ಬೆಂಗಳೂರು: ರಾಜ್ಯದಲ್ಲಿ ಇಂದು 141 ಜನರಿಗೆ ಕೋವಿಡ್-19 ಸೋಂಕು ದೃಢವಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಒಟ್ಟು 141 ಸೋಂಕು ಪ್ರಕರಣಗಳು ದೃಢವಾಗಿದೆ. ಇದರಲ್ಲಿ 90 ಜನರು ಬೇರೆ ಬೇರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬಂದು ಕ್ವಾರಂಟೈನ್ ನಲ್ಲಿದ್ದವರು.
ಇಂದಿನ ಪ್ರಕರಣಗಳ ಪೈಕಿ ಬೆಂಗಳೂರು ನಗರದಲ್ಲಿ 33 ಪ್ರಕರಣಗಳು, ಯಾದಗಿರಿಯಲ್ಲಿ 18 ಪ್ರಕರಣಗಳು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14 ಪ್ರಕರಣಗಳು, ಉಡುಪಿ ಮತ್ತು ಹಾಸನ ಜಿಲ್ಲೆಯಲ್ಲಿ ತಲಾ 13 ಪ್ರಕರಣಗಳು, ವಿಜಯಪುರದಲ್ಲಿ 11 ಹೊಸ ಪ್ರಕರಣ ಮತ್ತು ಬೀದರ್ ನಲ್ಲಿ 10 ಸೋಂಕು ಪ್ರಕರಣಗಳು ದೃಢವಾಗಿದೆ.
ಉಳಿದಂತೆ ಕಲಬುರಗಿಯಲ್ಲಿ ಎರಡು, ದಾವಣಗೆರೆಯಲ್ಲಿ ನಾಲ್ಕು, ಬೆಳಗಾವಿ ಒಂದು, ಮೈಸೂರು, ಉತ್ತರ ಕನ್ನಡ ಮತ್ತು ಧಾರವಾಡದಲ್ಲಿ ತಲಾ ಎರಡು, ಶಿವಮೊಗ್ಗದಲ್ಲಿ ಆರು, ಹಾವೇರಿ ನಾಲ್ಕು, ಕೋಲಾರ ಮೂರು ಪ್ರಕರಣಗಳು, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರದಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿದೆ.
ಬೀದರ್ ನ 47 ವರ್ಷದ ಮಹಿಳೆ ಕಳೆದ ಎಂಟು ವರ್ಷಗಳಿಂದ ಪಾರ್ಶ್ವವಾಯು ನಿಂದ ಬಳಲುತ್ತಿದ್ದು, ಮೇ 28ರಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರಿಗೆ ಕೋವಿಡ್ ಸೋಂಕು ಪತ್ತೆಯಾಗಿದೆ.
ಇಂದಿನ ಹೊಸ 141 ಕೋವಿಡ್-19 ಪ್ರಕರಣಗಳ ಕಾರಣದಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 2922ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ಒಟ್ಟು 103 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು ಬಿಡುಗಡೆಯಾದವರ ಸಂಖ್ಯೆ 997ಕ್ಕೆ ಏರಿಕೆಯಾಗಿದೆ. ಒಟ್ಟು 49 ಮಂದಿ ಸೋಂಕಿನ ಕಾರಣದಿಂದ ಮೃತಪಟ್ಟರೆ, ಇಬ್ಬರು ಸೋಂಕಿತರು ಕೋವಿಡ್19 ಅಲ್ಲದ ಅನ್ಯ ಕಾರಣದಿಂದ ಮರಣ ಹೊಂದಿದ್ದಾರೆ.