Advertisement

ಹೆಜಮಾಡಿ ಬಂದರಿಗೆ ಕೇಂದ್ರದ 13.50 ಕೋ.ರೂ. ಬಿಡುಗಡೆ: ಲಾಲಾಜಿ

01:35 AM Sep 19, 2018 | Team Udayavani |

ಪಡುಬಿದ್ರಿ: ಹೆಜಮಾಡಿಯಲ್ಲಿ ಸುಮಾರು 140 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಮತ್ತು ರಾಜ್ಯಗಳ ಸಮಾನ ಪಾಲುದಾರಿಕೆಯಲ್ಲಿ ಅನುಷ್ಠಾನವಾಗಲಿರುವ ಸರ್ವಋತು ಮೀನುಗಾರಿಕಾ ಬಂದರಿನ ಸ್ಥಾಪನೆಗೆ ಕೇಂದ್ರ ಸರಕಾರವು ಯೋಜನೆಯ ಅನುಮೋದನಾ ಪತ್ರ ಮತ್ತು 13.50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ರಾಜ್ಯ ಸರಕಾರದ ಪಾಲು 13.50 ಕೋಟಿ ರೂ. ಇನ್ನಷ್ಟೇ ಬಿಡುಗಡೆಯಾಗಬೇಕಿದೆ ಎಂದು ಕಾಪು ಶಾಸಕ ಲಾಲಾಜಿ ಮೆಂಡನ್‌ ಹೇಳಿದರು. ಅವರು ಸೆ. 18ರಂದು ಪಡುಬಿದ್ರಿ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಇದೇ ವೇಳೆ ರಾಜ್ಯ ಸರಕಾರ ಇನ್ನೂ ಶಾಸಕರ ನಿಧಿಯನ್ನು ಬಿಡುಗಡೆಗೊಳಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಸುಜ್ಲಾನ್‌ ಜಾಗ ಹಿಂಪಡೆಯಲು ನಿರ್ಣಯ
ಪಡುಬಿದ್ರಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಜಾಗದ ಕೊರತೆಯಿದೆ. ಹಾಗಾಗಿ ಸುಜ್ಲಾನ್‌ಗೆ ನೀಡಲಾಗಿರುವ ಸ್ಥಳದಲ್ಲಿ ಸುಮಾರು 50 ಎಕ್ರೆ ಸ್ಥಳವನ್ನು ವಾಪಾಸು ಪಡೆದುಕೊಳ್ಳಲು ರಾಜ್ಯ ಸಚಿವ ಸಂಪುಟದ ಡಿ ನೋಟಿಫಿಕೇಶನ್‌ ನಿರ್ಧಾರಕ್ಕಾಗಿ ಗ್ರಾಮಸಭೆಯಲ್ಲಿ ನಿರ್ಣಯ ಮಂಡಿಸಲಾಯಿತು. ಇದಕ್ಕೆ ಜಿಲ್ಲಾಧಿಕಾರಿಗಳ ಬಳಿ ನಿಯೋಗಕ್ಕೆ ಮತ್ತು ಸರಕಾರದ ಮೇಲೆ ಒತ್ತಡ ಹೇರುವುದಾಗಿ ಶಾಸಕರು ತಿಳಿಸಿದರು.  

ಹಣ ಬಿಡುಗಡೆಯಾಗಿದ್ದರೂ ಕಾಂಕ್ರೀಟ್‌ ಹಾಕಿಲ್ಲ
ಪಡುಬಿದ್ರಿ ಪಡುಹಿತ್ಲು ಜಾರಂದಾಯ ದೈವಸ್ಥಾನ ರಸ್ತೆಯ 300 ಮೀ. ರಸ್ತೆಯ ಕಾಂಕ್ರೀಟೀಕರಣಕ್ಕೆ ಶಾಸಕರ ನಿಧಿಯಿಂದ 5 ಲಕ್ಷ ರೂ. ಹಣ ಬಿಡುಗಡೆಯಾಗಿದ್ದರೂ 150 ಮೀ. ಮಾತ್ರ ಕಾಂಕ್ರೀಟ್‌ ಹಾಕಲಾಗಿದೆ ಎಂಬ ವಿಚಾರ ಗಂಭೀರ ಚರ್ಚೆಯಾಯಿತು. ಮರಳು ಕೊರತೆಯಿಂದ ಹೀಗಾಗಿದೆ ಎಂದು ಗ್ರಾ. ಪಂ. ಸದಸ್ಯ ಕರುಣಾಕರ ಪೂಜಾರಿ ಸಭೆಗೆ ತಿಳಿಸಿದರು. ಈ ವೇಳೆ ಜಿಲ್ಲಾಡಳಿತವು ಸಂಸದರ ಅಥವಾ ಶಾಸಕರ ನಿಧಿಯಿಂದ ಅನುಷ್ಠಾನಗೊಳ್ಳಲಿರುವ ಯೋಜನೆಗಳೂ ಸೇರಿದಂತೆ ಎಲ್ಲ ಮಾಹಿತಿಗಳನ್ನು ಗ್ರಾ. ಪಂ. ಗಳಿಗೆ ರವಾನಿಸಬೇಕು ಎಂಬ ಹಕ್ಕೊತ್ತಾಯದ ನಿರ್ಣಯವನ್ನು ಮಂಡಿಸಲಾಯಿತು.  

