ಬೆಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಸೇರಿ ರಾಜ್ಯದ 11 ಜಿಲ್ಲೆಗಳ 17 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾಲ ಸನ್ನಿಹಿತವಾಗಿದೆ.
ಈ ವರ್ಷದ ಡಿಸೆಂಬರ್‌ನಲ್ಲಿ ಅವಧಿ ಮುಕ್ತಾಯ ವಾಗಲಿರುವ ಶಿವಮೊಗ್ಗ ಜಿಲ್ಲೆ ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ, ಬಳ್ಳಾರಿ ಜಿಲ್ಲೆಯ ಕಂಪ್ಲಿ ಪುರಸಭೆ ಹಾಗೂ ಕೂಡ್ಲಿಗಿ ಪಟ್ಟಣ ಪಂಚಾಯಿತಿ ಸೇರಿ ಹೈಕೋರ್ಟ್‌ನಲ್ಲಿ ವ್ಯಾಜ್ಯ ಇತ್ಯರ್ಥಗೊಂಡಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಸದ್ಯದಲ್ಲಿಯೇ ಚುನಾವಣೆ ನಡೆಸಬೇಕಾಗಿದ್ದು, ಈ ಸಂಬಂಧ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಚುನಾವಣೆ ನಡೆಯಲಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ರಾಜ್ಯ ಚುನಾವಣಾ ಆಯೋಗವು ಸೆ.13 ರಂದು ತುರ್ತು ಸುತ್ತೋಲೆ ಹೊರಡಿಸಿದೆ.
ಮತದಾರರ ಪಟ್ಟಿ, ಮತದಾನ ಕೇಂದ್ರಗಳು, ಮತದಾನ ಸಿಬ್ಬಂದಿ ನೇಮಕ, ಚುನಾವಣಾಧಿಕಾರಿಗಳ ನೇಮಕ, ಇಎಂಗಳ ಸಂಗ್ರಹಣೆ, ಚುನಾವಣಾ ವೆಚ್ಚ ಅಧಿಕಾರಿಗಳ ನೇಮಕ, ಚುನಾವಣಾ ಸಾಮಗ್ರಿಗಳ ಸಂಗ್ರಹಣೆ ಹಾಗೂ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಪೂರ್ವಸಿದ್ಧತೆಗಳನ್ನು ಮಾಡಿಕೊಂಡು ಆಯೋಗಕ್ಕೆ ವರದಿ ಸಲ್ಲಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ರಾಜ್ಯದ ಒಟ್ಟು 270 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 2018ರ ಅಗಸ್ಟ್‌ನಲ್ಲಿ 103 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲಾಗಿದೆ. 2019ರ ಮಾರ್ಚ್‌ರಿಂದ ಜೂನ್ ವರೆಗೆ ಅವಧಿ ಮುಕ್ತಾಯಗೊಳ್ಳಲಿರುವ 106 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಈ ವರ್ಷದ ಮೇನಲ್ಲಿ 63 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲಾಗಿತ್ತು.
ಈ ಮಧ್ಯೆ, ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಪ್ರಕ್ರಿಯೆಯನ್ನು ಈ ವರ್ಷದ ನವೆಂಬರ್ 15ರೊಳಗೆ ಪೂರ್ಣಗೊಳಿಸುವಂತೆ ಅ.28ರಂದು ಹೈಕೋರ್ಟ್ ಆದೇಶ ನೀಡಿದೆ. ಶಾಸಕರು ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಹೊಸಕೋಟೆ, ಚಿಕ್ಕಬಳ್ಳಾಪುರ ಹಾಗೂ ಹುಣಸೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಗಳ ಜತೆಗೆ ಅಲ್ಲಿನ ನಗರಸಭೆಗೂ ಚುನಾವಣೆ ನಡೆಯಲಿದೆ.
ಚುನಾವಣೆ ನಡೆಯಬೇಕಿರುವ ನಗರ ಸ್ಥಳೀಯ ಸಂಸ್ಥೆಗಳು
ಮಹಾನಗರ ಪಾಲಿಕೆ: ಮಂಗಳೂರು, ದಾವಣಗೆರೆ.
ನಗರಸಭೆ: ಹೊಸಕೋಟೆ, ಕನಕಪುರ, ಕೋಲಾರ, ಮುಳಬಾಗಿಲು, ಕೆ.ಜಿ.ಎಫ್, ಚಿಕ್ಕಬಳ್ಳಾಪುರ, ಗೌರಿಬಿದನೂರು, ಚಿಂತಾಮಣಿ, ಹುಣಸೂರು.
ಪುರಸಭೆ: ಮಾಗಡಿ, ಬೀರೂರು, ಕಂಪ್ಲಿ.
ಪಟ್ಟಣ ಪಂಚಾಯ್ತಿ: ಜೋಗ ಕಾರ್ಗಲ್, ಕುಂದಗೋಳ, ಕೂಡ್ಲಿಗಿ.