Advertisement

‘ವಂದೇ ಭಾರತ್‌’ಯೋಜನೆಯಡಿ ಏರ್‌ಲಿಫ್ಟ್‌ : ದುಬಾೖಯಿಂದ ತಾಯ್ನಾಡಿಗೆ ಬಂದ 176 ಕನ್ನಡಿಗರು

09:36 AM May 13, 2020 | Hari Prasad |

ಮಂಗಳೂರು: ಕೋವಿಡ್ 19 ಕಾರಣದಿಂದ ದುಬಾೖಯಲ್ಲಿ ಸಿಲುಕಿಕೊಂಡಿದ್ದ 176 ಕನ್ನಡಿಗರನ್ನು ಒಳಗೊಂಡ ವಿಮಾನ ಮಂಗಳವಾರ ತಡರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.

Advertisement

ಈ ಮೂಲಕ ವಿದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ತಾಯ್ನಾಡಿಗೆ ಏರ್‌ಲಿಫ್ಟ್‌ ಮಾಡುವ ಬಹುನಿರೀಕ್ಷಿತ ‘ವಂದೇ ಭಾರತ್‌’ ಯೋಜನೆಯಡಿ ಮಂಗಳೂರಿಗೆ ಮೊದಲ ವಿಮಾನ ಆಗಮಿಸಿದಂತಾಗಿದೆ.

ದ.ಕ. ಜಿಲ್ಲೆಯ 96, ಉಡುಪಿ ಜಿಲ್ಲೆಯ 49 ಹಾಗೂ ಇತರ ಜಿಲ್ಲೆಗಳ 31 ಪ್ರಯಾಣಿಕರಿದ್ದರು. ಅವರಲ್ಲಿ 38 ಗರ್ಭಿಣಿಯರು, ವೈದ್ಯಕೀಯ ಚಿಕಿತ್ಸೆ ಪಡೆಯುವ ನಿರೀಕ್ಷೆಯಲ್ಲಿರುವವರು, ದುಬಾೖಯಲ್ಲಿ ಕೆಲಸ ಕಳೆದುಕೊಂಡವರು, ವೀಸಾ ಅವಧಿ ಮುಗಿದವರು, ಕುಟುಂಬ ಮೆಡಿಕಲ್‌ ಅಗತ್ಯ ಇರುವವರು, ಪ್ರವಾಸಕ್ಕೆ ಹೋಗಿ ಬಾಕಿಯಾದವರು ಸೇರಿದ್ದಾರೆ.

ಮಂಗಳವಾರ ಮಧ್ಯಾಹ್ನ ಮಂಗಳೂರಿನಿಂದ ದುಬಾೖಗೆ ತೆರಳಿದ್ದ ಖಾಲಿ ವಿಮಾನವು ರಾತ್ರಿ 7 ಗಂಟೆಗೆ ಪ್ರಯಾಣಿಕರೊಂದಿಗೆ ಹೊರಟು ತಡರಾತ್ರಿ ಮರಳಿ ಬಂದಿತು. ಇಳಿದ ತತ್‌ಕ್ಷಣವೇ ಜಿಲ್ಲಾ ವೈದ್ಯಾಧಿಕಾರಿಗಳ ತಂಡವು ವಿಶೇಷ ಪಿಇಪಿ ಕಿಟ್‌ ಧರಿಸಿ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿತು.


ಎಲ್ಲರಿಗೂ ಕ್ವಾರಂಟೈನ್‌
ಬಳಿಕ ಪ್ರಯಾಣಿಕರ ವಿವರಗಳನ್ನು ದಾಖಲಾತಿ ಮಾಡಿ ಇಮಿಗ್ರೇಷನ್‌ ಸೆಂಟರ್‌ನಲ್ಲಿ ವಿವರಗಳನ್ನು ಪಡೆದು, ಕಸ್ಟಮ್ಸ್‌ನಿಂದಲೂ ವಿವರ ಪಡೆದು ಬಳಿಕ ಕ್ವಾರಂಟೈನ್‌ ನಿಯಮಗಳ ಬಗ್ಗೆ ಎಲ್ಲ ಪ್ರಯಾಣಿಕರಿಗೆ ವಿವರ ಒದಗಿಸಲಾಯಿತು.

