ರಾಯಚೂರು: ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಈವರೆಗೂ 158 ಕೋಟಿರೂ. ಹಾನಿಯಾಗಿದ್ದು, 61 ಕೋಟಿ ರೂ. ಪರಿಹಾರ ವಿತರಿಸಲಾಗಿದೆಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ತಿಳಿಸಿದರು.
ರಾಜ್ಯಾದ್ಯಂತ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಶುಕ್ರವಾರಸಿಎಂ ಬಿ.ಎಸ್.ಯಡಿಯೂರಪ್ಪ ನಡೆಸಿದ ಸಂವಾದದಲ್ಲಿ ಅವರು ಮಾಹಿತಿ ನೀಡಿದರು. ಮಳೆಯಿಂದಹಾನಿಯಾದವರಿಗೆ ಎನ್.ಡಿ.ಆರ್.ಎಫ್. ಮಾರ್ಗಸೂಚಿಗಳನ್ವಯಈಗಾಗಲೇ ಪರಿಹಾರ ನೀಡಲಾಗಿದೆ. ಮಳೆಯಿಂದ 487 ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಜೂನ್ 1ರಿಂದ ಸೆಪ್ಟಂಬರ್ ಅಂತ್ಯದವರೆಗೆ ಜಿಲ್ಲೆಯಲ್ಲಿ 440 ಮಿ.ಮೀ. ಮಳೆಯಾಗಿದೆ.
ವಾಡಿಕೆಗಿಂತ ಶೇ.32ರಷ್ಟು ಹೆಚ್ಚು ಮಳೆಯಾಗಿದ್ದು, 18 ಜಾನುವಾರು ಮೃತಪಟ್ಟಿವೆ. ದೇವದುರ್ಗ ತಾಲೂಕಿನಲ್ಲಿ ಮನೆ ಗೋಡೆ ಕುಸಿದು 8 ಕುರಿ ಸತ್ತಿವೆ. ಜಿಲ್ಲೆಯಲ್ಲಿ ಭಾರೀ ಮಳೆ, ಪ್ರವಾಹದಿಂದ ಜೂನ್‌ನಿಂದ ಇದುವರೆಗೂ 18 ಜನರು ಮೃತಪಟ್ಟಿದ್ದಾರೆ. ಮೃತರ ಎಲ್ಲಕುಟಂಬಗಳಿಗೆ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.
ಮಳೆಯಿಂದ ಜಿಲ್ಲೆಯ 22,031 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ,23,745 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಜುರಾಲಾ ಡ್ಯಾಂಗೆ 5.40 ಲಕ್ಷ ಕ್ಯೂಸೆಕ್ ನೀರುಹರಿಸಲಾಗಿದೆ. ತುಂಗಭದ್ರಾ ಡ್ಯಾಂನ್‌ನಲ್ಲಿ 20 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದೆ. ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಸಿದ ಕಾರಣ ರಾಯಚೂರು ತಾಲೂಕಿನಗುರ್ಜಾಪುರ, ಡಿ.ರಾಂಪುರು, ಬೂರ್ದಿಪಾಡು ಮತ್ತು ಅತ್ತೂರು ಗ್ರಾಮಗಳ 800 ಜನ ಸಂತ್ರಸ್ತರನ್ನು ಈಗಾಗಲೇ ಸ್ಥಳಾಂತರಿಸಿ ನಾಲ್ಕು ಕಾಳಜಿಕೇಂದ್ರ ಪ್ರಾರಂಭಿಸಲಾಗಿದೆ ಎಂದು ವಿವರಿಸಿದರು.
ಕಳೆದ ಒಂದು ವಾರದ ಹಿಂದೆ ಸುರಿದ ಮಳೆಯಿಂದಾಗಿ ಹಾನಿಯಾಗಿರುವಬಗ್ಗೆ ಸರ್ವೇ ನಡೆಯುತ್ತಿದೆ. ಒಂದು ವಾರದಲ್ಲಿ ಎಲ್ಲ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಜಿಲ್ಲೆಯಲ್ಲಿ ಮಳೆ, ಪ್ರವಾಹ ಎದುರಿಸಲು ಜಿಲ್ಲಾಡಳಿತಮತ್ತು ಜಿಲ್ಲಾ ಪೊಲೀಸ್ ಇಲಾಖೆ ಅಗತ್ಯಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.ಈಗಾಗಲೇ ನದಿ ತೀರದ ಗ್ರಾಮಗಳಜನರಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿ, ನದಿ ತೀರದಲ್ಲಿ ಯಾರೂ ಹೋಗದಂತೆ ನಿರ್ಬಂಧಿಸಲಾಗಿದೆಎಂದು ವಿವರಿಸಿದರು. ಎಸ್‌ಪಿ, ಜಿಪಂ ಸಿಇಒ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.