Advertisement

147 Years Histroy:ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ಮೊದಲು ಆರಂಭವಾಗಿದ್ದು ಆಲದ ಮರದ ಕೆಳಗೆ!

03:58 PM Jun 30, 2023 | ನಾಗೇಂದ್ರ ತ್ರಾಸಿ |

ಬಿಎಸ್‌ ಇ ಲಿಮಿಟೆಡ್‌ (ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್) ಏಷ್ಯಾದಲ್ಲಿಯೇ ಹಳೆಯ ಸ್ಟಾಕ್‌ ಎಕ್ಸ್‌ ಚೇಂಜ್ ಗಳಲ್ಲಿ ಒಂದಾಗಿದೆ. ಇಂದು ವಾಣಿಜ್ಯ ನಗರಿ ಮುಂಬೈನ ದಲಾಲ್‌ ಸ್ಟ್ರೀಟ್‌ ನಲ್ಲಿರುವ ಬೃಹತ್‌ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್ ಸ್ಥಾಪನೆಯಾಗಿ ಬರೋಬ್ಬರಿ 147 ವರ್ಷಗಳಾಗಿವೆ. ಜಗತ್ತಿನ ಅತೀ ದೊಡ್ಡ ಷೇರುಮಾರುಕಟ್ಟೆಯಲ್ಲಿ ಒಂದಾದ ಬಾಂಬೆ ಷೇರುಮಾರುಕಟ್ಟೆ ಸ್ಥಾಪನೆಯಾಗಿ 150 ವರ್ಷಗಳತ್ತ ದಾಪುಗಾಲಿಟ್ಟಿದ್ದು, ಇನ್ನು ಕೇವಲ ಮೂರು ವರ್ಷಗಳಲ್ಲಿ ಒಂದೂವರೆ ಶತಮಾನ ಪೂರೈಸಲಿರುವ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್ ನ ಯಶೋಗಾಥೆ ತುಂಬಾ ರೋಚಕವಾಗಿದೆ ಎಂಬುದರಲ್ಲಿ ಅತಿಶಯೋಕ್ತಿಯೇನಿಲ್ಲ….

Advertisement

ಮೊದಲು ಷೇರು ವಹಿವಾಟು ಆರಂಭವಾಗಿದ್ದೇ ಆಲದ ಮರದ ಕೆಳಗೆ …!

1840ರಲ್ಲಿ ಷೇರು ದಲ್ಲಾಳಿಗಳು ಪ್ರಪ್ರಥಮವಾಗಿ ಬಾಂಬೆ ಟೌನ್‌ ಹಾಲ್‌ ಮುಂಭಾಗದ ಆಲದ ಮರದ ಕೆಳಗೆ ಷೇರು ವಹಿವಾಟು ಆರಂಭಿಸಿದ್ದರು. ನಂತರ 1875ರಲ್ಲಿ 25 ಮಂದಿ ಷೇರು ದಲ್ಲಾಳಿಗಳು ತಲಾ ಒಂದು ರೂಪಾಯಿ ಸಂಗ್ರಹಿಸಿ ಅಸೋಸಿಯೇಶನ್‌ ಹುಟ್ಟುಹಾಕಿ ಇದಕ್ಕೆ “ ದ ನೇಟಿವ್‌ ಷೇರ್‌ & ಬ್ರೋಕರ್ಸ್‌ ಅಸೋಸಿಯೇಶನ್”‌ ಎಂದು ಹೆಸರಿಟ್ಟಿದ್ದರು.

