ಬೆಂಗಳೂರು: ಸಿಎಎ ವಿರೋಧಿ ಕಾರ್ಯಕ್ರಮದಲ್ಲಿ “ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿ ದೇಶದ್ರೋಹ ಆರೋಪ ಪ್ರಕರಣದಲ್ಲಿ ಬಂಧಿತಳಾಗಿರುವ ಅಮೂಲ್ಯ ಲಿಯೋನಾ ಜೈಲು ಸೇರಿದ್ದು, 14 ದಿನ ನ್ಯಾಯಾಂಗ ಬಂಧನ ವಿಧಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಆದೇಶಿಸಿದ್ದಾರೆ.
ಉಪ್ಪಾರಪೇಟೆ ಪೊಲೀಸರು ಸ್ವಯಂಪ್ರೇರಿತವಾಗಿ ಅಮೂಲ್ಯ ವಿರುದ್ಧ ದೇಶದ್ರೋಹ ಸೇರಿ ಮತ್ತಿತರ ಆರೋಪಗಳ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದರು. ಘಟನೆ ಸಂಬಂಧ ಆಕೆಯನ್ನು ತೀವ್ರ ವಿಚಾರಣೆ ನಡೆಸಿ, ಹೇಳಿಕೆ ಪಡೆದುಕೊಂಡ ಪೊಲೀಸರು ತಡರಾತ್ರಿ ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮದಲ್ಲಿರುವ 5ನೇ ಎಸಿಎಎಂ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಧೀಶರಾದ ಶಿರಿನ್ ಜೆ ಅನ್ಸಾರಿ ಅವರು, ಆರೋಪಿ ಅಮೂಲ್ಯಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದ್ದಾರೆ.
ನ್ಯಾಯಾಧೀಶರ ಮುಂದೆ ಅಮೂಲ್ಯಳಿಗೆ ಜಾಮೀನು ನೀಡುವಂತೆ ಆಕೆಯ ಪರ ವಕೀಲರು ಮನವಿ ಮಾಡಿದರು. ಆದರೆ, ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ಸಾಮಾನ್ಯ ಅರ್ಜಿಯ ಮಾದರಿಯಲ್ಲಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿ ಅಮೂಲ್ಯಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸುವ ವೇಳೆ ಆಕೆ ವಿಜಯದ ಸಂಕೇತ ತೋರಿಸಿ ಹೋಗಿರುವ ವಿಡಿಯೋ ಕೂಡ ವೈರಲ್ ಆಗಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಗಲ್ಲು ಶಿಕ್ಷೆ ವಿಧಿಸಲಿ: ಪಾಕ್ ಪರ ಘೋಷಣೆ ಕೂಗಿದವರಿಗೆ ಜೀವಾವಧಿ ಶಿಕ್ಷೆಯಾಗಲಿ. ಒಂದು ವೇಳೆ ಉದ್ದೇಶಪೂರ್ವಕವಾಗಿ ಘೋಷಣೆಗಳನ್ನು ಕೂಗುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ಬಾರಿ ಹೇಳಿದ್ದರೆ ಬಾಯಿ ತಪ್ಪಿ ಹೇಳಿರಬಹುದು ಎಂದು ಭಾವಿಸಬಹುದಿತ್ತು. ಆದರೆ, ಒಂದೇ ಘೋಷಣೆ ಯನ್ನು ಮೂರು ಬಾರಿ ಹೇಳಿ¨ªಾರೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದರು.
ಆಯೋಜಕರ ವಿಚಾರಣೆ?: ಕಾರ್ಯಕ್ರಮ ಆಯೋಜಿಸಿದ್ದ ಸಂಘಟಕರನ್ನು ವಿಚಾರಣೆ ನಡೆಸಲೂ ಪೊಲೀಸರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಆಕೆಯ ಸ್ವ ಇಚ್ಛಾ ಹೇಳಿಕೆ ಗಮನಿಸಿದಾಗ “ಉದ್ದೇಶ ಪೂರ್ವಕವಾಗಿಯೇ ಘೋಷಣೆ ‘ಕೂಗಿರುವುದು ಕಂಡು ಬರುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಆಕೆ ಘೋಷಣೆ ಹಿಂದಿರುವ ಉದ್ದೇಶ ಹಾಗೂ ಪ್ರೇರಣೆ ಬಗ್ಗೆಯೂ ಪರಿಶೀಲಿಸಲಾಗುತ್ತದೆ. ಕಾರ್ಯಕ್ರಮದ ಆಯೋಜಕರನ್ನು ವಿಚಾರಣೆ ನಡೆಸಿ ಮಾಹಿತಿ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.