ಬೆಂಗಳೂರು: ರಾಜ್ಯದಲ್ಲಿ ಕೋವಿಡ್ -19 ಸೋಂಕು ಕಳವಳ ಮುಂದುವರಿದಿದೆ. ಇಂದು 161 ಜನರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಇದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 5921ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಇಂದು ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚಿನ ಸೋಂಕಿತರು ಕಂಡು ಬಂದಿದ್ದು, ಇಲ್ಲಿ 61 ಜನರಿಗೆ ಸೋಂಕು ಪತ್ತೆಯಾಗಿದೆ. ಉಳಿದಂತೆ ಬೆಂಗಳೂರು ನಗರ ಜಿಲ್ಲೆಯಲ್ಲಿ 29 ಜನರಿಗೆ ಕೋವಿಡ್ ಸೋಂಕು ದೃಢವಾಗಿದೆ.
ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಇಂದು 23 ಜನರಿಗೆ ಸೋಂಕು ದೃಢವಾಗಿದೆ. ಆದರೆ ರಾಜ್ಯದಲ್ಲಿ ಅತೀ ಹೆಚ್ಚು ಸೋಂಕಿತರನ್ನು ಹೊಂದಿರುವ ಉಡುಪಿ ಜಿಲ್ಲೆಯಲ್ಲಿ ಇಂದು ಯಾವುದೇ ಸೋಂಕು ಪ್ರಕರಣಗಳು ಕಂಡು ಬರದಿರುವುದು ಜನತೆಗೆ ಸಮಾಧಾನ ತಂದಿದೆ.
ಕಲಬುರಗಿಯಲ್ಲಿ ಇಂದು 10 ಜನರಿಗೆ ಸೋಂಕು ತಾಗಿದ್ದರೆ, ಬೀದರ್ ಒಂಬತ್ತು, ದಾವಣಗೆರೆ ಎಂಟು, ಕೊಪ್ಪಳ ಆರು, ಶಿವಮೊಗ್ಗ ಜಿಲ್ಲೆಯಲ್ಲಿ ನಾಲ್ಕು ಕೋವಿಡ್ 19 ಪ್ರಕರಣಗಳು ಇಂದು ವರದಿಯಾಗಿದೆ.
ವಿಜಯಪುರ, ಚಿಕ್ಕಬಳ್ಳಾಪುರ, ಮೈಸೂರು ಮತ್ತು ಧಾರವಾಡ ಜಿಲ್ಲೆಗಳಲ್ಲಿ ತಲಾ ಎರಡು ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿದೆ. ಬಾಗಲಕೋಟೆ, ತುಮಕೂರಿನಲ್ಲಿ ಒಂದು ಪ್ರಕರಣ ವರದಿಯಾಗಿದೆ. ಇದುವರೆಗೆ ಒಂದೂ ಸೋಂಕು ಪ್ರಕರಣ ದೃಢವಾಗಿರದ ಚಾಮರಾಜನಗರದ ಜಿಲ್ಲೆಗೆ ಬಂದ ಮುಂಬೈ ನಿವಾಸಿಗೆ ಸೋಂಕು ಕಾಣಿಸಿಕೊಂಡಿದೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5921ಕ್ಕೆ ಏರಿಕೆ ಕಂಡಿದೆ. ಇಂದು ಒಟ್ಟು 164 ಜನರು ಗುಣಮುಖರಾಗಿದ್ದು, ಒಟ್ಟು 2605 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 66 ಜನರು ಸೋಂಕಿನ ಕಾರಣದಿಂದ ಮರಣ ಹೊಂದಿದ್ದಾರೆ. ಇಬ್ಬರು ಕೋವಿಡ್ ಅಲ್ಲದ ಕಾರಣದಿಂದ ಸಾವನ್ನಪ್ಪಿದ್ದಾರೆ.