Advertisement

14 ಸಾವಿರ ಕೋಟಿ ಸಾಲ ವಿತರಣೆ ಗುರಿ

07:05 AM Jun 10, 2020 | Lakshmi GovindaRaj |

ಕೋಲಾರ: ಕೋವಿಡ್‌ 19 ಸಂಕಷ್ಟದಲ್ಲೂ 2020-21ನೇ ಸಾಲಿನಲ್ಲಿ ಸಹಕಾರ ಬ್ಯಾಂಕ್‌ಗಳ ಮೂಲಕ ರೈತರಿಗೆ 14 ಸಾವಿರ ಕೋಟಿ ರೂ. ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ರಾಜ್ಯ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌  ತಿಳಿಸಿದರು. ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ ಸಹಕಾರ ಇಲಾಖೆ, ಜಿಲ್ಲಾಡಳಿತ ಹಾಗೂ ಶ್ರೀರಾಮ ಬಳಕೆದಾರರ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಿಸಿ ಮಾತನಾಡಿದರು.

Advertisement

ಕಳೆದ ವರ್ಷ ಕೇವಲ 13 ಸಾವಿರ ಕೋಟಿ ರೂ. ನೀಡಿದ್ದು, ಈ ಬಾರಿ ಒಂದು ಸಾವಿರ ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಆಶಾ ಕಾರ್ಯಕರ್ತೆಯರಿಗೆ ಕಾಯಕಬಂಧು ಮಾದರಿಯಲ್ಲಿ ಸ್ವಸಹಾಯ ಸಂಘಗಳನ್ನು ರಚಿಸಿ ಸಾಲ  ವಿತರಿಸಲು ಬದ್ಧವಾಗಿರುವುದಾಗಿ ತಿಳಿಸಿದರು.ರಾಜ್ಯದ 21 ಡಿಸಿಸಿ ಬ್ಯಾಂಕ್‌ಗಳು ಲಾಭದಲ್ಲಿವೆ. ಆದರೆ, ಇಲ್ಲಿವರೆಗೂ ಎಷ್ಟು ಸಾಲ ವಿತರಣೆ, ವಸೂಲಾತಿ ಪ್ರಗತಿ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದರು.

ಹೊರಗಿನವರಿಂದಲೇ ಸೋಂಕು ಹೆಚ್ಚಳ: ರಾಜ್ಯದಲ್ಲಿ ಹೊರ ರಾಜ್ಯಗಳಿಂದ ಬಂದವರಿಂದಲೇ ಕೋವಿಡ್‌ 19 ಸೋಂಕು ಹೆಚ್ಚಳವಾಗಿದೆ ಎಂದ ಅವರು, ಸ್ಥಳೀಯವಾಗಿ ರೋಗ ಸಮುದಾಯಕ್ಕೆ ಹರಿಡಿಲ್ಲ, ಇದೀಗ ಕೋವಿಡ್‌ 19 ಜತೆಯಲ್ಲಿ  ಜೀವನ ಎಂದು ಬದುಕುವಂತಾಗಿದೆ. ಜ.8 ರಿಂದ ಮಾಲ್‌, ದೇವಾಲಯ, ಚರ್ಚ್‌, ಮಸೀದಿ ತೆರೆದಿದ್ದು, ಸರಕಾರ, ಜಿಲ್ಲಾಡಳಿತ ಸೂಚಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಕೋವಿಡ್‌ 19 ತಡೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ರಾಜ್ಯ ಅಬಕಾರಿ ಸಚಿವ ಎಚ್‌.ನಾಗೇಶ್‌, ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರ ಸೇವೆ ಪರಿಗಣಿಸಿ ಪ್ರೋತ್ಸಾಹಧನ ನೀಡಿದೆ, ನಿಮ್ಮನ್ನು ಕಲಿಯುಗದ ದೇವತೆಗಳಂತೆ, ಧೈರ್ಯದಿಂದ ಜೀವದ ಹಂಗು ಬಿಟ್ಟು ಕೋವಿಡ್‌ 19 ವಿರುದ್ಧ ಹೋರಾಟಿದ್ದೀರಿ ಎಂದು ಅಭಿನಂದಿಸಿದರು. ಕೋಲಾರದಲ್ಲಿ 30 ಸೋಂಕಿತರು ಪತ್ತೆಯಾಗಿದ್ದರೂ, ಅವರಲ್ಲಿ 18 ಮಂದಿ ಬಿಡುಗಡೆಯಾಗಿದ್ದಾರೆ, 12 ಮಂದಿ ಆಸ್ಪತ್ರೆಯಲ್ಲಿದ್ದು, ಎಲ್ಲರೂ  ಆರೋಗ್ಯವಾಗಿದ್ದಾರೆ.

ಇದಕ್ಕೆ ಕೋಲಾರಮ್ಮನ ಮಹಿಮೆ ಕಾರಣ ಎಂದರು. ಸಂಸದ ಎಸ್‌.ಮುನಿಸ್ವಾಮಿ ಮಾತನಾಡಿ, ಆಶಾ ಕಾರ್ಯಕರ್ತೆಯರು ಮನಸ್ಸು ಮಾಡಿದರೆ ಇಡೀ ಸಮಾಜವನ್ನೂ ಆರೋಗ್ಯವಾಗಿಡಬಹುದು ಎಂಬುದಕ್ಕೆ  ಕೋಲಾರ ಜಿಲ್ಲೆ 48 ದಿನಗಳ ಕಾಲ ಹಸಿರುವಲಯವಾಗಿದ್ದುದೇ ಸಾಕ್ಷಿ ಎಂದರು. ಜಿಪಂ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌, ಆಶಾ ಕಾರ್ಯಕರ್ತೆಯರ ಮಕ್ಕಳಿಗೆ ಉಚಿತ ಶಿಕ್ಷಣದ ಜತೆಗೆ ಪತ್ರಕರ್ತರು, ಕಲಾವಿದರು ಸಂಕಷ್ಟದಲ್ಲಿದ್ದು, ಅವರಿಗೆ  ನಿವೇಶನ ನೀಡಲು ಆಲೋಚನೆ ಮಾಡಬೇಕು ಎಂದು ಮನವಿ ಮಾಡಿದರು.

Advertisement

ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಡಿಸಿಸಿ ಬ್ಯಾಂಕ್‌ ಎಜಿಎಂ ಶಿವಕುಮಾರ್‌, ಜಿಲ್ಲಾ ಲೆಕ್ಕಪರಿಶೋಧಕಿ ಶಾಂತಕುಮಾರಿ, ಕೋಚಿಮುಲ್‌ ಎಂಡಿ ತಿಪ್ಪಾರೆಡ್ಡಿ, ಸಹಕಾರ  ಸಂಘಗಳ ಉಪನಿಬಂಧಕ ಸಿದ್ದನಗೌಡ ನೀಲಪ್ಪನವರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next