ಜಮ್ಮು-ಕಾಶ್ಮೀರ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ಹಲವು ರಾಜಕೀಯ ನೇತಾರರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬೂದುಬಣ್ಣದ ಗಡ್ಡ, ವಯಸ್ಸಾದ ಮುಖ, ಕಳೆಗುಂದಿದ ನಗುವಿನ ಈ ಫೋಟೋ ಥಟ್ಟನೆ ಗಮನಿಸಿದೆ ಯಾರು ಎಂಬುದು ಊಹಿಸುವುದೇ ಕಷ್ಟ!
ಈ ಫೋಟೋದಲ್ಲಿ ಇರುವ ವ್ಯಕ್ತಿ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರದ್ದು! 370ನೇ ವಿಧಿಯನ್ನು ಆಗಸ್ಟ್ ನಲ್ಲಿ ರದ್ದುಗೊಳಿಸಿದ ನಂತರ ಓಮರ್ ಸೇರಿದಂತೆ ಹಲವು ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.
172 ದಿನಗಳ ಕಾಲದಿಂದ ಗೃಹಬಂಧನದಲ್ಲಿರುವ ಓಮರ್ ಅಬ್ದುಲ್ಲಾ ಬೂದುಬಣ್ಣದ ಗಡ್ಡ, ಉಲ್ಲನ್ ಕ್ಯಾಪ್ ಧರಿಸಿ, ಹಿಮದ ಬ್ಯಾಕ್ ಗ್ರೌಂಡ್ ನಲ್ಲಿ ನಿಂತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದೆ ಎಂದು ವರದಿ ತಿಳಿಸಿದೆ.
ಅಷ್ಟೇ ಅಲ್ಲ ಓಮರ್ ಅಬ್ದುಲ್ಲಾ ಫೋಟೋಕ್ಕೆ ನೆಟ್ಟಿಗರು ತಮಾಷೆಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಓಮರ್ ಅಬ್ದುಲ್ಲಾ ಕಳೆದ ಆರು ತಿಂಗಳಿನಿಂದ ಗೃಹ ಬಂಧನದಲ್ಲಿದ್ದಾರೆ. ಆದರೆ ಇತ್ತೀಚೆಗಿನ ಫೋಟೋ ನೋಡಿದರೆ ಒಂದು ವೇಳೆ 30 ವರ್ಷ ಕಳೆದಂತೆ ಭಾಸವಾಗುತ್ತಿದೆ ಎಂದು ಟ್ವೀಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಓಹ್..ನಾಲ್ಕು ತಿಂಗಳಲ್ಲಿಯೇ ಓಮರ್ ಅಬ್ದುಲ್ಲಾ ಇನ್ನೂ 40 ವರ್ಷ ಹೆಚ್ಚು ಮುದುಕರಾದಂತೆ ಕಾಣುತ್ತಿದ್ದಾರೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.