Advertisement

ನೆಡುತೋಪು, ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ 15.38 ಲಕ್ಷ ಗಿಡ ಸಿದ್ಧ

10:31 PM May 22, 2020 | Sriram |

ಉಡುಪಿ: ಮಳೆ ಬರುತ್ತಿದ್ದಂತೆ ಕೃಷಿ ಚಟುವಟಿಕೆಗೆ ಜೀವ ಬಂದಿದೆ. ಮತ್ತೂಂದೆಡೆ ಅರಣ್ಯ ಇಲಾಖೆ ಸಸಿಗಳನ್ನು ನೆಡುವ ಮೂಲಕ ಹಸುರು ಹೆಚ್ಚಿಸಲು ಮುಂದಾಗಿದೆ. ಪ್ರಸಕ್ತ ಸಾಲಿನಲ್ಲಿ ಸರಕಾರಿ ಮತ್ತು ಖಾಸಗಿ ಭೂಮಿಗಳಲ್ಲಿ ಒಟ್ಟು 15.38 ಲಕ್ಷ ಗಿಡಗಳನ್ನು ನೆಡುವ ಗುರಿಯನ್ನು ಕುಂದಾಪುರ ಅರಣ್ಯ ವಿಭಾಗ ಹೊಂದಿದೆ.

Advertisement

ಸಸಿಗಳನ್ನು ಬೆಳೆಸಲು ಮಳೆಗಾಲ ಉತ್ತಮ ಸಮಯವಾಗಿದ್ದು, ಜೂನ್‌ನಿಂದ ಆಗಸ್ಟ್‌ ತಿಂಗಳ ಅಂತ್ಯದವರೆಗೆ ನೆಡಲಾಗುತ್ತದೆ. ಪ್ರತಿವರ್ಷ ಲಕ್ಷಗಟ್ಟಲೆ ಸಸಿಗಳನ್ನು ಈ ಅವಧಿಯಲ್ಲಿ ನೆಡಲಾಗುತ್ತದೆ. ಕುಂದಾಪುರ ವಿಭಾಗದಲ್ಲಿ 2020-21ನೇ ಸಾಲಿನಲ್ಲಿ ನೆಡುತೋಪುಗಳಲ್ಲಿ ನೆಡಲು 12,07,349 ಹಾಗೂ ಸಾರ್ವಜನಿಕ ವಿತರಣೆ ಮತ್ತು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ವಿತರಿಸಲು 3,29,850 ಸಸಿಗಳನ್ನು ಬೆಳೆಸಲಾಗಿದೆ.

ರಿಯಾಯಿತಿ ದರದಲ್ಲಿ ಮಾರಾಟ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಕೃಷಿ ಮತ್ತು ಖಾಸಗಿ ಜಮೀನಿನಲ್ಲಿ ನೆಡಲು ಸಸಿಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಈ ಬಾರಿ 3,29, 850 ಸಸಿಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಸಸಿಗಳನ್ನು ಗಾತ್ರದ ಅನುಸಾರ 3-5 ರೂ. ವರೆಗೆ ಮಾರಾಟ ಮಾಡಲಾಗುತ್ತದೆ. 5×8 ಗಾತ್ರದ ಸಸಿಗೆ 1 ರೂ., 8×12 ಗಾತ್ರದ ಸಸಿಗೆ 3 ರೂ. ನಿಗದಿಪಡಿಸಲಾಗಿದೆ.

ಕೃಷಿಕರಿಗೆ ಗಿಡ ಬೆಳೆಸಿದರೆ ಪ್ರೋತ್ಸಾಹಧನ
ಕೃಷಿ ಅರಣ್ಯ ಯೋಜನೆಯಡಿ ರೈತರನ್ನು ಪ್ರೇರೆಪಿಸುವ ಸಲುವಾಗಿ ಪ್ರೋತ್ಸಾಹಗಳನ್ನು ನೀಡಲಾಗುತ್ತಿದೆ. ಸಸಿ ನೆಟ್ಟ ರೈತರಿಗೆ ವರ್ಷದ ನಂತರದಲ್ಲಿ ಸಸಿ ಬದುಕುಳಿದಲ್ಲಿ ಪ್ರತಿ ಸಸಿಗೆ ಮೊದಲ ವರ್ಷದಲ್ಲಿ 40 ರೂ., 2ನೇ ವರ್ಷದಲ್ಲಿ 30 ರೂ, 3ನೇ ವರ್ಷದಲ್ಲಿ 30 ರೂ. ಸಹಾಯಧನ ನೀಡಲಾಗುತ್ತದೆ.ಲಭ್ಯವಿರುವ ಭೂಮಿಗೆ ಸಂಬಂದಿಸಿ ಕೃಷಿಕರು ಪಹಣಿ ಪತ್ರ ಹಾಗೂ ಇತರೆ ದಾಖಲೆಗಳನ್ನು ಹಾಜರು ಪಡಿಸಬೇಕು.

