Advertisement

1538 ಆ್ಯಂಬುಲೆನ್ಸ್‌ ನಿರ್ವಹಣೆ ಒಂದೇ ಸಂಸ್ಥೆಗೆ

11:25 AM Oct 21, 2017 | Team Udayavani |

ಬೆಂಗಳೂರು: “108 ಆರೋಗ್ಯ ಕವಚ’ ಸೇವೆಯಡಿ ಆ್ಯಂಬುಲೆನ್ಸ್‌ಗಳ ನಿರ್ವಹಣೆಗೆ ಕರೆಯಲಾದ ಹೊಸ ಟೆಂಡರ್‌ ಅಂತಿಮ ಹಂತದಲ್ಲಿದ್ದು, ಈ ಹಿಂದೆ ಗುತ್ತಿಗೆ ಪಡೆದಿದ್ದ ಜಿವಿಕೆ- ಇಎಂಆರ್‌ಐ ಸಂಸ್ಥೆ ಸೇರಿ 3 ಸಂಸ್ಥೆಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಹೊಸ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಸದ್ಯದಲ್ಲೇ ಹಂಚಿಕೆಯಾಗುವ ಸಾಧ್ಯತೆಯಿದೆ.

Advertisement

ಈ ನಡುವೆ ಜಿವಿಕೆ- ಇಎಂಆರ್‌ಐ ಸಂಸ್ಥೆಯೊಂದಿಗಿನ ಗುತ್ತಿಗೆ ಒಡಂಬಡಿಕೆ ರದ್ಧತಿಗೆ ಸರ್ಕಾರ ನೀಡಿದ್ದ 3 ತಿಂಗಳ ನೋಟಿಸ್‌  ಅವಧಿ ಅ.13 ಅಂತ್ಯವಾಗಿದೆ. ಆದರೆ ಹೊಸ ಟೆಂಡರ್‌ ಪ್ರಕ್ರಿಯೆ ಪೂರ್ಣವಾಗದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಎರಡು ವಾರ ಸೇವೆ ಮುಂದುವರಿಸುವಂತೆ ಜಿವಿಕೆ- ಇಎಂಆರ್‌ಐ ಸಂಸ್ಥೆಯನ್ನು ಕೋರಿದ್ದು, ಒಂದು ತಿಂಗಳ ಕಾಲ ಸೇವೆ ಮುಂದುವರಿಕೆಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಸದ್ಯ ಇಎಂಆರ್‌ಐ ಸಂಸ್ಥೆಯೇ ಸೇವೆ ಮುಂದುವರಿಸಿದೆ.

ಸಾರ್ವಜನಿಕರು ತುರ್ತು ಆರೋಗ್ಯ ಸೇವೆ ಪಡೆಯಲು ಅನುಕೂಲವಾಗುವಂತೆ ರಾಜ್ಯ ಸರ್ಕಾರವು “108 ಆರೋಗ್ಯ ಕವಚ’ ಅಡಿ ಉಚಿತ ಆ್ಯಂಬುಲೆನ್ಸ್‌ ಸೇವೆ ಆರಂಭಿಸಿತ್ತು. 2008ರಲ್ಲಿ ಟೆಂಡರ್‌ ಆಹ್ವಾನಿಸದೆ ನೇರವಾಗಿ 10 ವರ್ಷ ನಿರ್ವಹಣೆಗಾಗಿ “ಜಿವಿಕೆ- ಇಎಂಆರ್‌ಐ’ ಸಂಸ್ಥೆಯೊಂದಿಗೆ ಅಂದಿನ ರಾಜ್ಯ ಸರ್ಕಾರ ಒಡಂಬಡಿಕೆ ಮಾಡಿಕೊಂಡಿತ್ತು. ಆದರೆ ಸಂಸ್ಥೆ ಸಮರ್ಪಕವಾಗಿ ಸೇವೆ ನೀಡುತ್ತಿಲ್ಲವೆಂಬ ಆರೋಪ ಆಗಾಗ್ಗೆ ಕೇಳಿಬರುತ್ತಿತ್ತು. ಮುಖ್ಯವಾಗಿ ಒಡಂಬಡಿಕೆಯಂತೆ ಸಿಬ್ಬಂದಿಯನ್ನು ನೇಮಿಸಿಕೊಳ್ಳದಿರುವುದು, ಸಿಬ್ಬಂದಿಯ ಮೇಲೆ ಸಂಸ್ಥೆ ಸರಿಯಾದ ನಿಯಂತ್ರಣವಿಟ್ಟು ಕೊಳ್ಳದಿರುವುದು, ಸಿಬ್ಬಂದಿ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಲು ಆದ್ಯತೆ ನೀಡದಿರುವುದು ಸೇರಿ ಇತರೆ ಲೋಪಗಳ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಗುತ್ತಿಗೆ ಅವಧಿ ಒಂದು ವರ್ಷ ಬಾಕಿ ಇರುವಂತೆಯೇ
ಗುತ್ತಿಗೆ ರದ್ದುಪಡಿಸಿ ಜುಲೈ 12ರಂದು ನೋಟಿಸ್‌ ನೀಡಿತ್ತು.

