Advertisement

ಬಿಸಿಲು ನಾಡಿನಲ್ಲಿ 142 ಮಾದರಿ ರೈತರು

02:03 PM Jun 05, 2022 | Team Udayavani |

ಆಳಂದ: ಹಿಂದಿನಿಂದಲೂ ಕೃಷಿ, ಅರಣ್ಯ ತೋಟಗಾರಿಕೆ ಮತ್ತು ಹೈನುಗಾರಿಕೆಯಲ್ಲಿ ಜಿಲ್ಲೆಯಲ್ಲೇ ಹೆಸರು ಮಾಡಿದ ತಾಲೂಕು ಕಳೆದ ಎರಡು ವರ್ಷಗಳಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆ ಸಹಾಯದೊಂದಿಗೆ 142 ರೈತರು 71050 ಮರಗಳನ್ನು ಬೆಳೆಸುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಿದ್ದಾರೆ.

Advertisement

ಇದುವರೆಗೂ ಮಲೆನಾಡಿಗೆ ಸೀಮಿತವಾಗಿದ್ದ ಸಾಗವಾನಿ, ಹೆಬ್ಬೇವು, ಶ್ರೀಗಂಧ, ಅಶ್ವಗಂಧದಂತಹ ಮರಗಳನ್ನು ಬಿಸಿಲು ನಾಡು ಆಳಂದ ತಾಲೂಕಿನಲ್ಲೂ ಬೆಳೆದ ರೈತರು ಮಾದರಿಯಾಗಿದ್ದಾರೆ.

ಪ್ರಾದೇಶಿಕ ಅರಣ್ಯ ಇಲಾಖೆಯ ಅಡಿಯಲ್ಲಿ ರಿಯಾಯ್ತಿ ದರದಲ್ಲಿ ಶ್ರೀಗಂಧ ಸಸಿ(ಆರ್‌ಎಸ್‌ಪಿ) ಮತ್ತು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅಡಿ(ಕೆಎಪಿವೈ) ಹೀಗೆ ಈ ಎರಡು ಯೋಜನೆಗಳ ಸೌಲಭ್ಯದಡಿ ಸೇರಿ ವಿವಿಧ ಜಾತಿಯ 71050 ಸಸಿಗಳನ್ನು ರೈತರು ತಮ್ಮ ಹೊಲಗಳಲ್ಲಿ ಬೆಳೆದಿದ್ದಾರೆ.

ಕಳೆದ ಸಾಲಿನ 2021ನೇ ಸಾಲಿನಲ್ಲಿ ಒಟ್ಟು ತಾಲೂಕಿನ 84 ರೈತರು ಸೇರಿ 49250 ಮರಗಳನ್ನು ಬೆಳೆಸಿದ್ದಾರೆ. ಅಲ್ಲದೇ, ಪ್ರತ್ಯೇಕವಾಗಿ 5 ಸಾವಿರ ಶ್ರೀಗಂಧ ಮರಗಳನ್ನು ಬೆಳೆಸಿದ್ದಾರೆ. ಭವಿಷ್ಯದಲ್ಲಿ ತಮ್ಮ ಕೃಷಿಗೆ ಆದಾಯ ತರುವ ನಿಟ್ಟಿನಲ್ಲಿ ಗಿಡ, ಮರಗಳನ್ನು ಬೆಳೆಸಲು ಹೆಚ್ಚಿನ ರೈತರು ಒಲವು ತೋರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಮತ್ತೊಂದೆಡೆ 2021-22ನೇ ಸಾಲಿನಲ್ಲಿ ತಾಲೂಕಿನ 58 ರೈತರು ಶ್ರೀಗಂಧ, ಹೆಬ್ಬೇವು, ಬೀದಿರು, ಬೇವು, ಹೊಂಗೆ, ನಿಂಬೆ, ಪೇರಲ್‌, ಸೀತಾಫಲ, ಸಾಗವಾನಿ ಹೀಗೆ 16800 ಗಿಡಮರಗಳನ್ನು ಬೆಳೆಸಿ ಪರಿಸರಕ್ಕೆ ಖಾಸಗಿಯಾಗಿಯೂ ರೈತರು ತಮ್ಮ ಕೊಡುಗೆ ನೀಡಿದ್ದಾರೆ.

