Advertisement

ಅಲ್ಪಸಂಖ್ಯಾತರಿಗೆ ಶೇ.15ರಷ್ಟು ಅನುದಾನ ಮೀಸಲು​​​​​​​

07:10 AM Dec 19, 2017 | Team Udayavani |

ಬೆಂಗಳೂರು: ರಾಜ್ಯದ ಬಜೆಟ್‌ನ ಒಟ್ಟು ಯೋಜನಾ ಗಾತ್ರದಲ್ಲಿ ಅಲ್ಪಸಂಖ್ಯಾಕ‌ರಿಗೆ ಶೇ.15ರಷ್ಟು ಅನುದಾನವನ್ನು ಮೀಸಲಿಡುವ ಬಗ್ಗೆ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಪಸಂಖ್ಯಾಕ‌ರ ಕಲ್ಯಾಣಕ್ಕೆ ಸಂಬಂಧಿಸಿದ ಸಚಿವ ಸಂಪುಟದ ಉಪ ಸಮಿತಿಯ ಅಧ್ಯಕ್ಷರೂ ಆಗಿರುವ ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಹೇಳಿದ್ದಾರೆ.

Advertisement

ಕರ್ನಾಟಕ ರಾಜ್ಯ ಅಲ್ಪಸಂಖ್ಯಾಕ‌ರ ಆಯೋಗದಿಂದ ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣ ದಲ್ಲಿ ಏರ್ಪಡಿಸಿದ್ದ “ಅಲ್ಪಸಂಖ್ಯಾಕರ ಹಕ್ಕುಗಳ’ ದಿನಾ ಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಟ್ಟು ಯೋಜನಾ ಗಾತ್ರದಲ್ಲಿ ಶೇ.15ರಷ್ಟು ಅನುದಾನವನ್ನು ಅಲ್ಪಸಂಖ್ಯಾಕ‌ರ ಸಮುದಾಯಗಳಿಗೆ ಮೀಸಲಿಡಬೇಕು. ಇದರಲ್ಲಿ ಶೇ.10ರಷ್ಟು ಮುಸ್ಲಿಮರಿಗೆ, ಶೇ.5ರಷ್ಟು ಉಳಿದ ಅಲ್ಪಸಂಖ್ಯಾಕ‌ ವರ್ಗಗಳಿಗೆ ನಿಗದಿಪಡಿಸಬೇಕು. ಈ ಹಣ ಉಳಿಕೆಯಾದರೆ, ಮುಂದಿನ ಹಣಕಾಸು ವರ್ಷದಲ್ಲಿ ಅದನ್ನು ಬಳಸಿಕೊಳ್ಳುವ ಅವಕಾಶವಿರಬೇಕು ಎಂದು ಅಲ್ಪಸಂಖ್ಯಾಕ‌ರ ಆಯೋಗ ಪ್ರಸ್ತಾವನೆ ಸಲ್ಲಿಸಿದೆ. ಈ ಸಂಬಂಧ ಸಚಿವ ಸಂಪುಟ ಉಪಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಅದೇ ರೀತಿ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ (ಯುಎಪಿಎ) ಅಲ್ಪಸಂಖ್ಯಾಕರ ವಿರುದ್ಧ ದಾಖಲಾಗುವ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ವಿಚಾರಣೆಗೆ ಕೈಗೆತ್ತಿಕೊಳ್ಳುವ ಮೊದಲು ಆ ಪ್ರಕರಣಗಳನ್ನು ಕಾನೂನು ರೀತ್ಯಾ ಪರಾಮರ್ಶಿಸಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಅರೆನ್ಯಾಯಿಕ ಶಾಸನಾತ್ಮಕ ಪ್ರಾಧಿಕಾರ ರಚಿಸಲು ಮುಂದಿನ ಹದಿನೈದು ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ರಾಜ್ಯ ಅಲ್ಪಸಂಖ್ಯಾಕ‌ರ ಆಯೋಗಕ್ಕೆ ಅರೆನ್ಯಾಯಿಕ ಸ್ಥಾನಮಾನ ನೀಡಿದ್ದು, ಅದಕ್ಕೆ ನಿಯಮಗಳನ್ನು ಶೀಘ್ರದಲ್ಲೇ ರೂಪಿಸ ಲಾಗುವುದು ಎಂದು ರಮೇಶ್‌ ಕುಮಾರ್‌ ತಿಳಿಸಿದರು.

