Advertisement

14 ಸಾವಿರ ಹೆಕ್ಟೇರ್‌ ಗುರಿ; ಬಿತ್ತನೆ ಬೀಜ ವಿತರಣೆ ಆರಂಭ

11:19 AM May 26, 2022 | Team Udayavani |

ಕುಂದಾಪುರ: ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ಮೇನಲ್ಲಿಯೇ ಕೆಲವು ದಿನ ಮಳೆಯಾಗಿದ್ದು, ಇದು ಕೃಷಿಕರಿಗೆ ವರದಾನ ವಾಗಿ ಪರಿಣಮಿಸಿದೆ. ಕುಂದಾಪುರ ಭಾಗದಲ್ಲಿ ಅವಧಿಗಿಂತ ಮೊದಲೇ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭಗೊಂಡಿವೆ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಕುಂದಾಪುರ ಹಾಗೂ ಬೈಂದೂರು ಎರಡೂ ತಾಲೂಕಿನಲ್ಲಿ ಒಟ್ಟಾರೆ 14 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ನಾಟಿ ಗುರಿ ಹೊಂದಲಾಗಿದೆ.

Advertisement

ಜೂನ್‌ ಮೊದಲ ವಾರ ಆರಂಭಗೊಳ್ಳಬೇಕಿದ್ದ ಮಳೆ ವಾಯುಭಾರ ಕುಸಿತದಿಂದಾಗಿ ಮೇನಲ್ಲಿಯೇ ಬಂದಿದ್ದರಿಂದ ಗದ್ದೆ ಹದ ಮಾಡಲು, ಬಿತ್ತನೆ ಕಾರ್ಯ ಆರಂಭಕ್ಕೆ ಪೂರಕವಾಗಿದೆ. ಕುಂದಾಪುರ, ಬೈಂದೂರು, ವಂಡ್ಸೆ ಹೋಬಳಿಯ ಕೆಲವೆಡೆಗಳಲ್ಲಿ ರೈತರು ಗದ್ದೆಗಳಿಗೆ ಗೊಬ್ಬರ, ಸುಡುಮಣ್ಣು ಹಾಕಿ, ಗದ್ದೆ ಹದ ಮಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ.

ನಾಟಿ ಕಾರ್ಯ ಹೆಚ್ಚಳ ನಿರೀಕ್ಷೆ

ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಬೈಂದೂರನ್ನೊಳಗೊಂಡ ಅವಿಭಜಿತ ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 14 ಸಾವಿರ ಹೆಕ್ಟೇರ್‌ ಪ್ರದೇಶಗಳಲ್ಲಿ ಭತ್ತದ ನಾಟಿ ಗುರಿ ಹೊಂದಲಾಗಿದೆ. ಕಳೆದ ಬಾರಿಯೂ ಗುರಿ ನಿಗದಿಪಡಿಸಿದ ಶೇ.100ರಷ್ಟು ನಾಟಿ ಕಾರ್ಯ ನಡೆದಿತ್ತು. ಈ ಬಾರಿಯೂ ಅಷ್ಟೇ ಗುರಿಯನ್ನು ನಿಗದಿಪಡಿಸಲಾಗಿದೆ. ಕಳೆದೆರಡು ವರ್ಷಗಳಿಂದ ಕೊರೊನಾ, ಲಾಕ್‌ಡೌನ್‌ನಿಂದಾಗಿ ಕೃಷಿಯತ್ತ ಒಲವು ತೋರಿದವರ ಸಂಖ್ಯೆ ಹೆಚ್ಚಳವಾಗಿತ್ತು. ಈ ಬಾರಿಯೂ ಅವಧಿಗಿಂತ ಮೊದಲೇ ಮಳೆಯಾಗಮನವಾಗಿದೆ. ಕೃಷಿ ಚಟುವಟಿಕೆಗೆ ಉತ್ತಮ ವಾತಾವರಣ ಇರುವುದರಿಂದ ಈ ಬಾರಿಯೂ ಕಳೆದ ಬಾರಿಯಂತೆ ಹೆಚ್ಚಿನ ಗದ್ದೆಗಳಲ್ಲಿ ಬೇಸಾಯವಾಗುವ ನಿರೀಕ್ಷೆ ಹೊಂದಲಾಗಿದೆ.

ವಿತರಣೆ ಶುರು

Advertisement

ಕುಂದಾಪುರ ಹಾಗೂ ಬೈಂದೂರು ತಾಲೂಕಿಗೆ ಒಟ್ಟಾರೆ 750 ಕ್ವಿಂಟಾಲ್‌ ಎಂಒ-4 ಬಿತ್ತನೆ ಬೀಜ ಬಂದಿದ್ದು, ಈಗಾಗಲೇ ದಾಸ್ತಾನು ಇದೆ. ಕುಂದಾಪುರ ಹಾಗೂ ವಂಡ್ಸೆ ಹೋಬಳಿಗೆ ತಲಾ 220 ಕ್ವಿಂಟಾಲ್‌ ಹಾಗೂ ಬೈಂದೂರು ಹೋಬಳಿಗೆ 310 ಕ್ವಿಂಟಾಲ್‌ ಸರಬರಾಜು ಮಾಡಲಾಗಿದೆ. 20 ಕ್ವಿಂಟಾಲ್‌ ಜ್ಯೋತಿ ಹಾಗೂ 30 ಕ್ವಿಂಟಾಲ್‌ ಉಮಾ ಬೀಜ ದಾಸ್ತಾನಿದೆ. ಈಗಾಗಲೇ ಎಲ್ಲ ರೈತ ಸೇವಾ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಶುರುವಾಗಿದ್ದು, ಈವರೆಗೆ 530 ಕ್ವಿಂಟಾಲ್‌ ವಿತರಣೆ ಮಾಡಲಾಗಿದೆ. ಈ ಬಾರಿ ಹೊಸಬರಿಗೆ ಆದ್ಯತೆ ನೀಡಲಾಗುತ್ತಿದೆ.

ಉತ್ತಮ ವಾತಾವರಣ

ಕಳೆದೆರಡು ವರ್ಷಗಳಂತೆ ಈ ಬಾರಿಯೂ ನಾಟಿ ಕಾರ್ಯ ಹೆಚ್ಚಾಗುವ ನಿರೀಕ್ಷೆಯಿದೆ. ಅದಲ್ಲದೆ ಮಳೆಯೂ ಬಂದಿರುವುದರಿಂದ ಪೂರಕ ವಾತಾವರಣವಿದೆ. ಮುಂದಿನ ದಿನಗಳಲ್ಲಿಯೂ ಉತ್ತಮ ಮುಂಗಾರಿನ ನಿರೀಕ್ಷೆಯೂ ಇದೆ. ಬಿತ್ತನೆ ಬೀಜ ದಾಸ್ತಾನಿದ್ದು, ಶೀಘ್ರ ವಿತರಣೆ ಕಾರ್ಯ ಆರಂಭಗೊಳ್ಳಲಿದೆ. ಈ ಬಾರಿಯೂ ಯಾಂತ್ರೀಕೃತ ನಾಟಿ ಪದ್ಧತಿಗೆ ರೈತರಿಂದ ಹೆಚ್ಚಿನ ಒಲವಿದೆ. – ವಿಶ್ವನಾಥ ಶೆಟ್ಟಿ, ಕೃಷಿ ತಾಂತ್ರಿಕ ಅಧಿಕಾರಿ, ಕೃಷಿ ಇಲಾಖೆ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next