ಹನೂರು: ಕೊಳ್ಳೇಗಾಲದಿಂದ ಹನೂರಿನವರೆಗೆ ಸುಸಜ್ಜಿತ ಕೆ-ಶಿಪ್ ರಸ್ತೆ ನಿರ್ಮಾಣವಾಗುತ್ತಿದ್ದು ಹನೂರು ಮಹದೇಶ್ವರಬೆಟ್ಟ -ಪಾಲಾರ್ ರಸ್ತೆ ಅಭಿವೃದ್ಧಿಗೆ
135 ಕೋಟಿ ರೂ. ಅನುದಾನ ನೀಡಲಾಗಿದ್ದು ಟೆಂಡರ್ ಕರೆಯಲು ಕ್ರಮ ವಹಿಸಲಾಗಿದೆ ಎಂದು ವಸತಿ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿದರು.
ತಾಲೂಕಿನ ರಾಮಾಪುರ ಗ್ರಾಮದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ರಾಮಾಪುರ- ಕೌದಳ್ಳಿ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರತಿನಿತ್ಯ ತಾಲೂಕು, ಜಿಲ್ಲೆ, ರಾಜ್ಯ ಮಾತ್ರವಲ್ಲದೆ ದೇಶದ ನಾನಾ ಮೂಲಗಳಿಂದ ಸಹ ಸ್ರಾರು ಭಕ್ತಾದಿಗಳು ಆಗಮಿಸುತ್ತಾರೆ. ಅವರಿಗೆ ಸುಸಜ್ಜಿತ ರಸ್ತೆ ಮತ್ತು ಅಗತ್ಯ ಮೂಲಸೌಕರ್ಯ ಒದಗಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಶಾಸಕ ನರೇಂದ್ರ ಅವರು ಪ್ರಾಮಾಣಿಕವಾಗಿ ಸೇವೆ ಮಾಡುತ್ತಾ ಬಂದಿದ್ದು ರಾಮಾಪುರ-ಕೌದಳ್ಳಿ ರಸ್ತೆ ಅಭಿವೃದ್ಧಿಗೆ 10 ಕೋಟಿ ಅನುದಾನ ನೀಡಿದ್ದಾರೆ ಎಂದರು.
100 ಬೆಡ್ ಆಸ್ಪತ್ರೆ, ಡಯಾಲಿಸಿಸ್ ಕೇಂದ್ರ:ಹನೂರು ಪಟ್ಟಣದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅತ್ಯಾಧುನಿಕವಾಗಿ ನವೀಕರಣಗೊಳಿಸಿ 100 ಬೆಡ್‌ಗಳ ಆಸ್ಪತ್ರೆಯನ್ನಾಗಿ ಮೇಲ್ದಜೆಗೇರಿಸಲು ಮತ್ತು ಡಯಾಲಿಸಿಸ್‌ಗಾಗಿ 100 ಕಿ.ಮೀ ದೂರ ತೆರಳಬೇಕಿರುವ ಪರಿಸ್ಥಿತಿಯ ಬಗ್ಗೆ ಶಾಸಕ ನರೇಂದ್ರ ಜೊತೆಗೂಡಿ ಆರೋಗ್ಯ ಸಚಿವ ಸುಧಾಕರ್ ಜೊತೆ ಚರ್ಚಿಸಿದ್ದು ಶೀಘ್ರವಾಗಿ ಡಯಾಲಿಸಿಸ್ ಕೇಂದ್ರ ತೆರೆಯಲು ಮತ್ತು ಆಸ್ಪತ್ರೆ ಮೇಲ್ದರ್ಜೆಗೇರಿಸಲು ಕ್ರಮವಹಿಸಲಾಗಿದೆ ಎಂದರು.