Advertisement

ಅರಣ್ಯ ಕೃಷಿ ಸಾಧಕ

ತಾಲೂಕಿನ ಯುವ ರೈತ ಸಿದ್ರಾಮ ಶರಣಪ್ಪ ಕೋರೆ ಓದಿದ್ದು ಎಸ್ಸೆಸ್ಸೆಲ್ಸಿ. ಆದರೆ ಅರಣ್ಯ ಕೃಷಿಯಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಪ್ರಾದೇಶಿಕ ಅರಣ್ಯ ಇಲಾಖೆಯಿಂದ ಪ್ರೋತ್ಸಾಹಧನ ಅಡಿಯಲ್ಲಿ ಇವರು ಕಲಬುರಗಿ ಕೆವಿಕೆ ಮತ್ತು ಭಾರತೀಯ ತೋಟಗಾರಿಕೆಯ ಸಂಶೋಧನ ಸಂಸ್ಥೆ (ಐಎಎಸ್‌ಆರ್‌) ವಿಜ್ಞಾನಿಗಳ ಮಾರ್ಗದರ್ಶನಲ್ಲಿ 6.20 ಎಕರೆ ಪ್ರದೇಶದ ಪೈಕಿ 1.10 ಎಕರೆ ಪ್ರದೇಶದಲ್ಲಿ 750 ಶ್ರೀಗಂಧ ಮರಗಳು, 4 ಎಕರೆ ಪ್ರದೇಶದಲ್ಲಿ 1700 ಸೀತಾಫಲ, 20 ಗುಂಟೆ (ಅರ್ಧ ಎಕರೆ) ಅಶ್ವಗಂಧ, 30 ಗುಂಟೆ ಪೇರು ಸೇರಿದಂತೆ ಮಾಗಣಿ, ಹೆಬ್ಬೇವು ಬೆಳೆದಿದ್ದಾರೆ. ಸಿದ್ರಾಮಪ್ಪ ಓದಿದ್ದು ಎಸ್ಸೆಸ್ಸೆಲ್ಸಿ ಆದರೂ ಅರಣ್ಯ ಬೆಳೆಸಿದ್ದನ್ನು ಗುರುತಿಸಿ ಈಗಾಗಲೇ 2019-18ರಲ್ಲಿ ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲವು ಪ್ರಗತಿಪರ ರೈತ ಪ್ರಶಸ್ತಿ, 2020ರಲ್ಲಿ ಕೃಷಿ ಇಲಾಖೆಯಿಂದ 2021ರಲ್ಲಿ ಕೃಷಿ ರತ್ನ, ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅರಣ್ಯ ಇಲಾಖೆ ನೌಕರರ ಸಂಘದಿಂದ ಯುವ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕೃಷಿಕ ಸಮಾಜದಿಂದಲೂ ಪಗತಿಪರ ರೈತ ಪ್ರಶಸ್ತಿ ಹೀಗೆ ಒಟ್ಟು ನಾಲ್ಕು ಪ್ರಶಸ್ತಿಗಳನ್ನು ಪಡೆದುಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಇದಕ್ಕೆ ಹೊರತಾಗಿಯೂ ಧುತ್ತರಗಾಂವದ ರೈತ ವಿಶ್ವವಾಸರವಾರ್‌ ಪೋದ್ದಾರ, ಅಶೋಕ ಪೋದ್ದಾರ, ಕೊರಳ್ಳಿಯ ಶಿವರಾಜ ಭೀಮಾಶಂಕರ, ಧರ್ಮವಾಡಿಯ ಶಿವಶರಣ ಮಲ್ಲಿನಾಥ, ಲಿಂಗನವಾಡಿಯಲ್ಲಿ ದಾದಾರಾಮ ಹಕ್ಕಿ ಹಾಗೂ ಇನ್ನಿತರರು ಶ್ರೀಗಂಧದಂತಹ ಅರಣ್ಯ ಕೃಷಿಗೆ ಒತ್ತು ನೀಡಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ವಿವಿಧ ಜಾತಿಯ 40 ಸಾವಿರ ಸಸಿಗಳನ್ನು ಉತ್ಪಾದಿಸಿ ನೆಡಲು ಸಜ್ಜಾಗಿದ್ದು, ಕಡಗಂಚಿ ಸಸ್ಯಕ್ಷೇತ್ರದಲ್ಲಿ ಒಂದು ಸಸಿಗೆ 1 ಮತ್ತು 3 ರೂ. ಮಾರಾಟಕ್ಕೆ ಇಡಲಾಗಿದೆ. ಆಸಕ್ತ ರೈತರು ಪಡೆಯಬಹುದು. ಅಲ್ಲದೇ ಅರಣ್ಯ ಕೃಷಿಗೆ ಇಲಾಖೆಯ ಪ್ರೋತ್ಸಾಹಧನ ನೀಡಲಾಗುತ್ತಿದೆ. ರೈತರು ಅರಣ್ಯ ಕೃಷಿ ಕೈಗೊಳ್ಳಲು ಮುಂದೆ ಬಂದು ಪರ್ಯಾಯ ಸಾಧನೆ ಮಾಡತೊಡಗಿದ್ದಾರೆ. -ಜಗನ್ನಾಥ ಕೊರಳ್ಳಿ, ವಲಯ ಅರಣ್ಯಾಧಿಕಾರಿ, ಪ್ರಾದೇಶಿಕ ಅರಣ್ಯ ವಲಯ

-ಮಹಾನಂದ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next