ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ 100 ತಾಲೂಕು ಬರಪೀಡಿತ ಎಂದು ಘೋಷಿಸಲಾಗಿತ್ತು. ಇದೀಗ ಹಿಂಗಾರು ಮಳೆ ವೈಫಲ್ಯ ಹಿನ್ನೆಲೆಯಲ್ಲಿ ಇನ್ನೂ 56 ತಾಲೂಕು ಬರ ಪೀಡಿತ ಎಂದು ಘೋಷಿಸಲಾಗಿದೆ. ರಾಜ್ಯದಲ್ಲಿ ಬರ ಹಾಗೂ ಪ್ರವಾಹ
ಹಿನ್ನೆಲೆಯಲ್ಲಿ ಆಹಾರ ಉತ್ಪಾದನೆಯು ಕುಸಿತವಾಗಿದ್ದು, ಒಟ್ಟಾರೆ 20 ಸಾವಿರ ಕೋಟಿ ರೂ. ನಷ್ಟವುಂಟಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಘೋಷಿಸಿದ್ದಾರೆ.
Advertisement
ಬುಧವಾರ ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಬರಪೀಡಿತ ತಾಲೂಕುಗಳ ಪಟ್ಟಿ ಬಿಡುಗಡೆ ಮಾಡಿದರು. ಈಗಾಗಲೇ 100 ಬರಪೀಡಿತ ತಾಲೂಕುಗಳ ನಿರ್ವಹಣೆಗಾಗಿ ಶಾಸಕರನೇತೃತ್ವದ ಟಾಸ್ಕ್ಫೋರ್ಸ್‌ಗೆ ಕಂದಾಯ ಇಲಾಖೆಯಿಂದ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಜತೆಗೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಿಂದ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಒಟ್ಟು 1 ಕೋಟಿ ರೂ. ಬಿಡುಗಡೆ ಆದಂತಾಗಿದೆ ಎಂದು ಹೇಳಿದರು. ಈಗ ಬರಪೀಡಿತ ಎಂದು ಘೋಷಣೆ ಮಾಡಿರುವ 56 ತಾಲೂಕುಗಳಿಗೆ 25 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಮತ್ತೆ 25 ಲಕ್ಷ ರೂ. ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.