಸ್ಮಾಯಿಲ್ ಗೆ ಹಸಿವಾಗುತ್ತಿದೆ. ಆ ಹಸಿವಿಗೆ ತಾಯಿಯ ಎದೆ ಹಾಲು ಬೇಕು. ಅಳು ನಿಲ್ಲಿಸಿ, ಆಕೆಯೊಂದಿಗೆ ಆಡಲು ಅವಳ ಅಕ್ಕ, ಅಣ್ಣ ತಂಗಿ ಬೇಕು. ಆದರೆ ಅವರು ಯಾರೂ ಅವಳೊಂದಿಗೆ ಇಲ್ಲ. ಕಾರಣ ಭೀಕರ ಭೂಕಂಪಕ್ಕೆ ಅವರೆಲ್ಲಾ ಕೊನೆಯುಸಿರೆಳೆದಿದ್ದಾರೆ.
ರಘದ್ ಇಸ್ಮಾಯಿಲ್ ಅವರ ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆನ್ನಿಗೆ ತೀವ್ರತರದ ಏಟು ಬಿದ್ದಿದೆ. ಈ ನೋವಿನಲ್ಲೇ ತನ್ನ ಗರ್ಭಿಣಿ ಪತ್ನಿ, 4 ವರ್ಷದ ಮಗ, 5 ವರ್ಷದ ಮಗಳು ಇನ್ನಿಲ್ಲ ಎನ್ನುವ ಅತ್ಯಂತ ಆಘಾತಕಾರಿ ಸುದ್ದಿ ತಲುಪಿದೆ.
ಭೀಕರತೆಯಿಂದ ಬದುಕುಳಿದ ರಘದ್ ಇಸ್ಮಾಯಿಲ್ ತನ್ನ ಅಂಕಲ್ ಮನೆಯಲ್ಲಿ ಬ್ರೆಡ್ ತಿನ್ನುತ್ತಿರುವ ಫೋಟೋ ಈಗ ವೈರಲ್ ಆಗಿದೆ… ತನ್ನ ತಾಯಿ, ಅಕ್ಕ, ಅಣ್ಣ ಇಲ್ಲ ಎನ್ನುವ ಅರಿವೂ ಕೂಡ ಪುಟ್ಟ ಬಾಲೆಗೆ ಇಲ್ಲ.
ಟರ್ಕಿ, ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಾವು ನೋವಿನ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಟರ್ಕಿಯಲ್ಲಿ 7 ದಿನ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಾಗಿದೆ.