Advertisement

ಕರ್ನಾಟಕ ಪಬ್ಲಿಕ್‌ ಶಾಲೆಗೆ 140ನೇ ವರ್ಷದ ಸಂಭ್ರಮ

10:28 AM Feb 16, 2019 | |

ಬಂಕಾಪುರ: ನಾರಾಯಣಪುರ ಗ್ರಾಮದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ರಾಜ್ಯದ 176 ಪಬ್ಲಿಕ್‌ ಸ್ಕೂಲಗಳಲ್ಲಿ ಪ್ರಥಮವಾಗಿ ಅಸ್ತಿತ್ವಕ್ಕೆ ಬಂದ ಏಕೈಕ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Advertisement

1880ರಲ್ಲಿ 1ನೇ ತರಗತಿಯಿಂದ ಗ್ರಾಮದ ದುಂಡಿ ಬಸವೇಶ್ವರ ದೇವಸ್ಥಾನದಲ್ಲಿ ಬೆರಳಣಿಕೆ ಮಕ್ಕಳೊಂದಿಗೆ ಪ್ರಾರಂಭವಾದ ಈ ಶಾಲೆ; ಪ್ರಸ್ತುತ 139 ವರ್ಷಗಳನ್ನು ಪೂರೈಸಿ 14ನೇ ದಶಮಾನೋತ್ಸವ ಸಂಭ್ರಮ ಆಚರಿಸಿಕೊಳ್ಳಲು ಸಜ್ಜಾಗಿದೆ.

1890ರ ದಶಕದಲ್ಲಿ ಶಿಕ್ಷಣ ಪ್ರೇಮಿಗಳಾದ ದಿ| ಸಾಧು ಮರಿಬಸಪ್ಪನವರ ನಾಲ್ಕು ಏಕರೆ ಜಮೀನನ್ನು ಶಾಲೆಗೆ ದಾನಮಾಡುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದರು. ಅಂದಿನ ಅಗಡಿ ಗ್ರಾಮದ ಶಿಕ್ಷಕ ದಿ| ಸಂಗಣ್ಣವರ ಉತ್ತಮ ಶಿಕ್ಷಣ ನೀಡುವ ಮೂಲಕ ಭೂ ದಾನಿಗಳ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಹಲವಾರು ಶಿಕ್ಷಣ ಪ್ರೇಮಿಗಳ, ಜನಪ್ರತಿನಿಧಿಗಳ ಹಾಗೂ ಗ್ರಾಮದ ಶಾಲಾ ಸುಧಾರಣಾ ಸಮಿತಿ ಸದಸ್ಯರ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ದಿ| ವಿ.ಡಿ. ರಾಯಣ್ಣವರ ಹಾಗೂ ಜಿಪಂ ಮಾಜಿ ಸದಸ್ಯ ಶಶಿಧರ ಹೊನ್ನಣ್ಣವರ ಶ್ರಮದ ಪ್ರತಿಫಲವಾಗಿ 1991ರಲ್ಲಿ ಪ್ರಾಥಮಿಕ ಶಾಲೆ ಪ್ರೌಢ ಶಾಲೆಯಾಗಿ ಬಡ್ತಿ ಹೊಂದಿತು. ನಂತರ 1994ರಲ್ಲಿ ಪದವಿ ಪೂರ್ವ ಕಾಲೇಜ ಆಗಿ ಮೇಲ್ದರ್ಜೆಗೇರಿತು. ಸತತ 3 ವರ್ಷ 100ಕ್ಕೆ 100 ಫಲಿತಾಂಶ ನೀಡುವ ಮೂಲಕ ಪ್ರಾಥಮಿಕ, ಪ್ರೌಢ, ಕಾಲೇಜ್‌ ಸಂಯೋಜನೆಗೊಂಡು 29-5-2018 ರಂದು ಕರ್ನಾಟಕ ಪಬ್ಲಿಕ್‌ ಶಾಲೆಯಾಗಿ ಸರ್ಕಾರದಿಂದ ಮಾನ್ಯತೆ ಪಡೆದು ಶಾಸಕ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆಗೊಂಡಿತು. ಈ ಮೂಲಕ ರಾಜ್ಯದ ಪ್ರಥಮ ಪಬ್ಲಿಕ್‌ ಸ್ಕೂಲ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಸದ್ಯ ನಾರಾಯಣಪೂರ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ 500 ಮಕ್ಕಳು ಜ್ಞಾನಾರ್ಜನೆ ಮಾಡುತ್ತಿದ್ದು, 22 ಶಿಕ್ಷಕರು ಬೋಧಿಸುತ್ತಿದ್ದಾರೆ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪಿ.ವೈ. ನಾಯಕ ಅವರ ಶ್ರಮದ ಪ್ರತಿಫಲವಾಗಿ ಈ ಶಾಲೆಯ ವಿದ್ಯಾರ್ಥಿಗಳು ಚಕ್ರ ಎಸೆತ, ಭರ್ಚಿ ಎಸೆತದಲ್ಲಿ ರಾಷ್ಟ್ರ ಮಟ್ಟ ಹಾಗೂ ಕಬಡ್ಡಿ, ಕುಸ್ತಿ ಸೇರಿದಂತೆ ವಿವಿಧ ಅಥ್ಲೇಟಿಕ್ಸ್‌ ರಾಜ್ಯಮಟ್ಟದ ಕ್ರೀಡೆಗಳಲ್ಲಿ ಸಾಧನೆಗೈದು ಗ್ರೂಪ್‌ ಮಟ್ಟದಲ್ಲಿ ಸತತ ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಭಾಜನವಾಗಿದೆ. ಶ್ರೀ ದುಂಡಿಬಸವೇಶ್ವರ ಯುವಕ ಸಂಘದವರು ಕಾಲೇಜು ನಿರ್ಮಾಣಕ್ಕೆ 1.28 ಎಕರೆ ಜಾಗೆ ದಾನ ನೀಡಿದ ಪ್ರತಿಫಲವಾಗಿ ಭವ್ಯ ಕಟ್ಟಡ ತಲೆ ಎತ್ತಿ ನಿಂತಿದೆ. ಶಾಲಾ ಆವರಣದಲ್ಲಿ ಕೈ ತೋಟ, ವಿಶಾಲವಾದ ಕ್ರೀಡಾಂಗಣ, ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತೇಕ ಶೌಚಾಲಯ ನಿರ್ಮಿಸುವ ಮೂಲಕ ಮಾದರಿ ಶಾಲೆಯಾಗಿದೆ.

ಫೆ. 16,17 ರಂದು ನಡೆಯಲಿರುವ 14ನೇ ದಶಮಾನೋತ್ಸವ ಸಮಾರಂಭಕ್ಕೆ ಸುರೇಶ ಅರ್ಕಸಾಲಿ ಅವರಿಂದ ಶಾಲಾ ಗೋಡೆಗಳ ಮೇಲೆ ಕನಕದಾಸರ ಅರಮನೆ, ಸಂತ ಶಿಶುನಾಳ ಷರೀಫ್‌, ಬಂಕಾಪುರ ಕೋಟೆ ಆವರಣ ಶಾಲೆಯ ಸುಂದರವಾದ ನೋಟ ಚಿತ್ರ ಬಿಡಿಸುವ ಮೂಲಕ ಶಾಲೆಗೆ ಹೊಸ ಮೇರಗು ನೀಡಲಿದ್ದಾರೆ.

Advertisement

ಸದಾಶಿವ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next