Advertisement

ಹಬ್ಬದ ಮರುದಿನ 15 ಟನ್‌ ಹೆಚ್ಚು ಕಸ ಸಂಗ್ರಹ 

10:32 AM Oct 21, 2018 | |

ಮಹಾನಗರ: ಸ್ಮಾರ್ಟ್‌ ಸಿಟಿಯಾಗಿ ರೂಪುಗೊಳ್ಳುತ್ತಿರುವ ನಗರದಲ್ಲಿ ಕಸ ಉತ್ಪಾದನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಿಜಯದಶಮಿ ಹಬ್ಬದ ಮರುದಿನವಾದ ಶನಿವಾರ ನಗರದಲ್ಲಿ ಸರಾಸರಿಗಿಂತ 15 ಟನ್‌ ನಷ್ಟು ಹೆಚ್ಚು ಕಸ ಸಂಗ್ರಹವಾಗಿದ್ದು, ಒಂದು ವಾರದಲ್ಲಿ 2,338 ಟನ್‌ ಕಸ ಸಂಗ್ರಹವಾಗಿದೆ. ಸಾಮಾನ್ಯವಾಗಿ ನಗರದಲ್ಲಿ ದಿನಂಪ್ರತಿ ಸರಾಸರಿ 325ರಿಂದ 330 ಟನ್‌ ಕಸ ಸಂಗ್ರಹವಾಗುತ್ತದೆ. ಆದರೆ ವಿಜಯ ದಶಮಿ ಹಬ್ಬದಂದು ಮನೆಗಳಲ್ಲಿ ಮತ್ತು ರಸ್ತೆ ಬದಿಗಳಲ್ಲಿ ಹೆಚ್ಚಿನ ತ್ಯಾಜ್ಯಗಳು, ಪ್ಲಾಸ್ಟಿಕ್‌ ರಾಶಿಗಳು ಇದ್ದುದರಿಂದ ಒಟ್ಟಾರೆಯಾಗಿ ಶನಿವಾರ ಸುಮಾರು 345 ಟನ್‌ ಕಸ ಸಂಗ್ರಹವಾಗಿದೆ.

Advertisement

ನಗರದಲ್ಲಿ ಹೊಟೇಲ್‌, ಮನೆ ಸಹಿತ ಒಟ್ಟಾರೆ 97,294 ಆಸ್ತಿಗಳಿವೆ. 1,180 ಕಿ.ಮೀ. ರಸ್ತೆಗಳಿವೆ. ಹೆಚ್ಚಿನ ರಸ್ತೆ ಬದಿಯಲ್ಲಿಯೂ ಶನಿವಾರ ಬೆಳಗ್ಗೆ ಕಸದ ರಾಶಿ ಕಂಡುಬಂದಿತ್ತು ಅದರಲ್ಲಿಯೂ ದಸರಾ ಮೆರವಣಿಗೆ ಸಾಗುವ ಲೇಡಿಹಿಲ್‌, ಲಾಲ್‌ಬಾಗ್‌, ಪಿವಿಎಸ್‌, ನವಭಾರತ ಸರ್ಕಲ್‌, ಕೆಎಸ್‌ ರಾವ್‌ ರಸ್ತೆ ಸಹಿತ ವಿವಿಧೆಡೆ ಕಸದ ರಾಶಿ ಗಬ್ಬುನಾರುತ್ತಿತ್ತು. ಶನಿವಾರ ಕಸ ವಿಲೇವಾರಿಗೆ ಪಾಲಿಕೆಯು ಮಾಮೂಲಿ ದಿನಕ್ಕಿಂತ ಹೆಚ್ಚಿನ ಕಾರ್ಮಿಕರನ್ನು ನಿಯೋಜನೆಗೊಳಿಸಿದ್ದು ಬೆಳಗ್ಗೆ 6.30ರಿಂದ ಸಂಜೆಯವರೆಗೆ ಕಸ ವಿಲೇವಾರಿ ನಡೆದಿದೆ.

