Advertisement

13th ODI World Cup Cricket ; ಉದ್ಘಾಟನ ಪಂದ್ಯದಲ್ಲೇ ಕಣಕ್ಕಿಳಿದ ಭಾರತ

11:32 PM Sep 22, 2023 | Team Udayavani |

ಭಾರತದ ಆತಿಥ್ಯದಲ್ಲಿ ನಡೆಯುವ 13ನೇ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಆರಂಭಕ್ಕೆ ಉಳಿದಿರುವುದು 13 ದಿನ ಮಾತ್ರ. ತಡವಾಗಿಯಾದರೂ ಕ್ರಿಕೆಟ್‌ ಜ್ವರ ಏರಲಾರಂಭಿಸಿದೆ. ಎಲ್ಲರೂ ನಾನಾ ಲೆಕ್ಕಾಚಾರಗಳಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವಕಪ್‌ ಸಾಗಿಬಂದ ಹಾದಿಯತ್ತ ಹಿನ್ನೋಟ ಹರಿಸುವ ಲೇಖನ ಮಾಲಿಕೆ ಇಲ್ಲಿ ಮೂಡಿಬರಲಿದೆ.

Advertisement

1971ರಲ್ಲಿ ಅಚಾನಕ್‌ ಆಗಿ ಜನ್ಮತಾಳಿದ ಏಕದಿನ ಕ್ರಿಕೆಟ್‌ ಪಂದ್ಯ, ಕೇವಲ 4 ವರ್ಷ ಗಳಲ್ಲೇ ಮೊದಲ ವಿಶ್ವಕಪ್‌ ಕಂಡದ್ದು ಕ್ರಿಕೆಟಿನ ಅಚ್ಚರಿಗಳಲ್ಲೊಂದು. ಇಂಗ್ಲೆಂಡ್‌ 1975ರ ಜೂನ್‌ನಲ್ಲಿ ಮೊದಲ ವಿಶ್ವಕಪ್‌ ಆಯೋಜಿಸುವ ಮುನ್ನ ನಡೆದ ಏಕದಿನ ಪಂದ್ಯಗಳ ಸಂಖ್ಯೆ ಕೇವಲ 18.

ಜೂ. 7ರಂದು ಐತಿಹಾಸಿಕ ಲಾರ್ಡ್ಸ್‌ನಲ್ಲಿ ನಡೆದ ಉದ್ಘಾಟನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ಜತೆ ಕಣಕ್ಕಿಳಿಯುವ ಅದೃಷ್ಟ ಎಸ್‌. ವೆಂಕಟರಾಘವನ್‌ ನೇತೃತ್ವದ ಭಾರತದ್ದಾಗಿತ್ತು. ಕೇವಲ 2 ಪಂದ್ಯಗಳ ಅನುಭವಿಯಾಗಿದ್ದ ಭಾರತ 202 ರನ್ನುಗಳ ದಾಖಲೆ ಅಂತರದ ಸೋಲನ್ನು ಹೊತ್ತುಕೊಂಡಿತು. ಆರಂಭಕಾರ ಡೆನ್ನಿಸ್‌ ಅಮಿಸ್‌ ಅವರ 137 ರನ್‌ ಪರಾಕ್ರಮದಿಂದ ಇಂಗ್ಲೆಂಡ್‌ 4 ವಿಕೆಟಿಗೆ 334 ರನ್‌ ಪೇರಿಸಿ ಸವಾಲೊಡ್ಡಿದರೆ, ಟೆಸ್ಟ್‌ ಗುಂಗಿನಿಂದ ಹೊರಬಾರದ ಭಾರತ 3 ವಿಕೆಟಿಗೆ 132 ರನ್‌ ಮಾಡಿ ಶರಣಾಯಿತು. ಆರಂಭಕಾರ ಸುನೀಲ್‌ ಗಾವಸ್ಕರ್‌ ಅವರಂತೂ 60 ಓವರ್‌ಗಳ ಈ ಮುಖಾಮುಖೀಯಲ್ಲಿ ಕೊನೆಯ ತನಕ ಬ್ಯಾಟಿಂಗ್‌ ನಡೆಸಿ 36 ರನ್‌ ಮಾಡಿ ಅಜೇಯರಾಗಿ ಉಳಿದಿದ್ದರು. ಅವರು 174 ಎಸೆತಗಳನ್ನು ಎದುರಿಸಿ ನಿಂತಿದ್ದರು. ಹೊಡೆದದ್ದು ಒಂದೇ ಬೌಂಡರಿ.