ದ ನೇಟಿವ್‌ ಷೇರ್‌ & ಬ್ರೋಕರ್ಸ್‌ ಅಸೋಸಿಯೇಶನ್”‌ ಆರಂಭಿಸುವಲ್ಲಿ ಆ ಕಾಲದ ಶ್ರೀಮಂತ ಹತ್ತಿ ವ್ಯಾಪಾರಿ ಪ್ರೇಮ್‌ ಚಂದ್‌ ರಾಯ್‌ ಚಂದ್‌ ಜೈನ್‌ ಷೇರು ದಲ್ಲಾಳಿಗಳನ್ನು ಒಗ್ಗೂಡಿಸಿ ಷೇರು ವಹಿವಾಟು ಆರಂಭಿಸಿದ ಪ್ರಮುಖರಾಗಿದ್ದಾರೆ. ಆಲದ ಮರದ ಕೆಳಗೆ ವಹಿವಾಟು ನಡೆಸುತ್ತಿದ್ದ ಷೇರುಪೇಟೆ ತದನಂತರ ದಲಾಲ್‌ ಸ್ಟ್ರೀಟ್‌ ನ ಹಾಲ್‌ ನಲ್ಲಿ ಟ್ರೇಡಿಂಗ್‌ ಅನ್ನು ಆರಂಭಿಸಿತ್ತು. ಆದರೆ ಆ ಕಾಲದಲ್ಲಿ ತಿಂಗಳ ಬಾಡಿಗೆ ಪಾವತಿಸಲು ಅಸಾಧ್ಯವಾಗಿಬಿಟ್ಟಿತ್ತು. ಆ ಸಂದರ್ಭದಲ್ಲಿ ಆಪದ್ಭಾಂಧವರಾಗಿದ್ದು, ಜವಳಿ ಗಿರಣಿ ಮಾಲೀಕ ದಿನ್ಶಾ ಮಾಣಿಕ್ಯಜೀ ಪೇಟಿಟ್…‌

Advertisement

ದಿನ್ಶಾ ಮಾಣಿಕ್ಯಜೀ ಅವರು ತಮ್ಮ ವಿಕ್ಟೋರಿಯಾ ಮ್ಯಾನ್ಯುಫ್ಯಾಕ್ಚರಿಂಗ್‌ ಕಂ ಲಿಮಿಟೆಡ್‌ ಹೆಸರಿನಲ್ಲಿ 25 ಷೇರುಗಳನ್ನು ಖರೀದಿಸಿದ್ದರು. ಆ ನಂತರ ಪ್ರತಿ ಷೇರುಗಳನ್ನು 690 ರೂಪಾಯಿಯಂತೆ ಮಾರಾಟ ಮಾಡಲಾಗಿತ್ತು. ಇದರಿಂದ ಒಟ್ಟು 17, 250 ರೂಪಾಯಿ ಹಣ ಸಂಗ್ರಹವಾಗಿತ್ತು. ಇದರಲ್ಲಿ ಮಾಣಿಕ್ಯಜೀ ಅವರು ಮುಂಗಡವಾಗಿ ನೀಡಿದ್ದ (ಬಾಡಿಗೆ ಪಾವತಿ) 2,393 ರೂ. ಹಣವನ್ನು ಮರುಪಾವತಿಸಲಾಗಿತ್ತು. ಬಾಕಿ ಉಳಿದ 14, 857 ರೂಪಾಯಿ ಮೊತ್ತವನ್ನು ಮೂಲ ಬಂಡವಾಳವನ್ನಾಗಿಸಿ “ದ ನೇಟಿವ್‌ ಶೇರ್‌ & ಸ್ಟಾಕ್‌ ಬ್ರೋಕರ್ಸ್‌ ಅಸೋಸಿಯೇಶನ್”‌ ವಹಿವಾಟು ಆರಂಭಿಸಿತ್ತು.

