Advertisement

ಬಿರುಗಾಳಿ ಮಳೆಗೆ 15 ಗ್ರಾಮಗಳಿಗೆ ಹಾನಿ

09:35 PM Apr 24, 2019 | Team Udayavani |

ಹುಣಸೂರು: ಭಾರೀ ಬಿರುಗಾಳಿ ಸಹಿತ ಮಳೆಯಿಂದ ತಾಲೂಕಿನಲ್ಲಿ 15ಕ್ಕೂ ಹೆಚ್ಚು ಗ್ರಾಮಗಳು ಹಾನಿಗೊಳಗಾಗಿವೆ. ಹನಗೋಡು ಹಾಗೂ ಗಾವಡಗೆರೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ನೂರು ಎಕರೆಗೂ ಹೆಚ್ಚು ಪ್ರದೇಶದ ಬಾಳೆ ಬೆಳೆ ಸಂಪೂರ್ಣ ನೆಲಕಚ್ಚಿದ್ದರೆ, ತೆಂಗು, ಅಡಕೆ, ತೇಗ, ಸಿಲ್ವರ್‌ ಮರಗಳು ಧರೆಗುರುಳಿದ್ದು, ನೂರಾರು ಮನೆಗಳ ಮೇಲ್ಛಾವಣಿಗಳು ಹಾರಿಹೋಗಿವೆ.

Advertisement

ತೊಂದರೆಗೊಳಗಾಗಿದ್ದ ಜನರು ರಾತ್ರಿಯಡೀ ಕಗ್ಗತ್ತಲಿನಲ್ಲೇ ಅಕ್ಕಪಕ್ಕದವರ ಮನೆಗಳಲ್ಲಿ ಆಶ್ರಯ ಪಡೆದಿದರು. ಸುಮಾರು ಒಂದು ಕೋಟಿ ರೂ.ಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಅರೆಮಲೆನಾಡು ಪ್ರದೇಶವಾದ ಹನಗೋಡು ಹೋಬಳಿಯ ತಟ್ಟೆಕೆರೆಯ ತಾಲೂಕು ಪಂಚಾಯ್ತಿ ಸದಸ್ಯ ಶ್ರೀನಿವಾಸ್‌ ಹಾಗೂ ಸಹೋದರರಿಗೆ ಸೇರಿದ ಹತ್ತು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಫಲಕ್ಕೆ ಬಂದಿದ್ದ ನೇಂದ್ರಬಾಳೆ ಸಂಪೂರ್ಣ ನೆಲ ಕಚ್ಚಿದೆ. ಶಿಕ್ಷಕ ಚಂದ್ರಹಾಸ, ಮಹದೇವಾಚಾರ್‌, ಹನಗೋಡಿನ ಮಂಜು, ಮುದಗನೂರಿನ ವೆಂಕಟೇಶ್‌,

ಗಣೇಶ, ಕಸ್ತೂರಿಗೌಡ, ಸುಭಾಷ್‌, ಕೊಳವಿಗೆಯ ಕುಳ್ಳಮ್ಮ, ಬಿಲ್ಲೇನಹೊಸಹಳ್ಳಿಯ ರಾಮಚಂದ್ರ, ಸಹದೇವ ಸೇರಿದಂತೆ ಹೈರಿಗೆ, ಹೊನ್ನೇನಹಳ್ಳಿ, ಹೆಗ್ಗಂದೂರು, ವಡ್ಡಂಬಾಳು, ಶಿಂಡೇನಹಳ್ಳಿ, ಕಿರಂಗೂರು, ಹಿಂಡಗುಡ್ಲು, ದಾಸನಪುರ, ಚಿಕ್ಕಹೆಚ್ಚಾರು,ದೊಡ್ಡಹೆಜೂjರು, ಕೋಣನಹೊಸಹಳ್ಳಿ, ಹರಳಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಬೆಳೆದಿದ್ದ ಬಾಳೆ ಮತ್ತಿತರ ಬೆಳೆಗಳು ಹಾನಿಯಾಗಿವೆ.

