Advertisement

Ramanagara; 15 ತಿಂಗಳ ವೇತನ ಬಾಕಿ: ಮಲ ಸುರಿದುಕೊಂಡು ಪ್ರತಿಭಟಿಸಿದ ಪೌರಕಾರ್ಮಿಕರು

07:27 PM Aug 22, 2023 | Team Udayavani |

ರಾಮನಗರ: ವರ್ಷ ಕಳೆದರೂ ವೇತನ ನೀಡದಿದ್ದಕ್ಕೆ ತಾಳ್ಮೆ ಕಳೆದುಕೊಂಡ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಪೌರಕಾರ್ಮಿಕರು ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.

Advertisement

ಡಿಸಿಎಂ ಡಿ.ಕೆ. ಶಿವಕುಮಾರ್ ಸ್ವ ಕ್ಷೇತ್ರದಲ್ಲಿ ಬಾಕಿ ವೇತನ ಪಾವತಿಗೆ ಪೌರಕಾರ್ಮಿಕರು ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.

ತಾಲೂಕಿನ ಕಸಬಾ ಹೋಬಳಿಯ ಕಲ್ಲಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದ ರಂಗಯ್ಯ ಮತ್ತು ಸುರೇಶ್ ಅವರಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು 15 ತಿಂಗಳ ವೇತನ ಕೊಡದೆ ಬಾಕಿ ಉಳಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಇಬ್ಬರೂ ಮಂಗಳವಾರ ಕಲ್ಲಹಳ್ಳಿ ಗ್ರಾಮಪಂಚಾಯ್ತಿ ಕಚೇರಿ ಎದುರು ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ವೇತನ ಕೊಡದಿದ್ದರೆ ನಾವು ಜೀವನ ನಡೆಸುವುದು ಹೇಗೆ? ಬಾಕಿ ಇರುವ ವೇತನ ಪಾವತಿ ಮಾಡುವಂತೆ ನಾವು ಹಲವಾರು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಲಿಲ್ಲ. ಈ ಹಿಂದೆ ಇದ್ದ ಅಧಿಕಾರಿಗಳ ಅವಧಿಯಲ್ಲಿ ಹೆಚ್ಚು ವೇತನ ಪಾವತಿ ಬಾಕಿ ಇದೆ. ಬಾಕಿ ಇರುವ ವೇತನವನ್ನು ಪಾವತಿ ಮಾಡುವುದರ ಜೊತೆಗೆ ಪೌರಕಾರ್ಮಿಕರಿಗೆ ಇನ್ನು ಮುಂದೆ ಕನಿಷ್ಠ ವೇತನ ಪಾವತಿ ಮಾಡಬೇಕು. ಜೊತೆಗೆ ಪ್ರತಿ ತಿಂಗಳು ನಮಗೆ ವೇತನ ಪಾವತಿ ಮಾಡಬೇಕು. ಅಲ್ಲಿಯವರೆಗೂ ನಮ್ಮ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಮಾಹಿತಿ ತಿಳಿದು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಪದಾಧಿಕಾರಿಗಳ ಹಾಗೂ ಶ್ರೀರಾಮ ಸೇನೆ ಸಂಘಟನೆ ಪದಾಧಿಕಾರಿಗಳು ಪೌರಕಾರ್ಮಿಕರ ಪ್ರತಿಭಟನೆಯನ್ನು ಬೆಂಬಲಿಸಿ ಪೌರಕಾರ್ಮಿಕರಿಗೆ 15 ತಿಂಗಳಿಂದ ವೇತನ ಬಾಕಿ ಉಳಿಸಿಕೊಂಡಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಡೆ ಸರಿಯಲ್ಲ ಎಂದು ಖಂಡಿಸಿದರು.

Advertisement

ಪೌರಕಾರ್ಮಿಕರು ವೇತನ ಪಾವತಿಗಾಗಿ ಮೈ ಮೇಲೆ ಮಲ ಸುರಿದುಕೊಂಡು ಪ್ರತಿಭಟನೆಗೆ ಇಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಗ್ರಾಮ ಪಂಚಾಯತಿ ಅಧಿಕಾರಿಗಳು ಪೌರಕಾರ್ಮಿಕರಿಗೆ 15 ತಿಂಗಳ ಬಾಕಿ ವೇತನವನ್ನು ಪಾವತಿ ಮಾಡಿದರು. ಕಳೆದ 15 ತಿಂಗಳಿಂದ ಬಾಕಿ ಉಳಿಸಿಕೊಂಡಿದ್ದ 3,20, 800 ರೂ ವೇತನವನ್ನು ಸಂಪೂರ್ಣವಾಗಿ ಪಾವತಿ ಮಾಡಿದರು.

ಪಿಡಿಒ ಶ್ರೀನಿವಾಸ್ ಮಾತನಾಡಿ, ನಮ್ಮ ಅವಧಿಯಲ್ಲಿ ಯಾವುದೇ ವೇತನ ಬಾಕಿ ಉಳಿಸಿಕೊಂಡಿಲ್ಲ. ಎಲ್ಲವನ್ನೂ ಪಾವತಿ ಮಾಡಿದ್ದೇವೆ. ಆದರೆ ಹಿಂದೆ ಇದ್ದ ಅಧಿಕಾರಿಗಳು ಅವಧಿಯಲ್ಲಿ ಬಾಕಿ ಉಳಿಸಿಕೊಂಡಿದ್ದರು. ಅದನ್ನು ಸಂಪೂರ್ಣವಾಗಿ ಪಾವತಿ ಮಾಡಿದ್ದೇವೆ. ಇನ್ನು ಮುಂದೆ ಪ್ರತಿ ತಿಂಗಳು ಅವರಿಗೆ ವೇತನ ಪಾವತಿ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next