ನವದೆಹಲಿ: ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಕಳೆದ ಐದು ದಿನಗಳಲ್ಲಿ 1,701 ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿರುವುದಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಗುರುವಾರ(ಏಪ್ರಿಲ್ 15) ತಿಳಿಸಿದ್ದಾರೆ. ಸೋಂಕು ಪತ್ತೆಹಚ್ಚಲು ಆರ್ ಟಿ-ಪಿಸಿಆರ್ ಪರೀಕ್ಷೆ ಮತ್ತು ಆ್ಯಂಟಿಜೆನ್ ಪರೀಕ್ಷೆ ಮೂಲಕ ಪತ್ತೆ ಹಚ್ಚಲಾಗಿದೆ ಎಂದು ವರದಿ ತಿಳಿಸಿದೆ.
ದೇಶದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆ ಕ್ರಿಪ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿಯೇ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪ್ರತಿದಿನ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ. ಇದೀಗ ಕಳೆದ ಒಂದು ವಾರದಿಂದ ದಿನಂಪ್ರತಿ ಒಂದು ಲಕ್ಷಕ್ಕೂ ಅಧಿಕ ಸೋಂಕು ಪತ್ತೆಯಾಗುತ್ತಿದೆ. ಗುರುವಾರ(ಏ.15) 2 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣ ವರದಿಯಾಗಿದೆ.
ಹರಿದ್ವಾರದ ಕುಂಭಮೇಳದಲ್ಲಿ ಏಪ್ರಿಲ್ 10ರಿಂದ 14ರವರೆಗೆ 1,701 ಮಂದಿಗೆ ಕೋವಿಡ್ 19 ಸೋಂಕು ಪತ್ತೆಯಾಗಿದೆ. ಇದರಲ್ಲಿ ಜನಸಾಮಾನ್ಯರು ಹಾಗೂ ವಿವಿಧ ಅಖಾಡಗಳಿಗೆ ಸೇರಿದ ಸ್ವಾಮೀಜಿಗಳು ಸೇರಿರುವುದಾಗಿ ವರದಿ ತಿಳಿಸಿದೆ.
ಕುಂಭಮೇಳ ಕ್ಷೇತ್ರದಲ್ಲಿನ ಆರ್ ಟಿ-ಪಿಸಿಆರ್ ಪರೀಕ್ಷೆಯ ಇನ್ನಷ್ಟು ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಅಧಿಕ ಮಂದಿಗೆ ಕೋವಿಡ್ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಹರಿದ್ವಾರ ಮುಖ್ಯ ಆರೋಗ್ಯಾಧಿಕಾರಿ ಶಂಭು ಕುಮಾರ್ ಝಾ ತಿಳಿಸಿದ್ದಾರೆ.
ಕುಂಭಮೇಳ ಹರಿದ್ವಾರ, ತೆಹ್ರಿ ಗರ್ವಾಲ್ ಮತ್ತು ಉತ್ತರಾಖಂಡ್ ನ ಡೆಹ್ರಾಡೂನ್ ಜಿಲ್ಲೆ ಸೇರಿದಂತೆ ಸುಮಾರು 670 ಹೆಕ್ಟರ್ ಪ್ರದೇಶದಲ್ಲಿ ಕುಂಭಮೇಳ ನಡೆಯುತ್ತಿದೆ. ಏಪ್ರಿಲ್ 12 ಮತ್ತು 14ರಂದು ನಡೆದ ಎರಡು ಪವಿತ್ರ ಶಾಹಿ ಸ್ನಾನದಲ್ಲಿ 48 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಇವರೆಲ್ಲರೂ ಫೇಸ್ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿರುವುದಾಗಿ ವರದಿ ತಿಳಿಸಿದೆ.