ಬಿಎಸ್‌ ಇ ಸ್ವಂತ ಕಟ್ಟಡಕ್ಕೆ ಸ್ಥಳಾಂತರ:

1889ರಲ್ಲಿ ಷೇರು ವಹಿವಾಟು ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಅದಕ್ಕೆ ಪೇಟಿಟ್‌ ಎಂದು ಹೆಸರಿಡಲಾಗಿತ್ತು. ಹೀಗೆ ಷೇರು ವಹಿವಾಟು ಹಲವು ವರ್ಷಗಳ ಕಾಲ ಏರಿಳಿತದೊಂದಿಗೆ ನಡೆಯುತ್ತಿತ್ತು. ಕೊನೆಗೆ 1990ರಲ್ಲಿ ಬಿಎಸ್‌ ಇ ಮಾರುಕಟ್ಟೆ ವಹಿವಾಟಿನಲ್ಲಿ ಪುಟಿದೆದ್ದಿತ್ತು.

ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ 1997ರಲ್ಲಿ ಎಲೆಕ್ಟ್ರಾನಿಕ್‌ ವ್ಯವಸ್ಥೆಯ ವಹಿವಾಟಿಗೆ ಬದಲಾಯಿತು. ಇಂದು ಎಲೆಕ್ಟ್ರಾನಿಕ್‌ ಟ್ರೇಡಿಂಗ್‌ ವ್ಯವಸ್ಥೆ ಹಣಕಾಸು ಉದ್ಯಮದಲ್ಲಿ ಪ್ರಾಬಲ್ಯ ಸಾಧಿಸಿದ್ದು, ಸರಳ ಹಾಗೂ ತ್ವರಿತ ವಹಿವಾಟಿಗೆ ಅನುಕೂಲಕರವಾಗಿ ಪರಿಣಮಿಸಿದೆ. ಬಿಎಸ್‌ ಇ ಪಟ್ಟಿಗಳಲ್ಲಿ ಷೇರುಗಳು, ಸ್ಟಾಕ್‌ ಆಯ್ಕೆಗಳು, ಸೂಚ್ಯಂಕ ಭವಿಷ್ಯಗಳು, ಸೂಚ್ಯಂಕ ಆಯ್ಕೆಗಳು ಸೇರಿವೆ.

ಇಂದು ಬಾಂಬೆ ಷೇರುಪೇಟೆ ಕೇವಲ ಸೆಕೆಂಡುಗಳಲ್ಲಿ 50 ಸಾವಿರದಷ್ಟು ಷೇರು ಖರೀದಿ/ಮಾರಾಟದ ಬೇಡಿಕೆಯ ವಹಿವಾಟಿನ ಮಾಹಿತಿ ಪ್ರಕ್ರಿಯೆಯನ್ನು ನಡೆಸುವ ಸಾಮರ್ಥ್ಯ ಹೊಂದಿದೆ.

ಮುಂಬೈ ಈಗ ಭಾರತದ ಪ್ರಮುಖ ಹಣಕಾಸು ಕೇಂದ್ರವಾಗಿದೆ. ಇಲ್ಲಿನ ದಲಾಲ್‌ ಸ್ಟ್ರೀಟ್‌ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್‌ ಗಳು, ಹೂಡಿಕೆ ಸಂಸ್ಥೆ ಹಾಗೂ ಹಣಕಾಸು ಸೇವಾ ಕಂಪನಿಗಳಿಗೆ ನೆಲೆಯಾಗಿದೆ. ಅಮೆರಿಕದ ವಾಲ್‌ ಸ್ಟ್ರೀಟ್‌ ನಂತೆ ಮುಂಬೈನ ದಲಾಲ್‌ ಸ್ಟ್ರೀಟ್‌ ಕೂಡಾ ಪ್ರಾಮುಖ್ಯತೆ ಪಡೆದಿದೆ. ಅದರೊಂದಿಗೆ ಆಲದ ಮರದ ಕೆಳಗೆ ಆರಂಭಗೊಂಡಿದ್ದ ಬಾಂಬೆ ಷೇರು ಮಾರುಕಟ್ಟೆ ವಹಿವಾಟು ಇಂದು ಆಲದ ಮರದಂತೆ ಬೃಹತ್‌ ಆಗಿ ಬೆಳೆದು ನಿಂತಿದೆ.

*ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next