ಹಸಿ ಕಸ, ಪ್ಲಾಸ್ಟಿಕ್‌ಗಳೇ ಜಾಸ್ತಿ
ಸಂಗ್ರಹವಾದ ಕಸಗಳಲ್ಲಿ ಹೆಚ್ಚಿನವು ಪ್ಲಾಸ್ಟಿಕ್‌ಗಳು. ಅದರಲ್ಲಿಯೂ ಪ್ಲಾಸ್ಟಿಕ್‌ ಬಾಟಲಿಗಳು, ಐಸ್‌ ಕ್ರೀಂ ಕಪ್‌ ಗಳು, ನಿಷೇಧಿತ ಪ್ಲಾಸ್ಟಿಕ್‌ಗಳೇ ಜಾಸ್ತಿ. ಶುಕ್ರವಾರ ಮಂಗಳೂರು ದಸರಾ ಮೆರವಣಿಗೆಯ ದಾರಿ ಯುದ್ದಕ್ಕೂ ಸೋಡಾ ಶರಬತ್‌, ಜ್ಯೂಸ್‌ ಕುಡಿದ ಮಂದಿ ಪ್ಲಾಸ್ಟಿಕ್‌ ಬಾಟಲಿ, ಗ್ಲಾಸ್‌ಗಳನ್ನು ರಸ್ತೆಯಲ್ಲೇ ಎಸೆದಿದ್ದರು. ಅಲ್ಲದೆ, ಹಿಂದೆಲ್ಲಾ ಚರುಮುರಿಯನ್ನು ಕಾಗದದಲ್ಲಿ ಕಟ್ಟಿ ಕೊಡುತ್ತಿದ್ದರು. ಆದರೆ ಇದೀಗ ಪ್ಲಾಸ್ಟಿಕ್‌ ಗ್ಲಾಸ್‌ನಲ್ಲಿ ಕೊಡುತ್ತಿದ್ದು, ಅವುಗಳು ದಾರಿಯುದ್ದಕ್ಕೂ ಬಿದ್ದಿತ್ತು.

2-3 ಟ್ರಿಪ್‌ ಹೆಚ್ಚಳ 
ಕಸ ವಿಲೇವಾರಿ ವಾಹನ ಚಾಲಕರೊಬ್ಬರು ‘ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, ನಗರದಲ್ಲಿ ಸುಮಾರು 83ರಷ್ಟು ಘನತ್ಯಾಜ್ಯ ವಾಹನಗಳು ಕಾರ್ಯನಿರ್ವಹಿಸುತ್ತಿವೆ. 823 ಮಂದಿ ಕಾರ್ಮಿಕರು ದುಡಿಯುತ್ತಿದ್ದಾರೆ. ವಿವಿಧ ವಾರ್ಡ್‌ಗಳಲ್ಲಿ ದಿನಂಪ್ರತಿ 4-5 ಗಾಡಿ ಟ್ರಿಪ್‌ ಗಳಲ್ಲಿ ಕಸ ಸಾಗಾಟವಾಗುತ್ತದೆ. ಹಬ್ಬದ ಕಾರಣದಿಂದಾಗಿ ಕೆಲವು ದಿನಗಳಿಂದ ಕಸ ಸಂಗ್ರಹ ಹೆಚ್ಚಳವಾಗಿದೆ. ಆದ್ದರಿಂದ ಇದೀಗ ಮಾಮೂಲಿಗಿಂತ 2-3 ಟ್ರಿಪ್‌ ಹೆಚ್ಚು ಕಾರ್ಯಾಚರಣೆ ಮಾಡುತ್ತಿದ್ದೇವೆ’ ಎಂದಿದ್ದಾರೆ. 

ಕಸ ವಿಲೇವಾರಿ ಆರಂಭ
ಹಬ್ಬದ ದಿನದ ಕಾರಣ ನಗರದಲ್ಲಿ ಸಾಮಾನ್ಯ ದಿನಕ್ಕಿಂತ 15 ಟನ್‌ ಕಸ ಹೆಚ್ಚು ಸಂಗ್ರಹವಾಗಿದೆ. ಶನಿವಾರ ಬೆಳಗ್ಗಿನಿಂದಲೇ ನಗರದಲ್ಲಿ ಕಸ ವಿಲೇವಾರಿ ಕಾರ್ಯ ಪ್ರಾರಂಭವಾಗಿದೆ.
 - ಭಾಸ್ಕರ್‌ ಕೆ., ಮೇಯರ್‌ 

Advertisement

ಕಸದ ಬುಟ್ಟಿ ಇರಲಿಲ್ಲ
ದಸರಾ ಮೆರವಣಿಗೆ ಸಂದರ್ಭ ನಗರದ ಅಂಗಡಿ, ರಸ್ತೆ ಬದಿಗಳಲ್ಲಿ ಕಸದ ಬುಟ್ಟಿ ಇರಲಿಲ್ಲ. ಇದೇ ಕಾರಣಕ್ಕೆ ಹೆಚ್ಚಿನ ಮಂದಿ ಕಸವನ್ನು ರಸ್ತೆಗೆ ಹಾಕಿದ್ದರು.
ಸೌರಜ್‌,ಮಂಗಳೂರು

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next