Advertisement

ಕೇಂದ್ರ ವಿವಿ ಪ್ರವೇಶಾತಿಯಲ್ಲಿ ಶೇ.15ರಷ್ಟು ಕುಸಿತ

12:52 AM Aug 16, 2019 | Team Udayavani |

ಬೆಂಗಳೂರು: ಬೆಂಗಳೂರು ಕೇಂದ್ರ ವಿವಿ ಸ್ನಾತಕೋತ್ತರ ಪದವಿ ಪ್ರವೇಶಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ ಪರಿಚಯಿಸಿದ ವಿಶ್ವವಿದ್ಯಾಲಯ, ಇದೀಗ ನೂತನ ಪ್ರಯೋಗದಿಂದ ಶೇ.15ರಷ್ಟು ಬೇಡಿಕೆ ಕಳೆದುಕೊಂಡಿದೆ.

Advertisement

2ನೇ ಶೈಕ್ಷಣಿಕ ವರ್ಷ ಆರಂಭಿಸಿರುವ ಬೆಂಗಳೂರು ಕೇಂದ್ರ ವಿವಿ, ಪ್ರಸಕ್ತ ಸಾಲಿನಿಂದ ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಸಲು ತೀರ್ಮಾನಿಸಿತ್ತು. ಹೀಗಾಗಿ ವಿವಿಯಲ್ಲಿರುವ 18 ವಿಭಾಗದ 19 ಕೋರ್ಸ್‌ಗಳಿಗೆ 7 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ನಿರೀಕ್ಷಿಸಿತ್ತು.

ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಅಧಿಸೂಚನೆ ಹೊರಡಿಸಿದ ವಿವಿ, ಕೇವಲ ಆರು ಸಾವಿರ ಅರ್ಜಿ ಪಡೆದು ಆರಂಭಿಕ ಹಿನ್ನಡೆ ಅನುಭವಿಸಿತ್ತು. ನಂತರದ ಪ್ರವೇಶಾತಿ ಪರೀಕ್ಷೆಯಲ್ಲಿ ಒಟ್ಟು ಅರ್ಜಿದಾರರ ಪೈಕಿ ಕೇವಲ 4,600 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದು, ಇನ್ನಿತರರು ಸಿಇಟಿ ವ್ಯವಸ್ಥೆಯಿಂದ ದೂರ ಸರಿದಿದ್ದಾರೆ.

ವಾಣಿಜ್ಯ-ವಿಜ್ಞಾನ ಕೋರ್ಸ್‌ಗೆ ಬೇಡಿಕೆ: ಪ್ರವೇಶ ಪರೀಕ್ಷೆ ನಡುವೆಯೂ ಬೆಂಗಳೂರು ಕೇಂದ್ರ ವಿವಿಯಲ್ಲಿ ವಿಜ್ಞಾನ-ವಾಣಿಜ್ಯ ವಿಭಾಗದ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ವಿವಿ ಮತ್ತು ವಿಶ್ವವಿದ್ಯಾಲಯ ಸ್ವಾಯತ್ತತೆ ಕಾಲೇಜುಗಳಲ್ಲಿ ವಾಣಿಜ್ಯ ವಿಭಾಗದ ಎಂಕಾಂ, ಎಂಬಿಎ, ಎಂಎಫ್ಎ, ಎಂಟಿಎ ಕೋರ್ಸ್‌ಗಳಿಗೆ 1550 ಸೀಟುಗಳಿದ್ದು, 2053 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದಾರೆ.

ವಿಜ್ಞಾನ ವಿಭಾಗದ ಭೌತಶಾಸ್ತ್ರ, ರಾಸಾಯನಿಕ ಶಾಸ್ತ್ರ, ಬಯೋಮಿಸ್ಟ್ರಿ, ಪ್ಲಾಂಟ್‌ ಸೈನ್ಸ್‌, ಅನಿಮಲ್‌ ಸೈನ್ಸ್‌ , ಬಯೋ ಟೆಕ್ನಾಲಜಿ, ಗಣಿತ, ಮೈಕ್ರೋ ಬಯೋಲಜಿ, ಸೈಕಾಲಜಿ, ಸೈಕೋಲಾಜಿಕಲ್‌ ಕೌನ್ಸೆಲಿಂಗ್‌ ಕೋರ್ಸ್‌ಗಳಲ್ಲಿ 693 ಸೀಟುಗಳಿದ್ದು, 2098 ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದಾರೆ. ಈ ಮೂಲಕ ವಿಜ್ಞಾನ ಮತ್ತು ವಾಣಿಜ್ಯ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಿದ್ದಾರೆ.

