ಲಕ್ನೋ : ಹದಿನಾಲ್ಕು ವರ್ಷದ ಮಗಳು ತನ್ನ ತಾಯಿ ಹಾಗೂ ಸಹೋದರನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಲಕ್ನೋ ಗೌತಂಪಲ್ಲಿ ಶನಿವಾರ ಸಂಭವಿಸಿದೆ.
ಹಿರಿಯ ರೈಲ್ವೆ ಅಧಿಕಾರಿಯ ಹದಿನಾಲ್ಕು ವರ್ಷದ ಮಗಳು ಈ ಕೃತ್ಯ ಎಸಗಿದ್ದು, ಮಧ್ಯಾಹ್ನ ಊಟ ಮಾಡಿದ ಬಳಿಕ ತಾಯಿ ಮತ್ತು ಸಹೋದರ ಕೋಣೆಯಲ್ಲಿದ್ದ ಸಂದರ್ಭ ಮಗಳು ಪಿಸ್ತೂಲಿನಿಂದ ಮೂರು ಸುತ್ತು ಗುಂಡು ಹಾರಿಸಿದ್ದಾಳೆ ಎರಡು ಗುಂಡು ತಾಯಿ ಮತ್ತು ಸಹೋದರನ ದೇಹ ಸೇರಿದರೆ ಇನ್ನೊಂದು ಗುಂಡು ಗೋಡೆಯಲ್ಲಿದ್ದ ಕನ್ನಡಿಗೆ ಬಿದ್ದಿದೆ.
ಬಾಲಕಿಯು ಮಾನಸಿಕವಾಗಿ ಸ್ತಿಮಿತದಲ್ಲಿ ಇರದ ಪರಿಣಾಮ ಈ ಕೃತ್ಯ ಎಸಗಿದ್ದಾಳೆ ಎನ್ನಲಾಗಿದ್ದು ಗುಂಡು ಹಾರಿಸಿದ ಬಳಿಕ ತನ್ನನ್ನು ಹತ್ಯೆ ಮಾಡಿಕೊಳ್ಳಲು ಬ್ಲೇಡ್ ನಿಂದ ಕೈಯನ್ನು ಘಾಸಿಗೊಳಿಸಿದ್ದಾಳೆ.
ಘಟನೆ ನಡೆದ ಸಂದರ್ಭ ತಂದೆ ದೆಹಲಿಯಲ್ಲಿ ಕರ್ತವ್ಯದಲ್ಲಿದ್ದರು ಎಂದು ಹೇಳಲಾಗಿದೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಬಾಲಕಿಯ ಸ್ಥಿತಿಯನ್ನು ಕಂಡು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಂದೆಯ ಹೇಳಿಕೆಯ ಪ್ರಕಾರ ಮಗಳು ಶೂಟರ್ ಆಗಿದ್ದು ಶಸ್ತ್ರಾಸ್ತ್ರಗಳ ತರಬೇತಿಯನ್ನು ಪಡೆದವಳಾಗಿದ್ದಳು ಎನ್ನಲಾಗಿದೆ. ಕೃತ್ಯದ ವೇಳೆ ಬಾಲಕಿ .22 ಬೋರ್ ರೈಫಲ್ ಅನ್ನು ಬಳಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಹಿತೇಶ್ ಚಂದ್ರ ಅವಸ್ಥಿ ಸ್ಥಳಕ್ಕೆ ಭೇಟಿ ನೀಡಿದರು.