Advertisement

ಆನ್‌ಲೈನ್‌ ಮೂಲಕವೇ ಹೊಟೇಲ್‌, ಹಾಸ್ಟೆಲ್‌ಗ‌ಳಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಯಿತು. ಪ್ರಯಾಣಿಕರ ಎಲ್ಲ  ವ್ಯವಸ್ಥೆಗಳ ಪರಿಶೀಲನೆಗೆ ಪ್ರತ್ಯೇಕ ಅಧಿಕಾರಿಗಳ ತಂಡವನ್ನು ಜಿಲ್ಲಾಡಳಿತ ನೇಮಿಸಿತ್ತು.

ದ.ಕ. ಜಿಲ್ಲೆಯವರಿಗೆ ಮಂಗಳೂರು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಾಗೂ ಉಡುಪಿ ಸೇರಿದಂತೆ ಇತರ ಜಿಲ್ಲೆಯವರನ್ನು ಆಯಾ ಜಿಲ್ಲೆಗೆ ಜಿಲ್ಲಾಡಳಿತದ ವಾಹನದ ಮುಖೇನವೇ ತಡರಾತ್ರಿ ಕಳುಹಿಸುವ ಪ್ರಕ್ರಿಯೆ ನಡೆಯಿತು.

ಈ ಮೂಲಕ ಆಯಾಯ ಜಿಲ್ಲೆಯಲ್ಲಿಯೇ ಅಲ್ಲಿನ ಪ್ರಯಾಣಿಕರಿಗೆ ಕ್ವಾರಂಟೈನ್‌ ಮಾಡಲಾಗುತ್ತದೆ. ವಿದೇಶದಿಂದ ಆಗಮಿಸಿದವರಿಗೆ ಮಂಗಳೂರಿನಲ್ಲಿ 17 ಹೊಟೇಲ್‌ಗ‌ಳು ಹಾಗೂ 12 ಹಾಸ್ಟೆಲ್‌ಗ‌ಳಲ್ಲಿ ಕ್ವಾರಂಟೈನ್‌ ಮಾಡಲು ವ್ಯವಸ್ಥೆ ಮಾಡಲಾಗಿದೆ.

ವಿಮಾನ ನಿಲ್ದಾಣದಿಂದ ಎಲ್ಲ ಪ್ರಯಾಣಿಕರು ನೇರವಾಗಿ ಜಿಲ್ಲಾಡಳಿತದ ವಾಹನ ವ್ಯವಸ್ಥೆಯಲ್ಲಿ ತೆರಳುವ ಕಾರಣ ಹಾಗೂ ಆರೋಗ್ಯ ಮುನ್ನೆಚ್ಚರಿಕೆ ನಿಟ್ಟಿನಲ್ಲಿ ಏರ್‌ಪೋರ್ಟ್‌ಗೆ ಸಾರ್ವಜನಿಕರು ಅಥವಾ ಪ್ರಯಾಣಿಕರ ಕುಟುಂಬಸ್ಥರಿಗೆ ವಿಮಾನ ನಿಲ್ದಾಣಕ್ಕೆ ಬರಲು ಅವಕಾಶವಿರಲಿಲ್ಲ. ಕ್ವಾರೆಂಟೈನ್‌ ಕೇಂದ್ರಗಳಿಗೂ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.