8 ಸಸ್ಯ ಕ್ಷೇತ್ರಗಳಿವೆ
ಕುಂದಾಪುರ ವಿಭಾಗದಲ್ಲಿ 8 ನರ್ಸರಿಗಳಿವೆ. ಬೈಂದೂರಿನ ಸರ್ಪಮನೆ ಸಸ್ಯಕ್ಷೇತ್ರ, ಕುಂದಾಪುರ ಮಾವಿನಗುಳಿ, ಶಂಕರನಾರಾಯಣದ ಮಟ್ಕಲ್‌ಗ‌ುಡ್ಡೆ, ಉಡುಪಿಯ ಬೈಕಾಡಿ, ಹೆಬ್ರಿಯ ಮಡಾಮಕ್ಕಿ, ಕಾರ್ಕಳದ ಶಿರ್ಲಾಲು, ಮೂಡಬಿದಿರೆಯ ಕುತ್ಲೂರು, ವೇಣೂರಿನ ಆಳದಂಗಡಿ ಸಸ್ಯಕ್ಷೇತ್ರಗಳಲ್ಲಿ ಸಸಿಗಳನ್ನು ಬೆಳೆಸಿಡಲಾಗಿದೆ.
ಯಾವೆಲ್ಲ ಜಾತಿಯ ಸಸಿಗಳಿವೆ?

Advertisement

ಬಹುಮುಖ್ಯವಾಗಿ ನೇರಳೆ, ಬೆತ್ತ, ಸಾಗುವಾನಿ, ರಕ್ತಚಂದನ, ಮಹಾಗನಿ, ದಾಲಿcನ್ನಿ, ಹಲಸು, ಬಾದಾಮಿ, ಕಿರಾಲು ಭೋಗಿ, ರಾಂಪತ್ರೆ, ಹೆಬ್ಬೇವು, ಅಂಟುವಾಳ, ಬೇಂಗ, ಹೊಂಗೆ, ನಾಗಲಿಂಗ ಪುಷ್ಪ, ಹೊಳೆ ದಾಸವಾಳ, ಕಕ್ಕೆ, ಬೀಟೆ, ಮಾವು, ಅಶೋಕ, ಬಿಲ್ವಪತ್ರೆ, ನೆಲ್ಲಿ, ಪುನರ್‌ಪುಳಿ, ಮುತ್ತುಗ, ಶ್ರೀಗಂಧ, ಸಂಪಿಗೆ, ಶಿವಾನಿ, ಬೊಲ್ದಾರ, ಮುರಿಯ, ಸಳ್ಳೆ, ರೆಂಜ ಜಾತಿಯ ವಿವಿಧ ಸಸ್ಯಗಳು ಸಿದ್ಧಗೊಂಡಿವೆ.

ಪ್ರತಿ ವರ್ಷದಂತೆ ಈ ಬಾರಿಯೂ ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳ ಸಹಯೋಗದಲ್ಲಿ ವನಮಹೋತ್ಸವ ಹಮ್ಮಿಕೊಳ್ಳಲು ಅರಣ್ಯ ಇಲಾಖೆ ಉದ್ದೇಶಿಸಿದೆ. ಬಿತ್ತನೆ ಬೀಜ ಜತೆಗೆ ಮನೆಗೊಂದು ಮರವಲ್ಲದೆ ಮಗುವಿಗೊಂದು ಮರ, ಶಾಲೆಗೊಂದು ವನ, ಹಸುರು ಕರ್ನಾಟಕ ಯೋಜನೆಯಡಿ ಸರಕಾರಿ ಸ್ಥಳಗಳಲ್ಲಿ ಸಸಿ ನೆಡಲು ಅರಣ್ಯ ಇಲಾಖೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮತ್ತಷ್ಟೂ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ರೂಪಿಸುವುದು ಇಲಾಖೆ ಪಟ್ಟಿಯಲ್ಲಿದೆ.

