ಜಮಖಂಡಿ: ತಾಲೂಕಿನಲ್ಲಿ 1ರಿಂದ 19 ವರ್ಷದೊಳಗಿನ ಶಾಲೆಗೆ ದಾಖಲಾದ 1.50ಲಕ್ಷ ಮಕ್ಕಳು ಹಾಗೂ ಶಾಲೆ, ಅಂಗನವಾಡಿ ಕೇಂದ್ರಗಳಿಂದ ಹೊರಗುಳಿದ 11,250 ಮಕ್ಕಳ ಸಹಿತ 1.62ಲಕ್ಷ ಮಕ್ಕಳಿಗೆ ಮಾತ್ರೆ ನುಂಗಿಸುವ ಗುರಿ ಹಾಕಿಕೊಂಡಿದ್ದೇವೆ ಎಂದು ಪ್ರಭಾರಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಎಸ್.ಆರ್.ಗೌಡನ್ನವರ ಹೇಳಿದರು.
ನಗರದ ಕುಡಚಿ ರಸ್ತೆಯಲ್ಲಿನ ಮಿನಿ ವಿಧಾನಸೌಧ ಸಭಾಭವನದಲ್ಲಿ ಆ.10ರಂದು ರಾಷ್ಟ್ರೀಯ ಜಂತು ಹುಳ ನಿವಾರಣೆ ದಿನಾಚರಣೆ ಹಾಗೂ ಆ.13ರಂದು ಗ್ರಾಮ ಸ್ವರಾಜ್ಯ ಅಭಿಯಾನ ಕಾರ್ಯಕ್ರಮದ ನಿಮಿತ್ತ ತಹಶೀಲ್ದಾರ್ ಪ್ರಶಾಂತ ಚನಗೊಂಡ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ 1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ರಕ್ತಹಿನತೆ, ಪೌಷ್ಟಿಕಾಂಶದ ಕೊರತೆ, ನಿಶಕ್ತಿ, ಆತಂಕ ಹೊಟ್ಟೆ ನೋವು, ವಾಕರಿಕೆ, ವಾಂತಿ, ಅತಿಸಾರ, ತೂಕ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಆ.10ರಂದು ರಾಷ್ಟ್ರೀಯ ಜಂತುಹುಳ ದಿನಾಚರಣೆ ದಿನದಂದು ಎಲ್ಲ ಮಕ್ಕಳಿಗೆ ಅಲೆºಂಡೆಝೋತ-400 ಎಂ.ಜಿ ಮಾತ್ರೆ ನೀಡುವ ಮೂಲಕ ರಕ್ತಹೀನತೆ ನಿಯಂತ್ರಿಸಲಾಗುತ್ತಿದೆ. ಶಿಕ್ಷಣ ಇಲಾಖೆಯಲ್ಲಿ ಬರತಕ್ಕ ಎಲ್ಲ ಸರಕಾರಿ, ಖಾಸಗಿ, ಅನುದಾನಿತ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ 1ರಿಂದ10ನೇ ತರಗತಿ ಮಕ್ಕಳಿಗೆ ಆ.10ರಂದು ಎಲ್ಲ ಮಕ್ಕಳು ಶಾಲೆಗೆ ಹಾಜರಿರಬೇಕೆಂದು ಶಿಕ್ಷಕರು ಮಕ್ಕಳಿಗೆ ಮಾತ್ರೆ ನೀಡಬೇಕು. ಸಮಾಜ ಕಲ್ಯಾಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಶಾಲೆಯಿಂದ, ಅಂಗನವಾಡಿ ಕೇಂದ್ರಗಳಿಂದ ಹೊರಗುಳಿದ ಮಕ್ಕಳ ಪ್ರತಿ ಮನೆಗಳಿಗೆ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಮಾತ್ರೆ ನುಂಗಿಸುವಂತೆ ಕೆಲಸ ಮಾಡಲಿದ್ದಾರೆ ಎಂದರು.