ವ್ಯರ್ಥವಾದ ಬಾಳೆ ಫಸಲು: ಮುದಗನೂರಿನ ವೆಂಕಟೇಶ ಅವರಿಗೆ ಸೇರಿದ ಪಚ್ಚಬಾಳೆ, ಚಂದ್ರಬಾಳೆ, ನೇಂದ್ರಬಾಳೆ ಇನ್ನೊಂದು ತಿಂಗಳಲ್ಲಿ ಕಟಾವಿಗೆ ಬರುತ್ತಿತ್ತು. ಇದೀಗ ಐನೂರಕ್ಕೂ ಹೆಚ್ಚು ಬಾಳೆ ಗಿಡ ಮುರಿದು ಬಿದ್ದು, ಈ ಗೊನೆಗಳಿಗ ಉಪಯೋಗಕ್ಕೆ ಬರದಂತಾಗಿದೆ. ಕಾಫಿ ಗಿಡಗಳ ಮೇಲೆ ಗಿಡ ಬಿದ್ದು ಹಾನಿಯಾಗಿದೆ.

Advertisement

ಇನ್ನು ಹನಗೋಡಿನ ರಮೇಶ್‌, ಸತೀಶ್‌, ನಟರಾಜ್‌, ಮುರುಳಿ, ಸತೀಶ್‌, ಮಹೇಶ್‌ ಅವರಿಗೆ ಸೇರಿದ 11 ತೆಂಗು, 50ಕ್ಕೂ ಹೆಚ್ಚು ಅಡಕೆ ಮರ ಬಿರುಗಾಳಿಗೆ ಸಿಲುಕಿ ಮುರಿದು ಬಿದ್ದಿದ್ದರೆ, ಲಲಿತಮ್ಮ ಹಿರಣ್ಯಶೆಟ್ಟರಿಗೆ ಸೇರಿದ 15 ತೇಗದ ಮರಗಳು ತೋಟದ ಮನೆಮೇಲೆ ಬಿದ್ದು ಹಾನಿಯಾಗಿದೆ. ಅಲ್ಲಲ್ಲಿ ಸಿಲ್ವರ್‌, ಮಾವಿನ ಮರಗಳು ಸಹ ಧರೆಗುರುಳಿವೆ.

