ಬೆಂಗಳೂರು: ಶನಿವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡಿನ ಬಹುತೇಕ ಎಲ್ಲೆಡೆ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಉತ್ತಮ ಮಳೆಯಾಯಿತು. ಲಿಂಗನಮಕ್ಕಿಯಲ್ಲಿ ರಾಜ್ಯದಲ್ಲಿಯೇ ಅಧಿಕ, 15 ಸೆಂ.ಮೀ.ಮಳೆ ಸುರಿಯಿತು.
ಕರಾವಳಿಯಲ್ಲಿ ಆರೆಂಜ್ ಅಲರ್ಟ್: ಬಂಗಾಳಕೊಲ್ಲಿಯಲ್ಲಿ ನಿಮ್ನ ಒತ್ತಡವೊಂದು ರೂಪುಗೊಳ್ಳುತ್ತಿದ್ದು, ಮುಂದಿನ 24 ತಾಸುಗಳಲ್ಲಿ ತೀವ್ರಗೊಳ್ಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಂಭವವಿದೆ. ಉತ್ತರ ಒಳನಾಡಿನ ಹಲವೆಡೆ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆಯೂ ಮಳೆಯಾಗಲಿದೆ.
ಭಾರತೀಯ ಹವಾಮಾನ ಇಲಾಖೆ ಈ ಸಂಬಂಧ ಆ.5ರಂದು ರಾಜ್ಯ ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಇದೇ ಎಚ್ಚರಿಕೆಯನ್ನು ಇಲಾಖೆಯು ಆ.7ರ ವರೆಗೆ ಕೇರಳ ಕರಾವಳಿಗೂ ವಿಸ್ತರಿಸಿದೆ. ಈ ಅವಧಿಯಲ್ಲಿ ಕರಾವಳಿಯಲ್ಲಿ ಭಾರೀ ಮಳೆಯ ಜತೆಗೆ, ತಾಸಿಗೆ 45ರಿಂದ 55 ಕಿ.ಮೀ.ವೇಗದಲ್ಲಿ ಬಲವಾದ ಗಾಳಿಯೂ ಬೀಸುವ ಸಾಧ್ಯತೆಯಿದೆ. ಮೀನುಗಾರರು ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಾರ್ಮಾಡಿ ಘಾಟಿ ಪರಿಸರದಲ್ಲಿ ಸತತ ಮಳೆ: ಚಿಕ್ಕಮಗಳೂರು, ಮೂಡಿಗೆರೆ, ಚಾರ್ಮಾಡಿ ಸೇರಿ ಸುತ್ತಮುತ್ತ ಎರಡು ದಿನಗಳಿಂದ ಸತತ ಮಳೆ ಸುರಿಯುತ್ತಿರುವ ಪರಿಣಾಮ ಚಾರ್ಮಾಡಿ ಘಾಟಿಯಲ್ಲಿ ಎದುರು ಬದಿಯ ವಾಹನ ಗೋಚರಿಸದಿರುವಷ್ಟು ಮಂಜು ಆವರಿಸುತ್ತಿದೆ. ಅಣ್ಣಪ್ಪ ಬೆಟ್ಟದಿಂದ ಕೆಳಬದಿ ತಿರುವಿನಲ್ಲಿ ಶನಿವಾರ ಸಂಜೆ ಧರ್ಮಸ್ಥಳದಿಂದ ದಾವಣಗೆರೆಗೆ ತೆರಳುವ ಬಸ್ ಚರಂಡಿಗೆ ಉರುಳಿ ಬಿದ್ದು, ಮಹಿಳೆಯೊಬ್ಬರ ಕಾಲಿಗೆ ಗಂಭೀರ ಗಾಯವಾಗಿದೆ.
ಘಾಟಿ ರಸ್ತೆಯಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಮರಗಳು ಧರೆಗುರುಳುತ್ತಿದ್ದು, ಮಣ್ಣು ಕುಸಿತ ಉಂಟಾಗಿದೆ. ಘಾಟಿಯ ಮಲೆಯಮಾರುತ ಅತಿಥಿಗೃಹ ಸಮೀಪದ ತಿರುವಿನಲ್ಲಿ ಮರ ರಸ್ತೆಗೆ ಉರುಳಿದ್ದು, ಅದನ್ನು ತೆರವುಗೊಳಿಸಲಾಗಿದೆ. ಮತ್ತೂಂದೆಡೆ, ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಅಲೆಕಾನ್ ಫಾಲ್ಸ್ ಮತ್ತು ಹೊರಟ್ಟಿಗೆ ಸಾಗುವ ರಸ್ತೆ ಅಂಚಿನಲ್ಲಿ ನಾಲ್ಕು ಬಂಡೆಕಲ್ಲುಗಳು ರಸ್ತೆಗೆ ಉರುಳಿದ್ದರಿಂದ ಶನಿವಾರ ಬೆಳಗ್ಗೆ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ರಸ್ತೆ ಅಂಚಿನಲ್ಲಿರುವ 6, 8ನೇ ತಿರುವಿನ ಮಧ್ಯೆ ಮರ ಉರುಳಿದ್ದರಿಂದ ಮಣ್ಣು ಕುಸಿದು ನೀರು ಸರಾಗವಾಗಿ ಹರಿಯಲು ಸಮಸ್ಯೆಯಾಗಿದೆ.