ಆರೋಗ್ಯ ಇಲಾಖೆಯ ನೋಟಿಸ್‌ಗೆ ಸ್ಪಷ್ಟನೆ ನೀಡಿದ ಜಿವಿಕೆ ಸಂಸ್ಥೆಯು ಬಳಿಕ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯದ ನಿರ್ದೇಶನದಂತೆ ಈ ಸಂಸ್ಥೆ ಹೊಸ ಟೆಂಡರ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದೆ. ಆದರೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಗುತ್ತಿಗೆ ಮಂಜೂರು ಮಾಡುವ ಮುನ್ನ ನ್ಯಾಯಾಲಯದ ಗಮನಕ್ಕೆ ತರುವಂತೆ ಸೂಚನೆ ನೀಡಿದೆ.  

ಅಂತಿಮ ಹಂತದಲ್ಲಿ ಟೆಂಡರ್‌ ಪ್ರಕ್ರಿಯೆ: ಜಿವಿಕೆ- ಇಎಂಆರ್‌ಐ ಸಂಸ್ಥೆ ಸೇರಿ ಬಿವಿಜಿ ಸಂಸ್ಥೆ ಹಾಗೂ ಕ್ವೆಸ್ಟ್‌ ಕಾರ್ಪೋರೇಷನ್‌ ಸಂಸ್ಥೆಗಳು ಟೆಂಡರ್‌ನಲ್ಲಿ ಬಿಡ್‌ ಮಾಡಿದ್ದು, ತೀವ್ರ ಪೈಪೋಟಿ ಏರ್ಪಟ್ಟಿದೆ. ಅದರಂತೆ ತಾಂತ್ರಿಕ ಬಿಡ್‌ ತೆರೆಯಲಾಗಿದ್ದು, ಪರಿಶೀಲನೆ ಕಾರ್ಯ ಬಹುತೇಕ ಪೂರ್ಣ ಗೊಂಡಿದೆ. ಇ-ಆಡಳಿತ ಇಲಾಖೆಯಿಂದ ತಾಂತ್ರಿಕ ಮೌಲ್ಯಮಾಪನ ವರದಿ
ಸಲ್ಲಿಕೆಯಾಗುತ್ತಿದ್ದಂತೆ ಆರ್ಥಿಕ ಬಿಡ್‌ ತೆರೆದು ಪರಿಶೀಲಿಸಿ ಟೆಂಡರ್‌ ಹಂಚಿಕೆ ಮಾಡಲು ಸಿದ್ಧತೆ ನಡೆದಿದೆ.

Advertisement

ಸೇವೆ ವಿಸ್ತರಣೆ ಕೋರಿ ಪತ್ರ: ಗುತ್ತಿಗೆ ರದ್ದುಪಡಿಸಿದ ಆರೋಗ್ಯ ಇಲಾಖೆಯು 3 ತಿಂಗಳ ಅವಧಿಗೆ ನೋಟಿಸ್‌ ನೀಡಿತ್ತು. ಈ ಅವಧಿಯೊಳಗೆ ಹೊಸ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲು ಸಿದ್ಧತೆ ನಡೆಸಿತ್ತು. ಆದರೆ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಈ ನಡುವೆ ನೋಟಿಸ್‌ ಅವಧಿ ಅ.13ಕ್ಕೆ ಪೂರ್ಣಗೊಂಡಿರುವುದರಿಂದ ಕೆಲಕಾಲ ಸೇವೆ ಮುಂದುವರಿಸುವಂತೆ
ಇಲಾಖೆಯು ಸಂಸ್ಥೆಗೆ ಮನವಿ ಮಾಡಿದೆ. ಜತೆಗೆ ಒಂದು ತಿಂಗಳ ಅವಧಿಗೆ ಸೇವೆ ವಿಸ್ತರಣೆಗೆ ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆದಿದೆ. 