ಈ ಅವಮಾನದಿಂದ ಪಾರಾಗಬಹುದಿತ್ತು ಎಂದು ಗಾವಸ್ಕರ್‌ ಅನಂತರದ ಸಂದರ್ಶನ ವೊಂದರಲ್ಲಿ ಹೇಳಿದ್ದರು. ಏಕೆಂದರೆ, ಜೆಫ್ ಅರ್ನಾಲ್ಡ್‌ ಅವರ 2ನೇ ಎಸೆತದಲ್ಲೇ ಗಾವಸ್ಕರ್‌ ಔಟ್‌ ಆಗಿದ್ದರು! ಬ್ಯಾಟ್‌ಗೆ ಸವರಿದ ಚೆಂಡು ಕೀಪರ್‌ ಅಲನ್‌ ನಾಟ್‌ ಕೈಸೇರಿತ್ತು. ಆದರೆ ಇದಕ್ಕೆ ಯಾರೂ ಅಪೀಲು ಮಾಡಲಿಲ್ಲ. ಔಟ್‌ ಎಂದು ತಿಳಿದಿತ್ತಾದರೂ ಗಾವಸ್ಕರ್‌ ಪೆವಿಲಿಯನ್‌ ಕಡೆ ಹೆಜ್ಜೆ ಹಾಕಲಿಲ್ಲ. ಆಗ ಕ್ರೀಸ್‌ ತೊರೆದದ್ದೇ ಆದರೆ ತಾನು ಈ ಅವಮಾನಕ್ಕೆ ಸಿಲುಕುತ್ತಿರಲಿಲ್ಲ ಎಂದಿದ್ದರು.

ಭಾರತದ ಮೊದಲ ಜಯ
ಇದು ಕೇವಲ 8 ತಂಡಗಳ ನಡುವಿನ ಪಂದ್ಯಾವಳಿಯಾಗಿತ್ತು. ಎರಡೇ ವಾರಗಳಲ್ಲಿ ಮುಗಿದಿತ್ತು. ಭಾರತ ಗೆದ್ದದ್ದು ಈಸ್ಟ್‌ ಆಫ್ರಿಕಾ ಎಂಬ ಅಪರಿಚಿತ ತಂಡದ ವಿರುದ್ಧ ಮಾತ್ರ. ಅಂತರ 10 ವಿಕೆಟ್‌. ಲೀಡ್ಸ್‌ನ ಹೇಡಿಂಗ್ಲೆ ಅಂಗಳದಲ್ಲಿ ಒಲಿದ ಈ ಗೆಲುವು ಭಾರತದ ಪ್ರಪ್ರಥಮ ಏಕದಿನ ಗೆಲುವು ಕೂಡ ಆಗಿತ್ತು.

Advertisement

ಇಂಗ್ಲೆಂಡ್‌-ಆಸ್ಟ್ರೇಲಿಯ ಮತ್ತು ವೆಸ್ಟ್‌ ಇಂಡೀಸ್‌-ನ್ಯೂಜಿಲ್ಯಾಂಡ್‌ ಸೆಮಿಫೈನಲ್‌ನಲ್ಲಿ ಎದುರಾದವು. ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು 17 ರನ್ನುಗಳಿಂದ ಮಣಿಸಿದ ಕ್ಲೈವ್‌ ಲಾಯ್ಡ ನೇತೃತ್ವದ ವೆಸ್ಟ್‌ ಇಂಡೀಸ್‌ ಮೊದಲ ವಿಶ್ವಕಪ್‌ ಎತ್ತಿ ಸಂಭ್ರಮಿಸಿತು.
ಸ್ಕೋರ್‌: ವೆಸ್ಟ್‌ ಇಂಡೀಸ್‌ 8ಕ್ಕೆ 291. ಆಸ್ಟ್ರೇಲಿಯ-58.4 ಓವರ್‌ಗಳಲ್ಲಿ 274.

ವಿಶ್ವಕಪ್‌ವೈಭವ: ಮೊದಲು ನಡೆದದ್ದೇ ವನಿತಾ ವಿಶ್ವಕಪ್‌!
ಪುರುಷರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೂ ಮೊದಲೇ ವನಿತೆಯರ ಏಕದಿನ ವಿಶ್ವಕಪ್‌ ನಡೆದಿತ್ತು ಎಂಬುದು ಕ್ರಿಕೆಟಿನ ಸ್ವಾರಸ್ಯಗಳಲ್ಲೊಂದು. ಇದು ನಡೆದದ್ದು 1973ರಲ್ಲಿ. ಆತಿಥೇಯ ರಾಷ್ಟ್ರ ಇಂಗ್ಲೆಂಡ್‌. ಜೂ. 20ರಿಂದ 28ರ ತನಕ ಒಂದು ವಾರ ಕಾಲ ನಡೆದ ಈ ಪಂದ್ಯಾವಳಿಯನ್ನು ಆಯೋಜಿಸಿದ್ದು ಸರ್‌ ಜಾಕ್‌ ಹೇವಾರ್ಡ್‌ ಎಂಬ ಉದ್ಯಮಿ ಹಾಗೂ ಕ್ರಿಕೆಟ್‌ ಅಭಿಮಾನಿ. ಇದಕ್ಕಾಗಿ ಅವರು 40 ಸಾವಿರ ಪೌಂಡ್‌ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next