Advertisement
ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಕನಕಪುರ ದೇಗುಲಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೂತನ ವಧು-ವರರನ್ನು ಹರಸಿದರು.
Related Articles
Advertisement
ಬಾಗಿನ: ನೂತನ ವಧು- ವರರಿಗೆ ಬಸವೇಶ್ವರ ವಿದ್ಯಾರ್ಥಿನಿಲಯದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಹಸೆಮಣೆ ಏರಿದ ಎಲ್ಲಾ ಜೋಡಿಗಳಿಗೂ ಬಾಗಿನ ನೀಡಿ ಸತ್ಕರಿಸಲಾಯಿತು. ವಸ್ತ್ರ, ಬಳೆ,ಅಕ್ಕಿ,ಅರಿಶಿಣಿ-ಕುಂಕುಮ, ಬಟ್ಟಲು ಇನ್ನಿತರ ವಸ್ತುಗಳಿದ್ದ ಬಾಗಿನವನ್ನು ಶ್ರೀಮಠದಿಂದ ನೀಡಲಾಯಿತು. ಬಾಗಿನ ಸ್ವೀಕರಿಸಿ ಹೊರ ಬಂದ ನವಜೋಡಿಗಳಿಗೆ ಸಂಬಂಧಿಕರು ಉಡುಗೊರೆ ಕೊಟ್ಟು ಶುಭ ಹಾರೈಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ವಿಶೇಷ ಜೋಡಿಗಳು: ಪರಿಶಿಷ್ಟ ಜಾತಿ-106, ಪರಿಶಿಷ್ಟ ಪಂಗಡ-10, ಹಿಂದುಳಿದ ವರ್ಗ-33, ವೀರಶೈವ ಲಿಂಗಾಯುತ-11,ಅಂತರಜಾತಿ 18 ಜೋಡಿ ಸೇರಿದಂತೆ 178 ಜೋಡಿಗಳು ಬಾಳ ಸಂಗಾತಿಗಳಾದರು. ಈ ಪೈಕಿ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕಕ್ಕಾಂಜಿ ನಗರದ ಎಸ್.ತೇಜಶ್ರೀ ಹಾಗೂ ಕೆ.ಆರ್.ನಗರ ತಾಲೂಕು ಮಧುವನಹಳ್ಳಿ ಬಡಾವಣೆಯ ಎಂ.ಸಿ.ಶೇಖರ್, ಪೊಯಿಕಪುರಂ ಗ್ರಾಮದ ಸುಗನ್ಯ ಹಾಗೂ ಎಚ್.ಡಿ.ಕೋಟೆ ತಾಲೂಕಿನ ಮೊತ್ತ ಗ್ರಾಮದ ಬಿ.ವರುಣ್ ಕುಮಾರ್ ಬಾಳ ಸಂಗಾತಿಗಳಾದರು.
ವಿಧುರ-ವಿಧವೆಯರಾದ ಚಾಮರಾಜನಗರ ತಾಲೂಕು ಆಲೂರು ಗ್ರಾಮದ ಎ.ಎಸ್.ಶಿವಮ್ಮ ಹಾಗೂ ಮಂಡ್ಯ ತಾಲೂಕು ತಗ್ಗಹಳ್ಳಿ ಗ್ರಾಮದ ರಾಜು, ನಂಜನಗೂಡು ತಾಲೂಕು ಶಿರಮಳ್ಳಿ ಗ್ರಾಮದ ಎನ್.ರೋಜಾ ಹಾಗೂ ಬಿ.ದೇವರಾಜು ಮತ್ತೂಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ದಿಬ್ಬಣದ ಮೆರವಣಿಗೆ: ದಾಂಪತ್ಯ ಜೀವನಕ್ಕೆ ಕಾಲಿರಿಸಲು ಬೇರೆ ಬೇರೆ ಊರುಗಳಿಂದ ಬಂದು ಶ್ರೀಮಠದಲ್ಲಿ ವಾಸ್ತವ್ಯ ಹೂಡಿದ್ದ ವಧು-ವರರು ಬುಧವಾರ ಬೆಳಗ್ಗೆ ಶ್ರೀಮಠದವತಿಯಿಂದ ನೀಡಲಾದ ಹೊಸ ವಸ್ತ್ರ ಧರಿಸಿ, ಹಣೆಗೆ ಬಾಸಿಂಗ ಕಟ್ಟಿಕೊಂಡು ಸಜ್ಜಾಗಿದ್ದರು. ಕತೃ ಗದ್ದುಗೆಯಿಂದ ವಧು-ವರರನ್ನು ಸಾಂಸ್ಕೃತಿಕ ಕಲಾತಂಡಗಳು, ಜಾನಪದ ತಂಡಗಳ ಕಲಾವಿದರು,
ಛತ್ರಿ-ಚಾಮರಗಳೊಂದಿಗೆ ಮೆರವಣಿಗೆ ಮೂಲಕ ಸಾಮೂಹಿಕ ವಿವಾಹ ಜರುಗಲಿದ್ದ ಮುಖ್ಯವೇದಿಕೆಗೆ ಕರೆತರಲಾಯಿತು. ವಧು-ವರರು ಪರಸ್ಪರ ಕೈ ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಾ ಬಂದರೆ, ಅವರ ಕುಟುಂಬದವರು, ಸಂಬಂಧಿಕರು ಅವರನ್ನು ಹಿಂಬಾಲಿಸಿದರು. ಮಧ್ಯಾಹ್ನ 12ಗಂಟೆಯ ಸುಮಾರಿಗೆ ಗಟ್ಟಿಮೇಳ ಬಾರಿಸಿದಾಗ ತಮ್ಮ ಬಾಳ ಸಂಗಾತಿಗಳಿಗೆ ಮಾಂಗಲ್ಯಧಾರಣೆ ಮಾಡಿದರು.
ಮದುವೆ ಎನ್ನುವುದು ಕಾಂಟ್ರ್ಯಾಕ್ಟ್ ಅಲ್ಲ: ಮದುವೆ ಎನ್ನುವುದು ಕಾಂಟ್ರ್ಯಾಕ್ಟ್ ಅಲ್ಲ. ಪ್ರೇರಣೆ ಜತೆ ಮೋಹವೂ ಒಂದು. ಶರಣ ಸತಿ-ಲಿಂಗ ಪತಿಯ ಕಲ್ಪನೆ ಮೋಹ ಭಕ್ತಿಯನ್ನು ತೋರಿಸುತ್ತದೆ. ಜಾತಿ ಮತ, ಸಂಪ್ರದಾಯ ಮೀರಿ ಎಲ್ಲವನ್ನೂ ಒಳಗೊಂಡಂತೆ ಸಾಮಾಜಿಕ ನೆಲೆಯಲ್ಲಿ ವಿವಾಹ ನಡೆಯುವುದು ಮುಖ್ಯ, ಪವಿತ್ರ ಕ್ಷೇತ್ರದಲ್ಲಿ ನಡೆಯುವುದು ಅನಿವಾರ್ಯ ಮತ್ತು ಶ್ರೇಷ್ಠ ಕೆಲಸವಾಗಲಿದೆ ಎಂದು ಆರೆಸ್ಸೆಸ್ ಸಹ ಸರಕಾರ್ಯವಾಹ ಮುಕುಂದ್ ತಿಳಿಸಿದರು.