ರಾಜ್ಯದ 14 ಜಿಲ್ಲೆಗಳ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಅಲ್ಪಸಂಖ್ಯಾಕ‌ರ ಪ್ರಾತಿನಿಧ್ಯ ಇಲ್ಲ. ಈ ಜಿಲ್ಲೆಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ನಾಮಕರಣ ಮಾಡಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಕಾನೂನು ತಜ್ಞರ ಜೊತೆಗೆ ಚರ್ಚಿಸಲಾಗುವುದು. ಸ್ಥಳೀಯ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಪ್ರಾಧಾನ್ಯತೆ ನೀಡಬೇಕು ಅನ್ನುವುದು 1984ರಿಂದಲೇ ನಡೆದುಕೊಂಡು ಬಂದಿದೆ. ಅದೇ ರೀತಿಯಲ್ಲಿ ಅಲ್ಪಸಂಖ್ಯಾಕರಿಗೂ ಪ್ರಾಧಾನ್ಯತೆ ನೀಡಬಹುದೇ ಎಂಬ ವಿಚಾರ ಸಚಿವ ಸಂಪುಟದ ಉಪಸಮಿತಿಯಲ್ಲಿ ಚರ್ಚೆಯ ಹಂತದಲ್ಲಿದೆ. ವಕ್ಫ್ ಆಸ್ತಿಗಳ ನೋಂದಣಿಗೆ ಸ್ಟಾಂಪು ಶುಲ್ಕದಿಂದ ವಿಯಾಯಿತಿ ನೀಡಬೇಕು. ವಕ್ಫ್ ಆಸ್ತಿಗಳನ್ನು “ಭೂಮಿ’ ಸಾಫ್ಟ್ ವೇರ್‌ ವ್ಯಾಪ್ತಿಗೆ ತರಬೇಕು. ಅಲ್ಪಸಂಖ್ಯಾಕ‌ ಬಾಹುಳ್ಯ ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ತೆರೆಯಬೇಕು ಅನ್ನುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಆಯೋಗ ಇಟ್ಟಿದೆ. ಜ.4ರಂದು ನಡೆಯುವ ಸಚಿವ ಸಂಪುಟದ ಉಪಸಮಿತಿಯಲ್ಲಿ ಚರ್ಚಿಸಿ, ಮುಂದಿನ ಮೂರು ತಿಂಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದಕ್ಕೂ ಮೊದಲು ಮಾತನಾಡಿದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ಮೋಹನದಾಸ್‌, ಸಂವಿಧಾನ ದಲ್ಲಿ ನಂಬಿಕೆ ಇಲ್ಲದ ಕೆಲವರು ಇಂದು ಸಂವಿಧಾನಾತ್ಮಕ ಹುದ್ದೆಗಳನ್ನು ಅಲಂಕರಿಸಿದ್ದು ಗಂಡಾಂತರಕಾರಿ ಬೆಳವಣಿಗೆ ಎಂದರು.

Advertisement

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ಇಂದು ಕೇಂದ್ರ ಸಚಿವರು, ಸಂಸದರೊಬ್ಬರು ಮಾತನಾಡುವ ರೀತಿಯಲ್ಲಿ ಅಲ್ಪಸಂಖ್ಯಾಕರೊಬ್ಬರು ಮಾತನಾಡಿದ್ದರೆ ಭಯೋತ್ಪಾದಕ ಪಟ್ಟ ಕಟ್ಟಲಾಗುತ್ತಿತ್ತು. ಆದರೆ, ಹಿಂಸೆಗೆ ಹಿಂಸೆ ಉತ್ತರವಲ್ಲ. ಅಲ್ಪಸಂಖ್ಯಾಕ‌ರು ಶಾಂತಿ, ಸಹನೆ ಮತ್ತು ಬುದ್ದಿವಂತಿಕೆಯಿಂದ ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಕರೆ ನೀಡಿದರು. ಸಚಿವ ಯು. ಟಿ. ಖಾದರ್‌ ಮಾತನಾಡಿ, ಸಂವಿಧಾನದಲ್ಲಿ ಇಲ್ಲದ ಹಕ್ಕುಗಳನ್ನು ಅಲ್ಪಸಂಖ್ಯಾಕ‌ರು ಕೇಳಬಾರದು. ಎಲ್ಲವನ್ನೂ ದ್ವೇಷಿಸುವುದು ಸರಿಯಲ್ಲ ಎಂದರು. ಹಕ್ಕುಗಳನ್ನು ಕೇಳುವುದರ ಜೊತೆಗೆ ಜವಾಬ್ದಾರಿಗಳನ್ನೂ ನಿರ್ವಹಿಸಬೇಕು ಎಂದರು.

ಸಚಿವರಾದ ರಾಮಲಿಂಗಾರೆಡ್ಡಿ, ತನ್ವೀರ್‌ ಸೇs…, ಎಚ್‌.ಎಂ. ರೇವಣ್ಣ, ಎಂ.ಆರ್‌. ಸೀತಾರಾಂ, ವಿಧಾನಪರಿಷತ್‌ ಸದಸ್ಯರಾದ ಐವಾನ್‌ ಡಿಸೋಜಾ,ರಿಜ್ವಾನ್‌ ಅರ್ಷದ್‌, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಸೀರ್‌ ಅಹ್ಮದ್‌, ದೆಹಲಿ ವಿಶೇಷ ಹೆಚ್ಚುವರಿ ಪ್ರತಿನಿಧಿ ಸಲೀಂ ಅಹ್ಮದ್‌ ಮತ್ತಿತರರು ಇದ್ದರು.

ಕೇಂದ್ರ ಸಚಿವರು, ಸಂಸದರೊಬ್ಬರು ಮಾತನಾಡುವ ರೀತಿಯಲ್ಲಿ ಅಲ್ಪಸಂಖ್ಯಾತರೊಬ್ಬರು ಮಾತನಾಡಿದ್ದರೆ, ಭಯೋತ್ಪಾದಕ ಪಟ್ಟ ಕಟ್ಟಲಾಗುತ್ತಿತ್ತು. ಬಿಜೆಪಿ ಮತ್ತು ಸಂಘಪರಿವಾರದ ಉದ್ದೇಶ ಏನೆಂದು ಸ್ಪಷ್ಟವಾಗಿದೆ. ಆದರೆ, ಹಿಂಸೆಗೆ ಹಿಂಸೆ ಉತ್ತರವಲ್ಲ. ಅಲ್ಪಸಂಖ್ಯಾತರು ಶಾಂತಿ, ಸಹನೆ ಮತ್ತು ಬುದಿಟಛಿವಂತಿಕೆಯಿಂದ ಪರಿಸ್ಥಿತಿ ಎದುರಿಸಬೇಕು.
–  ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next