Advertisement

ಹಕ್ಕುಪತ್ರಕ್ಕೆ ಕಾಯುತ್ತಿದೆ ಕನಕದಾಸ ಕಾಲನಿಯ 16 ದಲಿತ ಕುಟುಂಬಗಳು

08:16 PM Mar 03, 2022 | Team Udayavani |

ಪುತ್ತೂರು: ನಗರದ ಕೇಂದ್ರ ಸ್ಥಾನದೊಳಗಿರುವ ಪಡೀಲಿನ ಕನಕದಾಸ ಕಾಲನಿಯಲ್ಲಿ ಹಲವು ವರ್ಷಗಳಿಂದ ಸೂರು ಕಟ್ಟಿಕೊಂಡು ವಾಸಿಸುತ್ತಿರುವ 16 ದಲಿತ ಕುಟುಂಬಗಳಿಗೆ ನಿವೇಶನದ ಹಕ್ಕುಪತ್ರ ಸಿಗದೆ ಸರಕಾರದ ಸೌಲಭ್ಯಗಳಿಂದ ವಂಚಿತಗೊಂಡಿರುವ ಕಥೆ- ವ್ಯಥೆಯಿದು.

Advertisement

ಹಕ್ಕುಪತ್ರಕ್ಕಾಗಿ ಹತ್ತಾರು ಮನವಿ, ಬೇಡಿಕೆಗಳು ಸಲ್ಲಿಸಿದ್ದು, ಸ್ಥಳೀಯ ವಾರ್ಡ್‌ ಸದಸ್ಯರು ನಗರಸಭೆ ಸಭೆಗಳಲ್ಲಿ ಧ್ವನಿ ಎತ್ತಿದ್ದಾರೆ. ನಿವೇಶನಕ್ಕೆ ಹಕ್ಕುಪತ್ರ ಸಿಗದೆ ಕಾಯುತ್ತಿರುವ ಕನಕದಾಸ ಕಾಲನಿ ನಿವಾಸಿಗಳಿಗೆ ಸೌಲಭ್ಯ ಸಿಗಬೇಕಿದೆ.

ಐವತ್ತು ಸೆಂಟ್ಸ್‌  ಜಾಗ :

ನಗರಸಭೆಯ ವ್ಯಾಪ್ತಿಯ ವಾರ್ಡ್‌ ಸಂಖ್ಯೆ 12ರ ಪಡೀಲಿನ ಕನಕದಾಸ ಕಾಲನಿ ದಶಕಗಳ ಹಿಂದಿನಿಂದಲೇ ಇದೆ. ಐವತ್ತು ಸೆಂಟ್ಸ್‌ ಜಾಗ ದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 16 ಕುಟುಂಬಗಳು ವಾಸಿ ಸುತ್ತಿವೆ. ಕೂಲಿ ನಾಲಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡುವವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಮನೆ ಅಡಿ ಸ್ಥಳಕ್ಕೆ ಈ ತನಕ ಹಕ್ಕುಪತ್ರ ಆಗಿಲ್ಲ. ಹಾಗಾಗಿ ಸರಕಾರದ ಸೌಲಭ್ಯಗಳು ಸಿಗುತ್ತಿಲ್ಲ ಎನ್ನುತ್ತಾರೆ ಕಾಲನಿ ನಿವಾಸಿಗಳು.

ದಾನ ರೂಪದಲ್ಲಿ ನೀಡಿದ ಜಾಗ :

Advertisement

ಸುಬ್ಬರಾವ್‌ ಅವರಿಗೆ ಸೇರಿದ ಜಾಗ ಇದಾಗಿದ್ದು ಅವರ ಕಾಲದಲ್ಲಿಯೇ ಹದಿನಾರು ಕುಟುಂಬಗಳಿಗೆ ವಾಸಕ್ಕೆ ಅವಕಾಶ ನೀಡಲಾಗಿತ್ತು. ಇದನ್ನು ಅಭಿವೃದ್ಧಿ ಪಡಿಸುವ ಇಚ್ಛೆ ಹೊಂದಿದ್ದರೂ ನಗರಾ ಡಳಿತದಿಂದ ಖಾಸಗಿ ಜಾಗಕ್ಕೆ ನೇರವಾಗಿ ಮೂಲ ಸೌಕರ್ಯ ಒದಗಿಸಲು ಅಸಾಧ್ಯ ಎಂದರಿತು 50 ಸೆಂಟ್ಸ್‌ ಜಾಗವನ್ನು ಅಂದಿನ ಪುರಸಭೆ ಆಡಳಿತಕ್ಕೆ ದಾನ ಪತ್ರದ ಮೂಲಕ ನೀಡಿದರು. ಬಳಿಕ ಈ ಜಾಗ ನಗರಾಡಳಿತದ ಸುಪರ್ದಿಗೆ ಸೇರ್ಪಡೆಗೊಂಡಿತು.