Advertisement

ಕಲಾ ಕೋರ್ಸ್‌ಗಳಿಗಿಲ್ಲ ಬೇಡಿಕೆ: ಕಳೆದ ಶೈಕ್ಷಣಿಕ ವರ್ಷದಲ್ಲಿ ಕಲಾ ವಿಭಾಗದ ಎಲ್ಲಾ ಸೀಟು ಭರ್ತಿ ಮಾಡಿದ್ದ ಬೆಂಗಳೂರು ಕೇಂದ್ರ ವಿವಿ, ಈ ಬಾರಿ ಕನಿಷ್ಟ ಅರ್ಜಿ ಪಡೆಯದೆ ಕಂಗಾಲಾಗಿದೆ. ಪ್ರವೇಶ ಪರೀಕ್ಷೆ ಪರಿಚಯಿಸಿದ ಕಾರಣ ಶೇ.40 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ಹಾಜರಾಗಿಲ್ಲ. ಗೈರಾಗಿರುವ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಇಲ್ಲದ ವಿವಿಗಳ ಕಡೆ ಮುಖ ಮಾಡಿದ್ದಾರೆ ಎಂದು ಬೆಂಗಳೂರು ಕೇಂದ್ರ ವಿವಿ ಮೂಲಗಳು ತಿಳಿಸಿವೆ.

19 ಕೋರ್ಸ್‌ಗೆ ಕೇವಲ 16 ಸಿಬ್ಬಂದಿ: ಬೆಂಗಳೂರು ವಿವಿ ವಿಭಜನೆ ಬಳಿಕ ಬೆಂಗಳೂರು ಕೇಂದ್ರ ಮತ್ತು ಉತ್ತರ ವಿವಿಗಳಲ್ಲಿ ಕೋರ್ಸ್‌ಗಳಿಗೆ ಅನುಗುಣವಾಗಿ ಬೋಧಕರಿಲ್ಲ. ಬಹುತೇಕ ಎಲ್ಲಾ ಕೋರ್ಸ್‌ಗಳು ಅತಿಥಿ ಉಪನ್ಯಾಸಕರ ನೇತೃತ್ವದಲ್ಲಿ ನಡೆಯುತ್ತಿವೆ. ಇನ್ನು ಬೆಂಗಳೂರು ಕೇಂದ್ರ ವಿವಿಯಲ್ಲಿರುವ 19 ಕೋರ್ಸ್‌ಗೆ ಕುಲಪತಿ, ಕುಲಸಚಿವ, ಮೌಲ್ಯಮಾಪನ ಕುಲ ಸಚಿವ, ಹಣಕಾಸು ಅಧಿಕಾರಿ ಸೇರಿ ಕೇವಲ 16 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತರಗತಿಗಳಿಗೆ ಸುಸಜ್ಜಿತ ಕೊಠಡಿ, ಗ್ರಂಥಾಲಯ, ಶೌಚಾಲಯಗಳಿಲ್ಲದ ಕಾರಣ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ವಿದ್ಯಾರ್ಥಿ ಮುಖಂಡ ಜಿ.ಗೋಪಾಲ್‌ ಮಾಹಿತಿ ನೀಡಿದ್ದಾರೆ.

ಬೆಂಗಳೂರು ಕೇಂದ್ರ ಭಾಗದ ಬೆಂಗಳೂರು ಕೇಂದ್ರ ವಿವಿಯನ್ನು ರಾಜ್ಯದಲ್ಲೇ ಮಾದರಿ ವಿವಿಯನ್ನಾಗಿಸಬೇಕಿದೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಪರೀಕ್ಷೆ ಪರಿಚಯಿಸಲಾಗಿದೆ. ಕಲಾ ವಿಭಾಗಕ್ಕೆ ಹೆಚ್ಚಿನ ಅರ್ಜಿ ಸಲ್ಲಿಕೆಯಾಗಿಲ್ಲ. ವಿವಿಯಲ್ಲಿ ಪ್ರಾಧ್ಯಾಪಕರ ಕೊರತೆಯಿದ್ದು, ಒಂದು ತಿಂಗಳಲ್ಲಿ ತುರ್ತು ಹುದ್ದೆ ನೇಮಕಾತಿಗೆ ಸರ್ಕಾರದ ಅನುಮೋದನೆ ಸಿಗಲಿದೆ.
-ಪ್ರೊ.ಎಸ್‌.ಜಾಫೆಟ್‌, ಕುಲಪತಿ ಬೆಂಗಳೂರು ಕೇಂದ್ರ ವಿವಿ

Advertisement

Udayavani is now on Telegram. Click here to join our channel and stay updated with the latest news.

Next