ಬೆಂಗಳೂರು: ನೋಟು ಅಮಾನ್ಯದ ಬಳಿಕ ರಾಜ್ಯದಲ್ಲಿ ಜನಧನ್ ಹಾಗೂ ನಿಷ್ಕ್ರಿಯಗೊಂಡಿದ್ದ ಉಳಿತಾಯ ಖಾತೆಗಳಲ್ಲಿ 80 ಲಕ್ಷ ರೂ.ಗಿಂತ ಹೆಚ್ಚು ಹಣ ಜಮೆಯಾಗಿರುವ 17 ಸಾವಿರ ಕೋಟಿ ರೂ. ಮೂಲದ ಬಗ್ಗೆ ಆದಾಯ ತೆರಿಗೆ ಇಲಾಖೆ ತನಿಖೆ ಆರಂಭಿಸಿದೆ.
ನಗರದಲ್ಲಿ 2,300 ಖಾತೆಗಳಿಗೆ ಒಂದು ಕೋಟಿ ರೂ.ಗಿಂತ ಹೆಚ್ಚು ಮೊತ್ತದ ಹಣ ಜಮೆ ಮಾಡಿದ ಖಾತೆದಾರರ ವಹಿವಾಟಿನ ಮೂಲದ ಬಗ್ಗೆಯೂ ಶೋಧ ನಡೆಸಲು ಸಜ್ಜಾಗಿದೆ.
ಆದಾಯ ತೆರಿಗೆ ಇಲಾಖೆಯ (ಗುಪ್ತಚರ ಮತ್ತು ಅಪರಾಧ ತನಿಖೆ ವಿಭಾಗ) ವತಿಯಿಂದ ನಗರದಲ್ಲಿ ಶುಕ್ರವಾರ ರಾಷ್ಟ್ರೀಕೃತ ಬ್ಯಾಂಕ್‌ಗಳು, ಪಟ್ಟಣ ಸಹಕಾರಿ ಬ್ಯಾಂಕ್‌ಗಳು, ಖಾಸಗಿ ಬ್ಯಾಂಕ್ ಹಾಗೂ ಅಂಚೆ ಇಲಾಖೆ ಅಧಿಕಾರಿ, ನೌಕರರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಆದಾಯ ತೆರಿಗೆ ಇಲಾಖೆ (ಐ- ಸಿಐ) ನಿರ್ದೇಶಕ ಆರ್.ರವಿಚಂದ್ರನ್, ಅನುಮಾನಾಸ್ಪದ ಹಣಕಾಸು ವಹಿವಾಟು ನಡೆಸಿದ ಖಾತೆದಾರರ ಹಣ ಮೂಲದ ಬಗ್ಗೆ ಆಮೂಲಾಗ್ರ ತಪಾಸಣೆ ನಡೆದಿದೆ ಎಂದು ಹೇಳಿದರು.
ತನಿಖೆಯ ಮೊದಲ ಭಾಗವಾಗಿ ರಾಷ್ಟ್ರೀಕೃತ ಬ್ಯಾಂಕ್, ಪಟ್ಟಣ ಸಹಕಾರ ಬ್ಯಾಂಕ್‌ಗಳು ಹಾಗೂ ಅಂಚೆ ಇಲಾಖೆಯಲ್ಲಿ ನ.9ರಿಂದ ಡಿ.30ರವರೆಗಿನ ಅವಧಿಯಲ್ಲಿ ಉಳಿತಾಯ ಖಾತೆಗೆ 2.5 ಲಕ್ಷ ರೂ. ಹಾಗೂ ಚಾಲ್ತಿ ಖಾತೆಗೆ 12.5 ಲಕ್ಷ ರೂ. ಠೇವಣಿ ಮಾಡಿದ ಎಲ್ಲರ ವಿವರವನ್ನೂ ನೀಡಬೇಕು. ಈ ಸಂಬಂಧ ನಿಯಮ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಠೇವಣಿದಾರರು 2016ರ ಏಪ್ರಿಲ್ 1ರಿಂದ ನ.8ರವರೆಗೆ ನಡೆಸಿದ ಹಣಕಾಸು ವಹಿವಾಟಿನ ವಿವರವನ್ನು ಬ್ಯಾಂಕ್‌ಗಳ ಅಧಿಕಾರಿಗಳು ಸಲ್ಲಿಸಬೇಕು. ಇದರಿಂದ ನೋಟು ಅಮಾನ್ಯಕ್ಕೂ ಮುಂಚೆ ಹಾಗೂ ನಂತರದ ಹಣಕಾಸಿನ ವ್ಯವಹಾರ, ದೊಡ್ಡ ಮೊತ್ತದ ವಹಿವಾಟು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ ಎಂದರು.
ದೇಶಾದ್ಯಂತ 1.34 ಕೋಟಿ ಖಾತೆಗಳಲ್ಲಿ 7.32 ಲಕ್ಷ ಕೋಟಿ ರೂ. ಠೇವಣಿಯಾಗಿದ್ದು, ಇದರ ಮೂಲದ ಪತ್ತೆಗೂ ತನಿಖೆ ಶುರುವಾಗಿದೆ. ಜನಧನ್ ಹಾಗೂ ನಿಷ್ಕ್ರಿಯಗೊಂಡಿದ್ದ ಖಾತೆಗಳಿಗೆ 90 ಸಾವಿರ ಕೋಟಿ ರೂ. ಜಮೆಯಾಗಿದ್ದು, ಈ ಬಗ್ಗೆಯೂ ಪರಿಶೀಲನೆ ನಡೆದಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಒಂದು ಜನಧನ್ ಖಾತೆಗೆ ಬರೋಬ್ಬರಿ 35 ಕೋಟಿ ರೂ. ಜಮೆಯಾಗಿದ್ದು, ಆದಾಯ ತೆರಿಗೆ ಇಲಾಖೆ ಈ ಹಣದ ಮೂಲ ಬೆನ್ನು ಹತ್ತಿದೆ. ಹಾಗೆಯೇ ರಾಜ್ಯದಲ್ಲಿನ 266 ಪಟ್ಟಣ ಸಹಕಾರ ಬ್ಯಾಂಕ್‌ಗಳ ಪೈಕಿ 205 ಬ್ಯಾಂಕ್‌ಗಳು ಮಾಹಿತಿ ನೀಡಿದ್ದು, ಇನ್ನುಳಿದ 61 ಬ್ಯಾಂಕ್‌ಗಳಿಗೆ ಜ.31ರೊಳಗೆ ಮಾಹಿತಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
– ಆರ್.ರವಿಚಂದ್ರನ್, ಆದಾಯ ತೆರಿಗೆ ಇಲಾಖೆ (ಐ- ಸಿಐ) ನಿರ್ದೇಶಕ.