ದ.ಕ. – 96 ಉಡುಪಿ – 49 ಪ್ರಯಾಣಿಕರು
ವಿಮಾನದಲ್ಲಿ ದ.ಕ. ಜಿಲ್ಲೆಯ 96 ಮಂದಿ ಇದ್ದು, ಅವರಲ್ಲಿ ಮಂಗಳೂರಿನ 57, ಸುಳ್ಯ ತಾಲೂಕಿನ 2, ಪುತ್ತೂರಿನ 7, ಮೂಡುಬಿದಿರೆಯ 3, ಬೆಳ್ತಂಗಡಿಯ 11, ಬಂಟ್ವಾಳದ 16 ಪ್ರಯಾಣಿಕರು.

ಉಡುಪಿ ಜಿಲ್ಲೆಯ 49 ಮಂದಿ ಇದ್ದು, ಅವರಲ್ಲಿ ಬೈಂದೂರಿನ 5, ಕಾಪುವಿನ 4, ಕಾರ್ಕಳದ 3, ಕುಂದಾಪುರದ 14 ಹಾಗೂ ಉಡುಪಿಯ 23 ಪ್ರಯಾಣಿಕರು.

ಉಳಿದಂತೆ ಬೆಂಗಳೂರಿನ 3, ಭಟ್ಕಳದ 3, ಕಾರವಾರದ 4, ಕೊಡಗಿನ 3 ಸೇರಿದಂತೆ ಉಳಿದ ಜಿಲ್ಲೆಯ 31 ಪ್ರಯಾಣಿಕರಿದ್ದರು.

ಪ್ರಯಾಣಿಕರ ಸಂಖ್ಯೆ

ಒಟ್ಟು ಪ್ರಯಾಣಿಕರು: 176

ಪುರುಷರು: 95

ಮಹಿಳೆಯರು: 81

ತುರ್ತು ವೈದ್ಯಕೀಯ ಪಡೆಯಲು ಅಪೇಕ್ಷಿಸಿದವರು: 12

ಗರ್ಭಿಣಿಯರು: 38


ದೋಹಾ, ಮಸ್ಕತ್‌ನಿಂದಲೂ ಸದ್ಯದಲ್ಲೇ ಬರಲಿದೆ ವಿಮಾನ
ದೋಹಾ ಹಾಗೂ ಮಸ್ಕತ್‌ನಲ್ಲಿ ನೆಲೆಸಿರುವ ಕನ್ನಡಿಗರನ್ನು ಕೂಡ ಶೀಘ್ರದಲ್ಲಿ ತಾಯ್ನಾಡಿಗೆ ಕರೆತರುವ ಬಗ್ಗೆಯೂ ಸುಳಿವು ದೊರೆತಿದೆ. ಸದ್ಯದ ಮೂಲಗಳ ಪ್ರಕಾರ, ಮಸ್ಕತ್‌ನಿಂದ ಮೇ 20ರಂದು ಬೆಂಗಳೂರು ಮೂಲಕ ಏರ್‌ಇಂಡಿಯಾ ವಿಮಾನ ಹಾರಾಟ ನಡೆಯಲಿದೆ.

ಮಸ್ಕತ್‌ನಿಂದ ಹೊರಡುವ ವಿಮಾನವು ಬೆಂಗಳೂರಿಗೆ ಬಂದು ಆ ಬಳಿಕ ಅಲ್ಲಿಂದ ಮಂಗಳೂರಿಗೆ ಆಗಮಿಸಲಿದೆ ಎನ್ನಲಾಗಿದೆ. ಇದೇ ರೀತಿ ಮೇ 22ರಂದು ದೋಹಾದಿಂದ ಹೊರಡುವ ವಿಮಾನವು ಬೆಂಗಳೂರಿಗೆ ಆಗಮಿಸಿ ಬಳಿಕ ಅಲ್ಲಿಂದ ಮಂಗಳೂರಿಗೆ ಆಗಮಿಸಲಿದೆ. ಜತೆಗೆ ಮುಂದಿನ ವಾರ ದುಬಾೖಯಿಂದ ಮತ್ತೂಂದು ವಿಮಾನ ಕೂಡ ಆಗಮಿಸುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next