Advertisement

ಪುತ್ತೂರು-ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಇಕ್ಕೆಲಗಳಲ್ಲಿ 15 ಬಸ್‌ ಪ್ರಯಾಣಿಕರ ತಂಗುದಾಣ

11:05 PM Feb 10, 2021 | Team Udayavani |

ಪುತ್ತೂರು: ರಾಜ್ಯ ಹೆದ್ದಾರಿ ಉಪ್ಪಿನಂಗಡಿ-ಪುತ್ತೂರು ರಸ್ತೆಯ ಎರಡು ಬದಿಗಳಲ್ಲಿ ಸುಸಜ್ಜಿತ 15 ಬಸ್‌ ಪ್ರಯಾಣಿಕ ತಂಗುದಾಣಗಳು ನಿರ್ಮಾಣವಾಗಲಿವೆ.

Advertisement

ಶಾಸಕ ಸಂಜೀವ ಮಠಂದೂರು ಪ್ರಸ್ತಾವನೆ ಸಲ್ಲಿಸಿದ್ದು, ಆರು ತಂಗುದಾಣಗಳ ಕಾಮಗಾರಿಗೆ ಅನುದಾನ ಮಂಜೂರಾಗಿದೆ. ನಿರೀಕ್ಷೆಯಂತೆ ಸಾಗಿದರೆ 2 ವರ್ಷಗಳೊಳಗೆ ಚತುಷ್ಪಥ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲ ತಂಗುದಾಣಗಳು ಎದ್ದು ನಿಲ್ಲಲಿವೆ.

ಚತುಷ್ಪಥ ರಸ್ತೆ
ಕೆಮ್ಮಾಯಿ-ಸೇಡಿಯಾಪು ತನಕ 12 ಕೋ.ರೂ. ವೆಚ್ಚದ ಚತುಷ್ಪಥ ರಸ್ತೆ ನಿರ್ಮಾಣದ ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ನಗರದ ಬೊಳುವಾರು ಬಳಿಯಿಂದ ಪುತ್ತೂರು-ಉಪ್ಪಿನಂಗಡಿ ರಸ್ತೆ ಒಟ್ಟು 10.2 ಕಿ.ಮೀ.ದೂರವಿದೆ. ಹಾರಾಡಿಯಿಂದ ಕೃಷ್ಣನಗರದ ತನಕ ಕಳೆದ ಅವಧಿಯಲ್ಲಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿ ಕಂಡಿತು. ಈ ಅವಧಿಯಲ್ಲಿ ಕೆಮ್ಮಾಯಿ-ಸೇಡಿಯಾಪು ತನಕ 4 ಕಿ.ಮೀ. ರಸ್ತೆಯ ಚತುಷ್ಪಥ ಕಾಮಗಾರಿ ಪ್ರಗತಿಯಲ್ಲಿದೆ.

ಚತುಷ್ಪಥ ರಸ್ತೆ ನಿರ್ಮಾಣಕ್ಕೆ ರಸ್ತೆಯ ಮಧ್ಯ ಭಾಗದಿಂದ ಎರಡೂ ಕಡೆ 7 ಮೀಟರ್‌ ಡಾಮರು ರಸ್ತೆ, 2 ಮೀಟರ್‌ ರಸ್ತೆ ಬದಿ ಹಾಗೂ ಚರಂಡಿ ಸೇರಿದಂತೆ ಒಟ್ಟು 22 ಮೀಟರ್‌ ಅಗಲದ ರಸ್ತೆ ನಿರ್ಮಿಸಲಾಗುತ್ತಿದೆ. ಈ ಭಾಗದಲ್ಲಿ ಹಾದುಹೋಗಿರುವ ವಿದ್ಯುತ್‌ ಲೈನ್‌ ಬದಲಾವಣೆಗೆ ಸುಮಾರು 70 ವಿದ್ಯುತ್‌ ಕಂಬ, 100ಕ್ಕೂ ಅಧಿಕ ಮರಗಳನ್ನು ತೆರವು ಮಾಡಲಾಗಿದೆ. ಈ ಹಿಂದೆ ನಿರ್ಮಿಸಲಾದ ತಂಗುದಾಣ ತೆರವು ಮಾಡಲಾಗಿದೆ.

15 ಸುಸಜ್ಜಿತ ತಂಗುದಾಣ
ಪುತ್ತೂರು ಮತ್ತು ಉಪ್ಪಿನಂಗಡಿಯನ್ನು ಸಂಪರ್ಕಿಸುವ 10.2 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಯನ್ನು ರಾಜ್ಯ ಹೆದ್ದಾರಿ-118 ಕ್ಕೆ ಸೇರ್ಪಡೆಗೊಳಿಸಲಾಗಿದೆ. ಗುರುವಾಯ ನಕೆರೆ-ಉಪ್ಪಿನಂಗಡಿ ಸಂಪರ್ಕಿಸುವ 26 ಕಿ.ಮೀ. ರಸ್ತೆ ಈಗಾಗಲೇ ರಾಜ್ಯ ಹೆದ್ದಾರಿ ಆಗಿದ್ದು, ಇದೇ ಹೆದ್ದಾರಿಯನ್ನು ಪುತ್ತೂರು ತನಕ ವಿಸ್ತರಿಸಲಾಗಿದೆ. ಈ ಮೂಲಕ 36 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ಆಗಿ ಪರಿವರ್ತನೆಗೊಂಡಿದೆ. ಹೊಸ ರಾಜ್ಯ ಹೆದ್ದಾರಿಯು ಜಿಲ್ಲೆಯ ಪ್ರಮುಖ ರಸ್ತೆಯಾಗಿದ್ದು, 3 ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುತ್ತದೆ.

Advertisement

ಪ್ರಸ್ತಾವನೆ ಸಲ್ಲಿಕೆ
ಬೋಳುವಾರು-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಸುಸಜ್ಜಿತ ಪ್ರಯಾಣಿಕರ ತಂಗುದಾಣ ನಿರ್ಮಿಸಲು ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಟ್ಟು 15 ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಪ್ರಯಾಣಿಕರಿಗೆ ಸಂಚಾರದ ಸಂದರ್ಭ ಅನುಕೂಲವಾಗುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
-ಸಂಜೀವ ಮಠಂದೂರು, ಶಾಸಕರು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next