Advertisement

132 ಸ್ಥಾನಗಳಿಗೆ 137 ನಾಮಪತ್ರ

11:31 AM Nov 10, 2017 | Team Udayavani |

ಬೆಂಗಳೂರು: ಬಿಬಿಎಂಪಿಯ 12 ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆ ಶುಕ್ರವಾರ (ನ.10) ನಡೆಯಲಿದ್ದು, ಗುರುವಾರ ಮೂರು ಪಕ್ಷಗಳ ಸದಸ್ಯರಿಂದ 137 ನಾಮಪತ್ರಗಳು ಸಲ್ಲಿಕೆಯಾಗಿವೆ. 

Advertisement

ಗುರುವಾರ ಬೆಳಗ್ಗೆ 10.30ರಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಿದರಿಂದ ಯಾವುದೇ ಗೊಂದಲಗಳಿಲ್ಲ ಜೆಡಿಎಸ್‌ ಸದಸ್ಯರು 11 ಗಂಟೆಗೆ ತಮ್ಮ 14 ಸದಸ್ಯರ ಪೈಕಿ 9 ಸದಸ್ಯರು ನಾಮಪತ್ರ ಸಲ್ಲಿಸಿದರು. ಜತೆಗೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಪ್ರತಿ ಸಮಿತಿಗೆ ತಲಾ 5 ಸದಸ್ಯರಂತೆ ಬಿಜೆಪಿಯ 60 ಸದಸ್ಯರು ನಾಮಪತ್ರ ಸಲ್ಲಿಸಿದ್ದು, ಗೊಂದಲಗಳು ಬಗೆಹರಿಯುವುದು ತಡವಾದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ಅರ್ಧಗಂಟೆಯಿರುವಾಗ ಕಾಂಗ್ರೆಸ್‌ ಹಾಗೂ ಪಕ್ಷೇತರ ಸದಸ್ಯರು 68 ನಾಮಪತ್ರ ಸಲ್ಲಿಸಿದ್ದಾರೆ. 

ಬಿಬಿಎಂಪಿ 12 ಸ್ಥಾಯಿ ಸಮಿತಿಗಳ 132 ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತಿದ್ದು, ಗುರುವಾರ ಒಟ್ಟು 137 ನಾಮಪತ್ರಗಳು ಸಲ್ಲಿಕೆಯಾಗಿವೆ. ನಗರ ಯೋಜನೆ ಸ್ಥಾಯಿ ಸಮಿತಿ ಮತ್ತು ವಾರ್ಡ್‌ಮಟ್ಟದ ಕಾಮಗಾರಿಗಳ ಸ್ಥಾಯಿ ಸಮಿತಿಗಳಿಗೆ ತಲಾ 13 ನಾಮಪತ್ರಗಳು ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ 12 ನಾಮಪತ್ರಗಳು ಸಲ್ಲಿಕೆಯಾಗಿವೆ. ಉಳಿದಂತೆ 9 ಸ್ಥಾಯಿ ಸಮಿತಿಗಳಿಗೆ ತಲಾ 11 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಶುಕ್ರವಾರ ಪ್ರತಿ ಸ್ಥಾಯಿ ಸಮಿತಿಗೆ 11 ಸದಸ್ಯರನ್ನು ಆಯ್ಕೆ ಮಾಡಿ ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಅವರು ಘೋಷಣೆ ಮಾಡಲಿದ್ದು, ಆಯ್ಕೆಯಾದ 11 ಸದಸ್ಯರಲ್ಲಿ ಅಧ್ಯಕ್ಷರು ಯಾರಬೇಕು ಎಂಬುದನ್ನು ಮೇಯರ್‌ ಕಚೇರಿಯಲ್ಲಿ ನಿರ್ಧರಿಸಲಾಗುತ್ತದೆ. ನಂತರ ಮಾಸಿಕ ಸಭೆಯಲ್ಲಿ ಅಧ್ಯಕ್ಷರನ್ನು ಮೇಯರ್‌ ಪ್ರಕಟಿಸಲಿದ್ದಾರೆ. 

