ಚೆನ್ನೈ : ಉಚ್ಚಾಟಿತ ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರಿಗೆ ಒದಗಿರುವ ಭಾರೀ ಹಿನ್ನಡೆ ಎಂದು ತಿಳಿಯಲಾಗಿರುವ ವಿದ್ಯಮಾನದಲ್ಲಿ, ತಮಿಳು ನಾಡು ಅಸೆಂಬ್ಲಿ ಸ್ಪೀಕರ್ ಪಿ ಧನಪಾಲ್ ಅವರು ಇಂದು ಸೋಮವಾರ ದಿನಕರನ್‌ಗೆ ನಿಷ್ಠರಿರುವ 18 ಶಾಸಕರನ್ನು ಅನರ್ಹಗೊಳಿಸಿದರು.
ಈ ಬೆಳವಣಿಗೆಯನ್ನು ದೃಢಪಡಿಸಿರುವ ಎಎನ್‌ಐ ಸುದ್ದಿ ಸಂಸ್ಥೆ, ಅಸೆಂಬ್ಲಿ ಸ್ಪೀಕರ್ ಧನಪಾಲ್ ಅವರಿಂದ ಅನರ್ಹತೆಯ ಶಿಸ್ತು ಕ್ರಮಕ್ಕೆ ಗುರಿಯಾಗಿರುವ 18 ಶಾಸಕರ ಹೆಸರನ್ನು ಪ್ರಕಟಿಸಿದೆ.
ಈ ಹೆಸರುಗಳಲ್ಲಿ ಮುಖ್ಯವಾಗಿ ಕಾಣಿಸಿರುವ ಹೆಸರುಗಳೆಂದರೆ ತಂಗ ತಮಿಳ್‌ಸೆಲ್ವನ್, ಸೆಂಥಿಲ್ ಬಾಲಾಜಿ, ಪಿ. ವೆಟ್ರಿವೇಲ್ ಮತ್ತು ಕೆ ಮರಿಯಪ್ಪನ್.
ದಿನಕರನ್ ಅವರನ್ನು ಬೆಂಬಲಿಸುತ್ತಿದ್ದ ಈ 18 ಶಾಸಕರು ಇಂದಿನಿಂದ ಜಾರಿಗೆ ಬರುವಂತೆ ಅನರ್ಹರಾಗಿರುತ್ತಾರೆ. ಇದು 1986ರ ತಮಿಳು ನಾಡು ಅಸೆಂಬ್ಲಿ ಸದಸ್ಯರ ಪಕ್ಷಾಂತರ ಕಾನೂನು ಪ್ರಕಾರ ಕೈಗೊಳ್ಳಲಾದ ಶಿಸ್ತು ಕ್ರಮವಾಗಿದೆ.
ದಿನಕರನ್‌ಗೆ ನಿಷ್ಠರಿರುವ ಈ 18 ಮಂದಿ ಶಾಸಕರು ತಮಿಳು ನಾಡು ಮುಖ್ಯಮಂತ್ರಿ ಇ ಕೆ ಪಳನಿಸ್ವಾಮಿ ಅವರ ಉಚ್ಚಾಟನೆಯನ್ನು ಆಗ್ರಹಿಸುತ್ತಲೇ ಬಂದಿದ್ದಾರೆ.
ಸ್ಪೀಕರ್ ಅವರು ಈ ರೀತಿಯ ಅನರ್ಹತಾ ಶಿಸ್ತು ಕ್ರಮ ಕೈಗೊಳ್ಳಬಹುದೆಂಬ ಶಂಕೆಯಲ್ಲಿ ದಿನಕರನ್ ಈ ಮೊದಲೇ ಮದ್ರಾಸ್ ಹೈಕೋರ್ಟ್ ಮೆಟ್ಟಲೇರಿದ್ದರು. ಸೆ.20ರ ತನಕ ವಿಶ್ವಾಸ ಮತ ನಡೆಯಕೂಡದೆಂದು ಮದ್ರಾಸ್ ಹೈಕೋರ್ಟ್ ಅಪ್ಪಣೆ ಕೊಡಿಸಿತ್ತು.