ಹಾಡಿಗಳಲ್ಲೂ ಹಾನಿ: ಶೆಟ್ಟಹಳ್ಳಿ ಹಾಡಿ, ಕಪ್ಪನಕಟ್ಟೆ ಹಾಡಿ, ಚಿಕ್ಕಹೆಜೂjರು ಹಾಡಿ, ಕೊಳವಿಗೆ ಹಾಡಿಗಳಲ್ಲಿ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಹನಗೋಡಿನಲ್ಲಿ ಕೋಳಿಅಂಗಡಿ ರವಿ, ಆಶಾಸುಂದರಿ, ಲಕ್ಷ್ಮೀನಟರಾಜ್‌, ನೂರ್‌ಉನ್ನೀಸಾ, ಸಚ್ಚಿನ್‌, ಬಿಲ್ಲೇನಹೊಸಹಳ್ಳಿಯ ಗಣೇಶ್‌, ಶೆಟ್ಟಹಳ್ಳಿಯ ಕಾವ್ಯ, ಹಾಗೂ ಕಾವೇರಿಮುತ್ತ, ನೇಗತ್ತೂರಿನ ಮಹದೇವರ ವಾಸದ ಮನೆ ಸೇರಿದಂತೆ ನೂರಾರು ಮನೆಗಳು ಮಳೆಗಾಳಿಗೆ ಹಾನಿಯಾಗಿವೆ. ಗಾವಡಗೆರೆ ಹೋಬಳಿಯ ಹಿರಿಕ್ಯಾತನಹಳ್ಳಿ, ಹರವೆ, ಮೋದೂರಿನಲ್ಲಿ ಸಾಕಷ್ಟು ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಅಧಿಕಾರಿಗಳ ಭೇಟಿ: ಹಾನಿಗೀಡಾದ ಎಲ್ಲ ಪ್ರದೇಶಗಳಿಗೆ ತಹಶೀಲ್ದಾರ್‌ ಬಸವರಾಜು, ಉಪತಹಶೀಲ್ದಾರ್‌ ಗುರುಸಿದ್ದಯ್ಯ, ಕಂದಾಯ ಅಧಿಕಾರಿ ರಾಜಕುಮಾರ್‌ ಸೇರಿದಂತೆ ಗ್ರಾಮ ಲೆಕ್ಕಾಕಾರಿಗಳು ಭೇಟಿ ನೀಡಿ, ನಷ್ಟದ ಅಂದಾಜನ್ನು ಪರಿಶೀಲಿಸುತ್ತಿದ್ದಾರೆ. ಉಳಿದಂತೆ ಕೃಷಿ ಸಹಾಯಕ ನಿರ್ದೇಶಕ ರಂಗಸ್ವಾಮಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಸಿದ್ದರಾಜು, ಶ್ರವಣಕುಮಾರ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾನಿಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತ ಕುಟುಂಬಕ್ಕೆ ಸಾಂತ್ವನ: ಕಲ್ಲಹಳ್ಳಿಯಲ್ಲಿ ಮೇಲ್ಛಾವಣಿ ಕುಸಿದು ಕೂಲಿ ಕಾರ್ಮಿಕಳಾದ ದೊಡ್ಡತಾಯಮ್ಮರ ಸಾವನ್ನಪ್ಪಿರುವ ವಿಷಯ ತಿಳಿಯುತ್ತಿದ್ದಂತೆ ಉಪ ವಿಭಾಗಾಧಿಕಾರಿ ಚಂದ್ರಶೇಖರಯ್ಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರಲ್ಲದೇ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಧರೆಗುರುಳಿದ ಮರಗಳು, ವಿದ್ಯುತ್‌ ಕಂಬಗಳು: ಹನಗೋಡು-ಕೊಳವಿಗೆ ರಸ್ತೆಯ ಮುದುಗನೂರು ಬಳಿ ದೊಡ್ಡ ಮರವೊಂದು ವಿದ್ಯುತ್‌ ಲೈನ್‌ ಮೇಲೆ ಉರುಳಿ ಬಿದ್ದಿದ್ದು, ಸಂಚಾರ ಬಂದ್‌ ಆಗಿದೆ. ಹನಗೋಡು-ಹುಣಸೂರು ರಸ್ತೆಯ ಹೊಸಕೋಟೆ ಬಳಿಯಿಂದ ಹನಗೋಡು ವರೆಗೆ 50ಕ್ಕೂ ಹೆಚ್ಚು ಮರಗಳು ಹಾಗೂ ಹೊಲಗಳಲ್ಲಿ ನೂರಾರು ಮರಗಳು ನೆಲ ಕಚ್ಚಿವೆ.

ಕಲ್ಲಹಳ್ಳಿ, ಹುಣಸೇಗಾಲ, ಆಡಿಗನಹಳ್ಳಿ, ಹನಗೋಡು, ಕೊಳವಿಗೆ, ಮುದಗನೂರು, ಮೋದೂರು, ಕೆರೆಗಳಮೇಗಲಕೊಪ್ಪಲು ಸೇರಿದಂತೆ ಎರಡು ಕಡೆ ವಿದ್ಯುತ್‌ ಪರಿವರ್ತಕ ಹಾನಿಯಾಗಿದೆ. 70 ಕಂಬಗಳು ಉರುಳಿ ಬಿದ್ದಿದ್ದು, ಸೆಸ್ಕ್ ಎಇಇ ಸಿದ್ದಪ್ಪರ ನೇತೃತ್ವದಲ್ಲಿ ಎಂಜಿನಿಯರ್‌ಗಳು ಎಲ್ಲೆಡೆ ವಿದ್ಯುತ್‌ ಲೈನ್‌ ಸರಿಪಡಿಸುವ ಕೆಲಸವನ್ನು ಭರದಿಂದ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next