ಸರ್ವೇಗೆ ನಿರ್ಧಾರ :

ಜಾಗದ ಮೂಲ ಮಾಲಕರು ಜಮೀ ನನ್ನು ಪುರಸಭೆಗೆ ಹಸ್ತಾಂತರಿಸಿದ್ದರೂ ಅಲ್ಲಿ ಮನೆ ಕಟ್ಟಿ ಕೊಂಡ ಕುಟುಂಬಗಳಿಗೆ ನೇರವಾಗಿ ಹಕ್ಕು ಪತ್ರ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಬ್ರಹ್ಮನಗರ ಕಾಲನಿಯದ್ದೂ ಹಕ್ಕುಪತ್ರವೇ ಇಲ್ಲದ ಕಥೆ :

ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ತಾಗಿಕೊಂಡಿರುವ ಕಾಲನಿಯ ಹಳೆಯ ಹೆಸರು ಬೊಟ್ಟತ್ತಾರು. ಕೆಲವು ವರ್ಷಗಳಿಂದ ಬ್ರಹ್ಮನಗರ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಸುಮಾರು 52 ದಲಿತ ಕುಟುಂಬಗಳಿದ್ದು, 350ಕ್ಕೂ ಅಧಿಕ ಜನರಿದ್ದಾರೆ. 100 ವರ್ಷಗಳ ಹಿಂದೆ ಒಂದಕ್ಕೊಂದು ತಾಗಿಕೊಂಡಂತೆ ಮೂರು ಸಾಲಿನಲ್ಲಿ ಕಟ್ಟಿದ 30ಕ್ಕೂ ಅಧಿಕ ಮನೆಗಳಿವೆ. ಕೆಲವು ಮನೆಗಳಲ್ಲಿ ಎರಡು-ಮೂರು ಕುಟುಂಬಗಳಿದ್ದು ಹೆಚ್ಚಿನ ಮನೆಗಳು ನಾದುರಸ್ತಿಯಲ್ಲಿದೆ. ಇಲ್ಲಿನ ಫಲಾನುಭವಿಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ಈ ಜಾಗ ಪ್ರಭಾಕರ್‌ ರಾವ್‌ ಅವರಿಗೆ ಸೇರಿದ ಸ್ಥಳ. ಹಿಂದೆ ಕ್ವಾಟ್ರಸ್‌ ವ್ಯವಸ್ಥೆ ಮಾಡಿಸಿದ್ದರು. ಅದಕ್ಕಿಂತ ಮೊದಲು ಇಲ್ಲಿ ಮುಳಿ ಮಾಡಿನ ಮನೆ ಇತ್ತು. ಈ ಜಾಗದ ಹಕ್ಕುದಾರರು ಪ್ರಸ್ತುತ ಎಲ್ಲಿದ್ದಾರೆ ಎನ್ನುವುದು ಗೊತ್ತಿಲ್ಲ. ಕಂದಾಯ ಇಲಾಖೆ ಮೂಲಕ ಹುಡುಕುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ವಾಸದಲ್ಲಿರುವ ಕುಟುಂಬಕ್ಕೆ ಹಕ್ಕುಪತ್ರ ನೀಡಲಾಗಿಲ್ಲ. ಸ್ವಾಧೀನದಾರರ ಕೈಯಲ್ಲಿ ಈ ಜಾಗ ಇಲ್ಲದಿರುವ ಕಾರಣ ಕಂದಾಯ ಇಲಾಖೆ ಇದನ್ನು ಮುಟ್ಟುಗೋಲು ಹಾಕಿ ಸರಕಾರದ ವಶಕ್ಕೆ ಪಡೆದು ಇಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ಸಹಿತ ಮನೆ ನೀಡಲು ನಿರ್ಧರಿಸಿ ತಹಶೀಲ್ದಾರ್‌ ನೇತೃತ್ವದಲ್ಲಿ ಸ್ಥಳ ಸರ್ವೇ ನಡೆದು ಸ್ಕೆಚ್‌ ಮಾಡಲಾಗಿದೆ. 1.50 ಎಕ್ರೆ ಗುರುತಿಸಿ ಸಹಾಯಕ ಆಯುಕ್ತರಿಗೆ ಕಳುಹಿಸಲಾಗಿದೆ. ಅದಿನ್ನು ಅಂತಿಮ ಹಂತಕ್ಕೆ ಬಂದಿಲ್ಲ.

ಸ್ಥಳ ಪರಿಶೀಲಿಸಿ ವರದಿ :

ಕನಕದಾಸ ಕಾಲನಿಯಲ್ಲಿ ಹದಿನಾರು ಕುಟುಂಬಗಳು ವಾಸಿಸುತ್ತಿರುವ ಸ್ಥಳ ಪರಿಶೀಲಿಸಿ ಭೂ ಮಾಪನ ವರದಿ ತಯಾರಿಸಲಾಗುವುದು. ಅದನ್ನು ಶಾಸಕರ, ಸಹಾಯಕ ಆಯುಕ್ತರ ಅಧ್ಯಕ್ಷತೆಯ ಆಶ್ರಯ ಸಮಿತಿಯ ಮುಂದಿಟ್ಟ ಬಳಿಕ ಹಕ್ಕುಪತ್ರ ನೀಡುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. -ಮಧು ಎಸ್‌. ಮನೋಹರ್‌, ಪೌರಾಯುಕ್ತರು, ಪುತ್ತೂರು ನಗರಸಭೆ.

ನಗರಸಭೆಗೆ ಮನವಿ :

ಕನಕದಾಸ ಕಾಲನಿಯ 16  ಮನೆಗಳಿಗೆ ಹಕ್ಕುಪತ್ರ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಬಹುಮಹಡಿ ಮಾದರಿಯ ಮನೆ ನಿರ್ಮಾಣಕ್ಕೆ ಕಾಲನಿ ನಿವಾಸಿಗಳು ಒಪ್ಪಿಲ್ಲ. ನಿವೇಶನಕ್ಕೆ ಹಕ್ಕುಪತ್ರ ಒದಗಿಸುವಂತೆ ಬೇಡಿಕೆ ಇರಿಸಿದ್ದಾರೆ. ಈ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದೇನೆ. ನಗರಸಭೆಗೆ ಮನವಿ ಮಾಡಿ ದ್ದೇನೆ.-ಪದ್ಮನಾಭ ನಾಯ್ಕ, ನಗರಸಭೆ ಸದಸ್ಯರು, ವಾರ್ಡ್‌-12.

 -ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next