ಗೊಂದಲದಿಂದ ನಾಮಪತ್ರ ಸಲ್ಲಿಕೆ ತಡ: ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾಯಿ ಯಾರಿಗೆ ನೀಡಬೇಕು ಎಂಬ ಗೊಂದಲಕ್ಕೆ ಕಾಂಗ್ರೆಸ್‌ ನಾಯಕರು ಒಳಗಾದ ಹಿನ್ನೆಲೆಯಲ್ಲಿ ಗುರುವಾರ 4.30ರವರೆಗೆ ಕಾಂಗ್ರೆಸ್‌ ಸದಸ್ಯರು ನಾಮಪತ್ರ ಸಲ್ಲಿಕೆಗೆ ಮುಂದಾಗಲಿಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರು ಯಾರಬೇಕು ಎಂಬುದು ಅಂತಿಮವಾದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ಅರ್ಧಗಂಟೆಯಿರುವಾಗ ಕಾಂಗ್ರೆಸ್‌ ಹಾಗೂ ಪಕ್ಷೇತರ ಸದಸ್ಯರು ನಾಮಪತ್ರ ಸಲ್ಲಿಸಿದರು. 

Advertisement

ಸ್ಥಾಯಿ ಸಮಿತಿ ಸಂಭಾವ್ಯ ಅಧ್ಯಕ್ಷರ ಪಟ್ಟಿ 
ಕಾಂಗ್ರೆಸ್‌

-ನಗರ ಯೋಜನೆ ಸ್ಥಾಯಿ ಸಮಿತಿ – ಶಕೀಲ್‌ ಅಹಮದ್‌ (ಭಾರತಿನಗರ)
-ಬೃಹತ್‌ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ – ಗೋವಿಂದರಾಜು (ಸುಭಾಷ್‌ನಗರ)
-ಅಪೀಲು ಸ್ಥಾಯಿ ಸಮಿತಿ – ಅಬ್ದುಲ್‌ ವಾಜಿದ್‌ (ಮನೋರಾಯನಪಾಳ್ಯ) 
-ಮಾರುಕಟ್ಟೆ ಸ್ಥಾಯಿ ಸಮಿತಿ – ಜಿ.ಮಂಜುನಾಥ್‌ (ಸುದ್ದಗುಂಟೆಪಾಳ್ಯ)
-ಸಾಮಾಜಿಕ ನ್ಯಾಯ ಸಮಿತಿ – ಅಬ್ದುಲ್‌ ರಕೀಬ್‌ ಝಾಕೀರ್‌ (ಪುಲಿಕೇಶಿನಗರ)

ಜೆಡಿಎಸ್‌
-ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ – ಎಂ.ಮಹದೇವ (ಮಾರಪ್ಪನಪಾಳ್ಯ)
-ತೋಟಗಾರಿಗೆ ಸ್ಥಾಯಿ ಸಮಿತಿ – ಉಮ್ಮೇ ಸಲ್ಮಾ (ಕುಶಾಲನಗರ)
-ವಾರ್ಡ್‌ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ – ಇಮ್ರಾನ್‌ ಪಾಷಾ (ಪಾದರಾಯನಪುರ)
-ಶಿಕ್ಷಣ ಸ್ಥಾಯಿ ಸಮಿತಿ – ಗಂಗಮ್ಮ (ಶಕ್ತಿಗಣಪತಿನಗರ)

ಪಕ್ಷೇತರರು
-ಲೆಕ್ಕಪತ್ರ ಸ್ಥಾಯಿ ಸಮಿತಿ – ಎನ್‌.ರಮೇಶ್‌ (ಮಾರತಹಳ್ಳಿ)
-ಆರೋಗ್ಯ ಸ್ಥಾಯಿ ಸಮಿತಿ – ಮುಜಾಹಿದ್‌ ಪಾಷಾ (ಸಿದ್ದಾಪುರ)
-ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ – ಸಿ.ಆರ್‌.ಲಕ್ಷ್ಮೀನಾರಾಯಣ್‌ (ದೊಮ್ಮಲೂರು)

Advertisement

Udayavani is now on Telegram. Click here to join our channel and stay updated with the latest news.

Next