ಬೆಂಗಳೂರು: ಸಂತ್ರಸ್ತರ ಪರಿಹಾರ ಯೋಜನೆಯಡಿ ಪರಿಹಾರ ವಿತರಿಸಲು 2022-23ನೇ ಸಾಲಿಗೆ 15 ಕೋಟಿ ರೂ. ಬಿಡುಗಡೆ ಮಾಡಲು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಮನವಿ ಕುರಿತು ನಿರ್ಧಾರ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ಕುರಿತು “ಲೈಂಗಿಕ ದೌರ್ಜನ್ಯಗಳ ವಿರುದ್ಧ ಜನಾಂದೋಲನ’ (ಪಿಎಂಎಸ್‌ಎ) ಮಹಿಳಾ ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.
ಅರ್ಜಿ ವಿಚಾರಣೆಗೆ ಬಂದಾಗ ಅರ್ಜಿದಾರ ಸಂಘಟನೆ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಪರ ವಕೀಲರು, ಸಂತ್ರಸ್ತ ಪರಿಹಾರ ಯೋಜನೆಯಡಿ 2022-23ನೇ ಸಾಲಿಗೆ 15 ಕೋಟಿ ರೂ. ಬಿಡುಗಡೆ ಮಾಡುವಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದಿಂದ 2022ರ ಜ.1ರಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಸರ್ಕಾರ ನಿರ್ಧಾರ ತಿಳಿಸಬೇಕಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಇದನ್ನೂ ಓದಿ:ಅಗ್ರಸ್ಥಾನಕ್ಕೇರಿದ ಜಡೇಜಾ: ವಿರಾಟ್, ಪಂತ್ ಗೂ ಭಡ್ತಿ; ರೋಹಿತ್ ಗೆ ಹಿನ್ನಡೆ
ಅದಕ್ಕೆ, 2022-23ನೇ ಸಾಲಿಗೆ 15 ಕೋಟಿ ರೂ. ಬಿಡುಗಡೆ ಮಾಡುವಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಬರೆದ ಪತ್ರದ ಕುರಿತು ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.
ಸರ್ಕಾರದ ಪರ ವಕೀಲರು, ಸಂತ್ರಸ್ತರ ಪರಿಹಾರ ಯೋಜನೆಯಡಿ 2021-22ನೇ ಸಾಲಿನ ಮೊದಲ ಕಂತಿನ 3.5 ಕೋಟಿ ರೂ.ಗಳನ್ನು 2021ರ ಜೂ.30ರಂದು ಬಿಡುಗಡೆ ಮಾಡಲಾಗಿತ್ತು. 2ನೇ ಕಂತಿನ 4 ಕೋಟಿ ರೂ.ಗಳನ್ನು ಈ ವರ್ಷ ಜ.27ರಂದು ಸರ್ಕಾರದಿಂದ ಬಿಡುಗಡೆ ಮಾಡಲಾಗಿದ್ದು, ಈ ಹಣ ಮಾ.5ರಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಖಾತೆಯಲ್ಲಿ ಜಮೆ ಆಗಿದೆ ಎಂದು ಮಾಹಿತಿ ನೀಡಿದರು.