ಜಿಲ್ಲೆಯ ವಿವಿಧ ತಾಲೂಕುಗಳ ವ್ಯಾಪ್ತಿಯ ಅರಣ್ಯ ಇಲಾಖೆಯ ನರ್ಸರಿಗಳಲ್ಲಿ 7.97 ಲಕ್ಷಕ್ಕೂ ಅಧಿಕ ಸಸಿಗಳನ್ನು 2-3 ತಿಂಗಳಲ್ಲಿನೂರಾರು ಕಾರ್ಮಿಕರು, ಸಿಬಂದಿ ಬೆಳೆಸಿದ್ದಾರೆ. ಅದರಲ್ಲಿ3,96,500 ಸಸಿಗಳನ್ನು ರೈತರಿಗೆ, ಸಾರ್ವಜನಿಕರಿಗೆ, ಸಂಘ- ಸಂಸ್ಥೆಗಳಿಗೆ ವಿತರಿಸಿ ಅರಣ್ಯ ಪ್ರದೇಶವನ್ನು ವಿಸ್ತರಿಸುವ ಉದ್ದೇಶವಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಸಿಬಂದಿ.

ಮಳೆಗಾಲ ಬೆಸ್ಟ್‌
ಸಸಿಗಳನ್ನು ಗಾತ್ರದ ಅನುಸಾರ 3- 5 ರೂ. ವರೆಗೆ ಮಾರಾಟ ಮಾಡಲಾಗುತ್ತದೆ. ಸಾರ್ವಜನಿಕರೂ ಕೂಡ ತಮ್ಮ ಮನೆ ಸುತ್ತ ನೆಡಲು ಅರಣ್ಯ ಇಲಾಖೆಯ ನರ್ಸರಿ ಪ್ಲಾಂಟ್ನಿಂದ ಸಸಿಗಳನ್ನು ಪಡೆಯಬಹುದು ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಹಸುರೀಕರಣ ಯೋಜನೆ
ಅಳ್ನಾವರ, ಹುಬ್ಬಳ್ಳಿ, ಧಾರವಾಡದ ವಿವಿಧ ಲೇಔಟYಳಲ್ಲಿ ಹಾಗೂ ಪ್ರಮುಖ ರಸ್ತೆಯ ಬದಿಯಲ್ಲಿಸಸಿಗಳನ್ನು ನೆಡುವುದರ ಮೂಲಕ ನಗರ ಹಸುರೀಕರಣ ಯೋಜನೆ ಹಮ್ಮಿಕೊಳ್ಳಲಾಗಿದೆ. ಅಲ್ಲದೇ ನಗರದ ಪ್ರದೇಶದ ಸುತ್ತಲಿನ ಗುಡ್ಡ, ರಸ್ತೆ ಹಾಗೂ ಖಾಲಿ ಇರುವ ಸರಕಾರಿ ಸ್ಥಳಗಳಲ್ಲೂ ಸಸಿಗಳನ್ನು ನೆಡಲಾಗುವುದು.

ಹೆಚ್ಚಿನ ಮಾಹಿತಿಗೆ
– ಉಪ ಅರಣ್ಯ ಸಂರಕ್ಷಣಾಧಿಕಾರಿ ಕುಂದಾಪುರ ವಿಭಾಗ-08254-230349.
– ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೂಡಬಿದಿರೆ-08258-238182.
– ವಲಯ ಅರಣ್ಯಾಧಿಕಾರಿ ಬೈಂದೂರು-08254-251049.
– ವಲಯ ಅರಣ್ಯಾಧಿಕಾರಿ ಕುಂದಾಪುರ-08254-230349.
– ವಲಯ ಅರಣ್ಯಾಧಿಕಾರಿ ಶಂಕರನಾರಾಯಣ-08259-280248.
– ವಲಯ ಅರಣ್ಯಾಧಿಕಾರಿ ಉಡುಪಿ-0820-2523081.
– ವಲಯ ಅರಣ್ಯಾಧಿಕಾರಿ ಹೆಬ್ರಿ-08253-251118.
– ವಲಯ ಅರಣ್ಯಾಧಿಕಾರಿ ಕಾರ್ಕಳ-08258-230671.
– ವಲಯ ಅರಣ್ಯಾಧಿಕಾರಿ ಮೂಡಬಿದಿರೆ-08258-237585.
– ವಲಯ ಅರಣ್ಯಾಧಿಕಾರಿ ಹೆಬ್ರಿ ವೇಣೂರು-08256-286207.

Advertisement

Udayavani is now on Telegram. Click here to join our channel and stay updated with the latest news.

Next