ಗಡಿಯವರೆಗೆ ರಸ್ತೆ, ಎಲ್ಲಾ ಕೆರೆಗಳಿಗೂ ನೀರು: ಕೊಳ್ಳೇಗಾಲದಿಂದ ಹನೂರಿನವರೆಗೆ ಕೆ-ಶಿಪ್ ಯೋಜನೆಯಡಿ ರಸ್ತೆ ನಿರ್ಮಾಣವಾಗುತ್ತಿದ್ದು ಅಲ್ಲಿಂದ ಮುಂದೆ ಮಹದೇಶ್ವರ ಬೆಟ್ಟ ಮೂಲಕ ಪಾಲಾರ್ ಗಡಿವರೆಗೆ ರಸ್ತೆ ಅಭಿವೃದ್ಧಿಗಾಗಿ 135 ಕೋಟಿ ಅನುದಾನ ಮಂಜೂರಾಗಿದೆ. ಈ ಕಾಮಗಾರಿಯನ್ನು ಕೆಆರ್‌ಐಡಿಎಲ್ ಮೂಲಕ ನಿರ್ವಹಿಸಲು ತೀರ್ಮಾನಿಸಲಾಗಿತ್ತು. ಬಳಿಕ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿದ್ದು ಟೆಂಡರ್ ಪ್ರಕ್ರಿಯೆ ನಡೆಸಿ ಪ್ರತಿಷ್ಠಿತ ಗುತ್ತಿಗೆದಾರರ ಮೂಲಕ ಕಾಮಗಾರಿ ಮಾಡಲು ಅಗತ್ಯ ಕ್ರಮವಹಿಸಲಾಗಿದೆ ಎಂದರು.
500 ಕೋಟಿ ಆದರೂ ಪರವಾಗಿಲ್ಲ: ಚಾಮರಾಜನಗರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲೂ ನದಿಮೂಲದಿಂದ ನೀರು ತುಂಬಿಸಲು ಬಾಕಿ ಉಳಿದಿರುವ ಕೆರೆಗಳನ್ನು ಗುರುತಿಸಲಾಗಿದ್ದು, ಆ ಕೆರೆಗಳಿಗೆ ಶಾಶ್ವತ ಯೋಜನೆ ರೂಪಿಸಲು ಜಲಸಂಪನ್ಮೂಲ ಸಚಿವರ ಜೊತೆ ಚರ್ಚಿಸಲಾಗಿದ್ದು, ಅದಕ್ಕೆ 500 ಕೋಟಿ ಆದರೂ ಪರವಾಗಿಲ್ಲ ಯೋಜನೆಯನ್ನು ಜಾರಿಗಳಿಸಿ ಮುಖ್ಯಮಂತ್ರಿಗಳನ್ನು ಕರೆತಂದು ಶಂಕುಸ್ಥಾಪನೆ ನೆರವೇರಿಸುತ್ತೇನೆ ಎಂದು ಘೋಷಿಸಿದರು. ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ತಹಸೀಲ್ದಾರ್ ನಾಗರಾಜು, ಡಿವೈಎಸ್ಪಿ ನಾಗರಾಜು, ಲೋಕೋಪಯೋಗಿ ಇಲಾಖೆಯ ಎಸ್‌ಇ ರಾಥೋಡ್, ಇಇ ವಿನಯ್, ಎಇಇ ಸದಾನಂದಮೂರ್ತಿ, ಜೆಇ ಮಹೇಶ್, ಗ್ರಾ.ಪಂ ಅಧ್ಯಕ್ಷೆ ದಾಕ್ಷಾಯಿಣಿ, ಉಪಾಧ್ಯಕ್ಷ ಮುರುಗೇಶ್, ಜಿ.ಪಂ ಮಾಜಿ ಉಪಾಧ್ಯಕ್ಷ ಬಸವರಾಜು, ಬಿಜೆಪಿ ಜಿಲ್ಲಾ ಸಂಯೋಜಕ ವೆಂಕಟೇಶ್ ಇತರರು ಇದ್ದರು.