ಬಾಕಿ ಬಾಡಿಗೆ ವಸೂಲಿ ಮಾಡಿ 
ಗ್ರಾ. ಪಂ.ನಲ್ಲಿನ ಮಾರುಕಟ್ಟೆ ಅಂಗಡಿ ಕೋಣೆಗಳ ಬಾಡಿಗೆ ಬಾಕಿ ವಿಚಾರದ ಬಗ್ಗೆಯೂ ಚರ್ಚೆ ನಡೆಯಿತು. ಬಾಕಿ ಇರಿಸಿದ ಬಾಡಿಗೆದಾರರನ್ನು ಬೆಂಬಲಿಸುವ ಜನಪ್ರತಿನಿಧಿಗಳು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಳಿಕ ಹೋರಾಟ ನಡೆಸಲಿ. ಪಿಡಿಒ ಕೂಡಲೇ ವಸೂಲಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು. ಗ್ರಾ. ಪಂ. ಅಧ್ಯಕ್ಷೆ ದಮಯಂತಿ ಅಮೀನ್‌ ಸಭಾಧ್ಯಕ್ಷತೆ ವಹಿಸಿದ್ದರು. ಗ್ರಾ. ಪಂ. ಉಪಾಧ್ಯಕ್ಷ ವೈ. ಸುಕುಮಾರ್‌, ಜಿ. ಪಂ. ಸದಸ್ಯ ಶಶಿಕಾಂತ್‌ ಪಡುಬಿದ್ರಿ, ತಾ. ಪಂ. ಸದಸ್ಯರಾದ ನೀತಾ ಗುರುರಾಜ್‌, ದಿನೇಶ್‌ ಕೋಟ್ಯಾನ್‌ ಹಾಗೂ ಪಡುಬಿದ್ರಿ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.ಪಿಡಿಒ ಪಂಚಾಕ್ಷರೀ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಲೆಕ್ಕ ಸಹಾಯಕಿ ರೂಪಲತಾ ವಾರ್ಡ್‌ ಸಭೆಗಳ ವರದಿ ಮಂಡಿಸಿದರು.

ಮಾಹಿತಿ ಶಿಬಿರ ನಡೆಸಿ
ಗ್ರಾಮದಲ್ಲಿ ತೆಂಗು ಮತ್ತು ಬಾಳೆ ಕೃಷಿಗೆ ಕೊಳೆರೋಗ, ಬಿಳಿ ತಲೆ ಕೀಟಬಾಧೆಗಳ ನಿಯಂತ್ರಣ ಬಗ್ಗೆ ಕಾಸರಗೋಡಿನ ಕೇಂದ್ರ ತೆಂಗು ಅಭಿವೃದ್ಧಿ ನಿಗಮದ ಸಹಾಯ ಪಡೆಯಬೇಕು. ಜತೆಗೆ ಮಾಹಿತಿ ಶಿಬಿರ ಆಯೋಜಿಸಬೇಕು ಎಂದು ಗ್ರಾಮಸ್ಥರಾದ ರೋಹಿತಾಕ್ಷ  ಸುವರ್ಣ ಅವರು ತೋಟಗಾರಿಕಾ ಅಧಿಕಾರಿ ಶ್ವೇತಾ ಹಿರೇಮಠ್ ಅವರನ್ನು ಆಗ್ರಹಿಸಿದರು.

Advertisement

‘ಬ್ಲೂ ಫ್ಲ್ಯಾಗ್‌’: ಅಂತಿಮ ರೂಪುರೇಷೆ
ಪಡುಬಿದ್ರಿ ಬೀಚನ್ನು ಬ್ಲೂ ಫ್ಲ್ಯಾಗ್‌ ಸರ್ಟಿಫಿಕೇಶನ್‌ ಅಡಿ 8 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಅಂತಿಮ ರೂಪುರೇಷೆಗಳು ಸಿದ್ಧಗೊಂಡಿವೆ. ಪರಿಸರ ಅಥವಾ ಹಿಂದಿನ ಬೃಹತ್‌ ಯೋಜನೆಗಳಿಂದ ಸ್ಥಳೀಯ ಜನತೆ ಅನುಭವಿಸಿರುವ ಹಿನ್ನಡೆಗಳನ್ನು ಗಮನದಲ್ಲಿರಿಸಿಕೊಂಡು ಸ್ಥಳೀಯರಿಗೆ ಯಾವುದೇ ತೊಂದರೆಗಳಾಗದಂತೆ ಈ ಯೋಜನೆಯನ್ನು ಮುಂದಿನ ದಿನಗಳಲ್ಲಿ  ಅನುಷ್ಠಾನಿಸಲಾಗುವುದು.
– ಲಾಲಾಜಿ ಮೆಂಡನ್‌, ಕಾಪು ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next