ದೇಶದಲ್ಲಿ 2020ಕ್ಕೆ ಸಂಪೂರ್ಣ ಲಸಿಕೆ ಕೊಡಿಸುವ ಉದ್ದೇಶದಿಂದ ಗರ್ಭಿಣಿಯರಿಗೆ ಪ್ರತಿ ಗ್ರಾಮ, ನಗರ ಪ್ರದೇಶ ಅತೀಸೂಕ್ಷ್ಮ ಪ್ರದೇಶಗಳಲ್ಲಿ ಮಕ್ಕಳು, ಗರ್ಭಿಣಿಯರನ್ನು ಗುರುತಿಸಿ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮೀಕ್ಷೆಗಾಗಿ ಪ್ರತಿ ಮನೆಗಳಿಗೆ ಆಶಾ ಕಾರ್ಯಕರ್ತರ ತಂಡ ರಚಿಸಿ ಲಸಿಕೆ ಹಾಕಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಪ್ರಶಾಂತ ಚನಗೊಂಡ ಮಾತನಾಡಿ, ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು ಅಭಿಯಾನದಲ್ಲಿ ಪಾಲ್ಗೊಂಡು ಮಕ್ಕಳಿಗೆ ಮಾತ್ರೆ ನುಂಗಿಸುವ ಮೂಲಕ ಯೋಜನೆ ಯಶಸ್ವಿಗೊಳಿಸಬೇಕು. ಶಿಕ್ಷಣ, ಆರೋಗ್ಯ, ಗ್ರಾಪಂ, ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ವದಾಗಿದೆ. ಬಡಾವಣೆಗಳಲ್ಲಿ, ಗ್ರಾಮಗಳಲ್ಲಿ ಡಂಗೂರ ಹಾಕಿಸುವುದು. ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ಸಹಿತ ಧ್ವನಿವರ್ಧಕ ಮುಖಾಂತರ ಹೆಚ್ಚಿನ ಪ್ರಚಾರ ಮಾಡಬೇಕು. ರಾಷ್ಟ್ರೀಯ ಜಂತುಹುಳು ನಿವಾರಣೆ ಹಾಗೂ ಗ್ರಾಮ ಸ್ವರಾಜ್ಯ ಅಭಿಯಾನ ಕಾರ್ಯಕ್ರಮ ಯಶಸ್ವಿಗೊಳಿಸಲು ತಾಲೂಕು ಮಟ್ಟದ ಸಮನ್ವಯ ಸಮಿತಿ ಸದಸ್ಯರು ಕೈ ಜೋಡಿಸಬೇಕು ಎಂದರು.
ಐಎಂಎ ಅಧ್ಯಕ್ಷ ಡಾ.ಎಚ್.ಜಿ.ದಡ್ಡಿ ಮಾತನಾಡಿ, ಕಾರ್ಯಕ್ರಮ ಯಶಸ್ವಿಗೊಳಿಸಲು ಗ್ರಾಮಮಟ್ಟದಲ್ಲಿ ಮತ್ತು ನಗರ ಪ್ರದೇಶಗಳಲ್ಲಿ ಆರೋಗ್ಯ, ಶಿಕ್ಷಣ ಮತ್ತು ಜನಪ್ರತಿನಿಧಿ ಗಳು ಸಕ್ರಿಯವಾಗಿ ಭಾಗವಹಿಸಿ ಎಲ್ಲ ಮಕ್ಕಳಿಗೆ ಮಾತ್ರೆ ನುಂಗಿಸುವ ಪ್ರಯತ್ನ ಮಾಡಬೇಕು. ಕಾಟಾಚಾರಕ್ಕೆ ಅಭಿಯಾನ, ಜಾಥಾ ಆಗಬಾರದು ಎಂದರು. ತಾಪಂ ಅಧಿಕಾರಿ ಬಿರಾದಾರ, ಎಸ್.ವಿ.ಮಹಾಜನ್, ಟಿ.ಬಿ.ಮಂಟೂರ, ಹಿರಿಯ ಆರೋಗ್ಯ ಸಹಾಯಕ ಎಂ.ಎಚ್.ಕಡ್ಲಿಮಟ್ಟಿ ಸಹಿತ ಹಲವರು ಇದ್ದರು.