ಸರ್ಕಾರಕ್ಕೆ ಪತ್ರ
“108-ಆರೋಗ್ಯ ಕವಚ’ ಉಚಿತ ಆ್ಯಂಬುಲೆನ್ಸ್‌ ನಿರ್ವಹಣೆಗೆ ಹೊಸ ಟೆಂಡರ್‌ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಇ- ಆಡಳಿತ ಇಲಾಖೆಯು ತಾಂತ್ರಿಕ ಮೌಲ್ಯಮಾಪನ ವರದಿ ನೀಡಿದ ಬಳಿಕ ಅರ್ಹ ಸಂಸ್ಥೆಗಳ ಆರ್ಥಿಕ ಬಿಡ್‌ ತೆರೆದು ಪರಿಶೀಲಿಸಿ ಕಡಿಮೆ ಮೊತ್ತ ನಮೂದಿಸಿರುವ ಸಂಸ್ಥೆಯೊಂದಿಗೆ ದರ ಇಳಿಕೆ ಸಂಬಂಧ ಮಾತುಕತೆ ನಡೆಸಲಾಗುವುದು. ಬಳಿಕ ನ್ಯಾಯಾಲಯಕ್ಕೂ ಮಾಹಿತಿ ನೀಡಿ ನಂತರ ನೀಡುವ ಸೂಚನೆಯಂತೆ ಮುಂದುವರಿಯಲಾಗುವುದು. ಹೊಸ ಟೆಂಡರ್‌ ಪ್ರಕ್ರಿಯೆ ಒಂದೆರಡು ವಾರದಲ್ಲಿ ಪೂರ್ಣಗೊಳ್ಳಲಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಒಂದು ತಿಂಗಳ ಕಾಲ ಸೇವೆ ವಿಸ್ತರಣೆಗೆ ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಸರ್ಕಾರ ಒಪ್ಪಿಗೆ ನೀಡುವ ನಿರೀಕ್ಷೆ ಇದೆ. ಸದ್ಯಕ್ಕೆ ಸಂಸ್ಥೆಯೇ ಸೇವೆ ಮುಂದುವರಿಸಿದೆ ಎಂದು ಆರೋಗ್ಯ ಇಲಾಖೆ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

1,538 ಆ್ಯಂಬುಲೆನ್ಸ್‌ ನಿರ್ವಹಣೆ
“108- ಆರೋಗ್ಯ ಕವಚ’ ಸೇವೆಯಡಿ ಸದ್ಯ 711 ಆ್ಯಂಬುಲೆನ್ಸ್‌ಗಳಿದ್ದು, ನಿರ್ವಹಣೆಗೆ ವಾರ್ಷಿಕ ಸುಮಾರು 140 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಈ 711 ಆ್ಯಂಬುಲೆನ್ಸ್‌ಗಳ ಜತೆಗೆ ರಾಜ್ಯಾದ್ಯಂತ ಬಳಕೆಯಾಗು ತ್ತಿರುವ ರಾಜ್ಯ ಸರ್ಕಾರದ 827 ಆ್ಯಂಬುಲೆನ್ಸ್‌ಗಳನ್ನು ಒಟ್ಟುಗೂಡಿಸಿ ನಿರ್ವಹಣೆಯನ್ನು ಒಂದೇ ಸಂಸ್ಥೆಗೆ ವಹಿಸಲು ಸರ್ಕಾರ ನಿರ್ಧರಿಸಿದೆ. 1,538 ಆ್ಯಂಬುಲೆನ್ಸ್‌ಗಳನ್ನು ಐದು ವರ್ಷಗಳ ನಿರ್ವಹಣೆಗಾಗಿ ಟೆಂಡರ್‌ ಪ್ರಕ್ರಿಯೆ ನಡೆದಿದೆ.

ಎಂ.ಕೀರ್ತಿಪ್ರಸಾದ್‌ 

Advertisement

Udayavani is now on Telegram. Click here to join our channel and stay updated with the latest news.

Next