ಶ್ರೀನಗರ: ಜಮ್ಮು-ಕಾಶ್ಮೀರದ ಪ್ರಸಿದ್ಧ ಧಾರ್ಮಿಕ ಸ್ಥಳ ಅಮರನಾಥದಲ್ಲಿ ಏಕಾಏಕಿ ಮೇಘಸ್ಫೋಟ ಸಂಭವಿಸಿದ್ದು, ಗುಡ್ಡದಿಂದ ಪ್ರವಾಹೋಪಾದಿಯಲ್ಲಿ ನೀರು ಹರಿದು ಬಂದಿದೆ. ಈಗಾಗಲೇ ಸುಮಾರು 15,000 ಯಾತ್ರಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:‘ವೆಡ್ಡಿಂಗ್ ಗಿಫ್ಟ್’ ಚಿತ್ರ ವಿಮರ್ಶೆ: ಕೋರ್ಟ್ ನಲ್ಲಿ ಫ್ಯಾಮಿಲಿ ಡ್ರಾಮಾ
ಮೇಘಸ್ಫೋಟದಲ್ಲಿ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಅಧಿಕ ಯಾತ್ರಾರ್ಥಿಗಳು ನಾಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ. ಪ್ರಸಿದ್ಧ ಗುಹಾಂತರ ದೇವಾಲಯದ ಸಮೀಪ ಸಿಲುಕಿಕೊಂಡಿದ್ದ ಯಾತ್ರಾರ್ಥಿಗಳನ್ನು ರಕ್ಷಣಾ ಕಾರ್ಯಾಚರಣೆ ಮೂಲಕ ಸ್ಥಳಾಂತರಿಸಲಾಗಿದೆ.
ಘಟನೆಯಲ್ಲಿ ಗಾಯಗೊಂಡಿದ್ದ 21 ಯಾತ್ರಾರ್ಥಿಗಳನ್ನು ಏರ್ ಲಿಫ್ಟ್ ಮೂಲಕ ಶನಿವಾರ ಬೆಳಗ್ಗೆ ಬಾಲ್ಟಾಲ್ ಗೆ ಕರೆತರಲಾಗಿದೆ. ಯಾವುದೇ ಭೂಕುಸಿತ ಸಂಭವಿಸಿಲ್ಲ ಎಂದು ತಿಳಿಸಿರುವ ಅಧಿಕಾರಿಗಳು, ಮಳೆ ಮುಂದುವರಿದಿರುವುದಾಗಿ ವರದಿ ಹೇಳಿದೆ.
ಭಾರತೀಯ ಸೇನೆ, ಎಸ್ ಡಿಆರ್ ಎಫ್, ಸಿಆರ್ ಪಿಎಫ್ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವುದಾಗಿ ಎನ್ ಡಿಆರ್ ಎಫ್ ಡೈರೆಕ್ಟರ್ ಜನರಲ್ ಅತುಲ್ ಕಾರ್ವಾಲ್ ಎಎನ್ ಐ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.
ಭಾರೀ ಮಳೆಯ ಪರಿಣಾಮ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮೇಘಸ್ಫೋಟದಿಂದ ಸಾವನ್ನಪ್ಪಿರುವ ಯಾತ್ರಾರ್ಥಿಗಳ ಕುಟುಂಬ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ಕೋವಿಂದ್ ಸಂತಾಪ ವ್ಯಕ್ತಪಡಿಸಿದ್ದಾರೆ.